ADVERTISEMENT

ಗೋಣಿಕೊಪ್ಪಲು: ಕ್ಯಾಮೆರಾ ಕಣ್ಣಿಗೆ ಬೀಳದ ಚಾಣಾಕ್ಷ ಹುಲಿಗಳು!

ದಕ್ಷಿಣ ಕೊಡಗಿನಲ್ಲಿ ಈಗ ಹುಲಿಯದ್ದೇ ಆತಂಕ, ಹಲವೆಡೆ ಹರಿದಾಡುತ್ತಿದೆ ಪುರಾವೆ ಇಲ್ಲದ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:24 IST
Last Updated 22 ಅಕ್ಟೋಬರ್ 2024, 6:24 IST
<div class="paragraphs"><p> ಹುಲಿಗಳು</p></div>

ಹುಲಿಗಳು

   

ಸಾಂದರ್ಭಿಕ ಚಿತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಹುಲಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಬೆನ್ನಲ್ಲೇ ಗೋಣಿಕೊಪ್ಪಲಿನ ಕೂಗಳತೆ ದೂರದಲ್ಲೇ ಸೋಮವಾರ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳಿಗೆ ಹುಲಿ ಓಡಾಟದ ಯಾವುದೇ ಪುರಾವೆ ಲಭ್ಯವಾಗಿಲ್ಲ.

ADVERTISEMENT

ಪಟ್ಟಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಸೀಗೆತೋಡು ಮತ್ತು ಚೆನ್ನಂಗೊಲ್ಲಿ ಭಾಗದಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ಹುಲಿಯೊಂದು ಓಡಾಡುತ್ತಿತ್ತು. ನಸುಕಿನ ವೇಳೆ 4.30 ರ ವೇಳೆಯಲ್ಲಿ ಹುಲಿ ಗೋಣಿಕೊಪ್ಪಲು ಹುಣಸೂರು ಹೆದ್ದಾರಿ ದಾಟಿಕೊಂಡು ಕಾಫಿ ತೋಟದೊಳಗೆ ನುಗ್ಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಸ್ಥಳದಲ್ಲಿ ಹುಡುಕಾಟ ನಡೆಸಿದರೂ ಹುಲಿಯನ್ನು ನಿಖರವಾಗಿ ಕಂಡವರಾಗಲಿ, ಹುಲಿ ಓಡಾಡಿದ ಹೆಜ್ಜೆ ಗುರುತುಗಳಾಗಲಿ ಪತ್ತೆಯಾಗಲಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.

ಕ್ಯಾಮೆರಾದಲ್ಲಿ ಸೆರೆಯಾಗದ ಹುಲಿ!: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಗಳನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯಲು ಅಥವಾ ಕಾಡಿಗಟ್ಟಲು ಕಳೆದ ಕೆಲವು ದಿನಗಳಿಂದ ಹರಸಾಹಸಪಡುತ್ತಿದ್ದಾರೆ. ಒಂದು ಕಡೆ ಕಾರ್ಯಾಚರಣೆ ನಡೆಸಿದರೆ ಮತ್ತೊಂದು ಕಡೆ ಹುಲಿ ದಾಳಿ ನಡೆದಿರುತ್ತದೆ.

ಬಿರುನಾಣಿ ಬಳಿಯ ವೆಸ್ಟ್ ನೆಮ್ಮಲೆಯಲ್ಲಿ ಹೆಚ್ಚಿದ್ದ ಹುಲಿ ದಾಳಿಯನ್ನು ಎದುರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಂಬಿಂಗ್ ನಡೆಸಿದ್ದರು. ಈ ವೇಳೆಯಲ್ಲಿ ಹುಲಿ ಕಾರ್ಯಾಚರಣೆ ತಂಡಕ್ಕೆ ಕಾಣಿಸಿಕೊಳ್ಳಲಿಲ್ಲ.

ಇದೇ ಸಂದರ್ಭದಲ್ಲಿ 40 ಕಿಲೋ ಮೀಟರ್ ದೂರದ ಬಾಳೆಲೆ, ನಿಟ್ಟೂರು ಭಾಗದಲ್ಲಿ ಹುಲಿ ದಾಳಿ ನಡೆಯಿತು. ಇದರಿಂದಾಗಿ ಅರಣ್ಯ ಇಲಾಖೆಯವರು ಕೂಂಬಿಂಗ್ ಕಾರ್ಯಾಚರಣೆಯನ್ನು ವೆಸ್ ನೆಮ್ಮಲೆ ಭಾಗದಲ್ಲಿ ನಿಲ್ಲಿಸಿ ಬಾಳೆಲೆ ಭಾಗಕ್ಕೆ ವರ್ಗಾಯಿಸಿದರು. ಬಾಳೆಲೆ ಭಾಗದಲ್ಲಿಯೂ 3 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ, ಹುಲಿ ಸುಳಿವು ದೊರೆತಿಲ್ಲ.

ಹುಲಿ ಚಿತ್ರ ಸೆರೆಯಾಗದೇ ಹೋದರೆ ಅದನ್ನು ಸೆರೆ ಹಿಡಿಯಲು ಕೋರಿ ಅನುಮತಿ ಪಡೆಯುವುದು ಕಷ್ಟ. ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾದರೂ, 160ಕ್ಕೂ ಅಧಿಕ ಮಂದಿಯ ತಂಡ ಶೋಧ ಕಾರ್ಯ ನಡೆಸಿದರೂ, ಯಾರೊಬ್ಬರ ಕಣ್ಣಿಗಾಗಲಿ, ಇರಿಸಿರುವ ಕ್ಯಾಮೆರಾಕ್ಕಾಗಲಿ ಹುಲಿ ಚಿತ್ರ ಸೆರೆಯಾಗಿಲ್ಲ.

ಬ್ರಹ್ಮಗಿರಿಯಿಂದ ಹಾಗೂ ನಾಗರಹೊಳೆಯಿಂದ ಹುಲಿಗಳು ಬಂದು ಹೋಗುತ್ತಿರಬಹುದು. ಆದರೆ, ಎಲ್ಲೂ ಯಾವ ಭಾಗದಲ್ಲೂ ಒಂದೇ ಸ್ಥಳದಲ್ಲಿ ಅವು ನೆಲೆ ನಿಂತಿಲ್ಲ. ಇದರಿಂದ ಅವುಗಳ ಚಿತ್ರ ಕ್ಯಾಮೆರಾಗೆ ಸಿಗುತ್ತಿಲ್ಲ, ಕಾರ್ಯಾಚರಣೆ ತಂಡದ ಕಣ್ಣಿಗೂ ಬೀಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಅರಣ್ಯಾಧಿಕಾರಿಗಳಿಗೆ ಸಲಹೆ ನೀಡುತ್ತಾ ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮೇರಿಯಂಡ ಸಂಕೇತ್ ಪೂವಯ್ಯ, ‘ಹುಲಿ ದಾಳಿ ಮತ್ತು ಆನೆದಾಳಿಯಿಂದ ಬಡ ಕೂಲಿ ಕಾರ್ಮಿಕರ ಬದುಕಿಗೆ ಕಷ್ಟವಾಗಿದೆ. ವನ್ಯಜೀವಿಗಳಿಗೆ ಹೆದರಿ ಕುಳಿತರೆ ಹೊಟ್ಟೆಪಾಡು ನಡೆಯುವುದಿಲ್ಲ. ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ ವನ್ಯಜೀವಿ ನಿಯಂತ್ರಣದ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ’ ಎಂದರು.

ಮತ್ತಿಗೋಡು ಸಾಕಾನೆ ಶಿಬಿರದ ವಲಯ ಅರಣ್ಯಾಧಿಕಾರಿ ದೇವರಾಜು, ಕಾರ್ಯಾಚರಣೆ ನಡೆಯುತ್ತಿರುವುದರಿಂದ ದಾಳಿಕೋರ ಹುಲಿ ಅರಣ್ಯಕ್ಕೆ ತೆರಳಿರುವ ಶಂಕೆ ಇದೆ. ಅವುಗಳ ಸುಳಿವು ದೊರೆತ ಕಡೆಯಲೆಲ್ಲ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.