ಮಡಿಕೇರಿ: ನಗರದಲ್ಲಿ ಎಲ್ಲಿ ನೋಡಿದರೂ ಶನಿವಾರ ಪೊಲೀಸರು, ಜತೆಗೆ ನಿಷೇಧಾಜ್ಞೆ. ನಿಷೇಧಾಜ್ಞೆ ಉಲ್ಲಂಘಿಸಿ ಓಂಕಾರೇಶ್ವರ ದೇವಾಸ್ಥಾನದಿಂದ ನಗರದ ಕೋಟೆ ಆವರಣಕ್ಕೆ ನುಗ್ಗಲು ಯತ್ನಿಸಿದ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಶುಕ್ರವಾರ ಬಂಧಿಸಿ, ಬಿಡುಗಡೆ ಮಾಡಲಾಯಿತು.
ಓಂಕಾರೇಶ್ವರ ದೇವಸ್ಥಾನದ ಸುತ್ತ ಸರ್ಪಗಾವಲು ಹಾಕಿದ್ದ ಪೊಲೀಸರು, ಶಾಂತಿ ಕದಡಲು ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿದ್ದರು.
ಬೆಳಿಗ್ಗೆ 8.30ರ ಸುಮಾರಿಗೆ ನಗರದ ಓಂಕಾರೇಶ್ವರ ದೇಗುಲದಲ್ಲಿ 2015ರಲ್ಲಿ ಮೃತಪಟ್ಟಿದ್ದ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, 8.45ರ ಸುಮಾರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು ದೇವಸ್ಥಾನದಿಂದ ಗುಂಪಾಗಿ ಹಳೆಯ ಕೋಟೆಯ ಆವರಣದತ್ತ ನುಗ್ಗಲು ಪ್ರಯತ್ನಿಸಿದರು. ಅಲ್ಲಿದ್ದ ಪೊಲೀಸರು ಅವರನ್ನು ತಡೆದು ಬಂಧಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ, ಮುಖಂಡರಾದ ಮುಖರಾದ ಬಿ.ಕೆ. ಜಗದೀಶ್, ವಿಶ್ವ ಹಿಂದೂ ಪರಿಷತ್ ಸಂಚಾಲಕ ಡಿ. ನರಸಿಂಹ, ಬಜರಂಗದಳದ ಸಂಚಾಲಕ ಅಜಿತ್ ಕುಮಾರ್, ಚೇತನ್, ಅರುಣ್ ಕುಮಾರ್, ಧನಂಜಯ್, ತಿರುಪತಿ, ಪ್ರಸನ್ನಭಟ್, ವಿನಯ್ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಸ್ಥಳದಲ್ಲಿ ದಕ್ಷಿಣ ವಲಯದ ಐಜಿಪಿ ಶರತ್ ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು.
ಕೊಡಗಿನಲ್ಲಿ ಬಂದ್ ಯಶಸ್ವಿ: ಕೊಡಗು ಜಿಲ್ಲೆಯಲ್ಲಿ ಕರೆ ನೀಡಲಾಗಿದ್ದ ಬಂದ್ ಯಶಸ್ವಿ ಆಯಿತು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಬಂದ್ ಆಗಿದ್ದವು. ಆಟೊ ಸಂಚಾರವೂ ವಿರಳವಾಗಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಸಾರ್ವಜನಿಕರ ವಾಹನಗಳು ಎಂದಿನಂತೆಯೇ ಸಂಚರಿಸಿದವು.
ನಗರದ ಮಹಾದೇವಪೇಟೆಯಲ್ಲಿ ಹಣ್ಣು, ಹಂಪಲು, ಮೀನು ಮಾರಾಟ ಮಳಿಗೆಗಳು ಬಾಗಿಲು ತೆರೆದಿದ್ದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ಮೆಡಿಕಲ್ ಶಾಪ್‌ಗಳ ಬಾಗಿಲು ತೆರೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.