ADVERTISEMENT

ಮಡಿಕೇರಿ | ಕಾಳುಮೆಣಸು ಕಳವು: ಐವರು ಆರೋಪಿಗಳ ಬಂಧನ

24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸಿದ ಗೋಣಿಕೊಪ್ಪಲು ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಮೇ 2024, 16:24 IST
Last Updated 19 ಮೇ 2024, 16:24 IST
   

ಮಡಿಕೇರಿ: ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಅರವತ್ತೋಕ್ಲು ಗ್ರಾಮದ ನಿವಾಸಿ ಎಂ.ಸುಬ್ಬಯ್ಯ ಅವರ ಮನೆಯ ಸಂಗ್ರಹಣಾ ಕೊಠಡಿಯಲ್ಲಿ ಇಟ್ಟಿದ್ದ 450 ಕೆ.ಜಿ ಕಾಳುಮೆಣಸನ್ನು ಕಳವು ಮಾಡಿದ ಆರೋಪದ ಮೇರೆಗೆ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 400 ಕೆ.ಜಿ ಕಾಳುಮೆಣಸು ಹಾಗೂ ಕೃತ್ಯಕ್ಕೆ ಬಳಸಿದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಅರವತ್ತೋಕ್ಲು ಗ್ರಾಮದ ನಿವಾಸಿಗಳಾದ ಸುಬ್ರಮಣಿ (24), ಮಂಜು (25), ಬೆಳ್ಳಿ (36), ಕರ್ಪ (49), ಕುಶಾಲ (19) ಬಂಧಿತರು. ಸುಬ್ಬಯ್ಯ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುರುವಾರ ಸಂಗ್ರಹಣಾ ಕೊಠಡಿಯ ಬಾಗಿಲು ಮುರಿದು ಕಾಳುಮೆಣಸನ್ನು ಕಳವು ಮಾಡಲಾಗಿತ್ತು. ದೂರನ್ನು ಪಡೆದ ಕೇವಲ 24 ಗಂಟೆಗಳಲ್ಲೇ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಮೂಲಕ ಪೊಲೀಸರು ಚಾಣಾಕ್ಷತೆ ಮೆರೆದಿದ್ದಾರೆ.

ಸುಳಿವು ನೀಡಿದ ಕಾಳುಮೆಣಸು!

ಕಳವು ಪ್ರಕರಣ ಬೇಧಿಸುವಲ್ಲಿ ಕಾಳು ಮೆಣಸು ಪೊಲೀಸರಿಗೆ ನೆರವಾಗಿದೆ. ಕಳವಾದ ಸಂಗ್ರಹಣಾ ಕೊಠಡಿಯಿಂದ ಕಾಳು ಮೆಣಸು ಚೆಲ್ಲಿರುವ ಮಾರ್ಗದಲ್ಲೇ ಪೊಲೀಸರು ಮುನ್ನಡೆದರು. ಆಗ ಅವರು ಕಳವು ಮಾಡಿದ್ದವರ ಮನೆಯ ಸಮೀಪಕ್ಕೆ ಹೋದರು. ಅಲ್ಲಿ ವಿಚಾರಣೆ ನಡೆಸಿದಾಗ ಕಳವಾದ ಆರೋಪಿಗಳು ಪತ್ತೆಯಾದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್‌.ಮೋಹನ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವರಾಜ ಮುಧೋಳ್, ಪಿಎಸ್‌ಐಗಳಾದ ರೂಪಾದೇವಿ ಬಿರಾದಾರ್, ಗೌರಿಶಂಕರ ನೇತೃತ್ವದ ತಂಡವು ಈ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.