ADVERTISEMENT

ಕೊಡಗು | ತಲಕಾವೇರಿಯಲ್ಲಿ ತೀರ್ಥೋದ್ಭವ ಸಂಭ್ರಮ

ಒಂದು ತಿಂಗಳ ಕಾಲ ನಡೆಯಲಿದೆ ಕಾವೇರಿ ಸಂಕ್ರಮಣ ಜಾತ್ರೆ

ಕೆ.ಎಸ್.ಗಿರೀಶ್
Published 17 ಅಕ್ಟೋಬರ್ 2024, 23:33 IST
Last Updated 17 ಅಕ್ಟೋಬರ್ 2024, 23:33 IST
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುರುವಾರ ಬೆಳಿಗ್ಗೆ ತೀರ್ಥವನ್ನು ತುಂಬಿಸಿಕೊಳ್ಳಲು ಕೊಡಗಳನ್ನು ಹಿಡಿದ ಭಕ್ತವೃಂದ ಕಲ್ಯಾಣಿಗೆ ಧುಮುಕಿ ಬ್ರಹ್ಮಕುಂಡಿಕೆಯತ್ತ ತೆರಳಿತು       ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುರುವಾರ ಬೆಳಿಗ್ಗೆ ತೀರ್ಥವನ್ನು ತುಂಬಿಸಿಕೊಳ್ಳಲು ಕೊಡಗಳನ್ನು ಹಿಡಿದ ಭಕ್ತವೃಂದ ಕಲ್ಯಾಣಿಗೆ ಧುಮುಕಿ ಬ್ರಹ್ಮಕುಂಡಿಕೆಯತ್ತ ತೆರಳಿತು       ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ಕೊಡಗು ಜಿಲ್ಲೆಯ ಬ್ರಹ್ಮಗಿರಿ ಶ್ರೇಣಿಯಲ್ಲಿರುವ ತಲಕಾವೇರಿಯಲ್ಲಿ ದಟ್ಟವಾಗಿ ಆವರಿಸಿದ್ದ ಮಂಜಿನರಾಶಿಯ ನಡುವೆ ಗುರುವಾರ ಬೆಳಿಗ್ಗೆ 7.40ಕ್ಕೆ ನಡೆದ ಕಾವೇರಿ ಪವಿತ್ರ ತೀರ್ಥೋದ್ಭವ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ತೀರ್ಥೋದ್ಭವವಾಯಿತೆಂದು ಘೋಷಿಸಿದ ಅರ್ಚಕ ವೃಂದ ತೀರ್ಥವನ್ನು ಸಿಂಪಡಿಸುತ್ತಿದ್ದಂತೆ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದವು. ಲಕ್ಷಾಂತರ ಮಂದಿಯ ಜೀವನಾಡಿ ಎನಿಸಿರುವ ಕಾವೇರಿ ನದಿಯ ಈ ಅಪರೂಪದ ಗಳಿಗೆಗಾಗಿ ಬುಧವಾರ ರಾತ್ರಿಯಿಂದಲೇ ಥರಗುಟ್ಟುವ ಚಳಿಯ ಮಧ್ಯೆ ಕಾಯುತ್ತ ಕುಳಿತಿದ್ದ ಅಪಾರ ಭಕ್ತವೃಂದ ಪುಳಕಗೊಂಡಿತು. ಒಂದು ತಿಂಗಳ ಕಾಲ ನಡೆಯುವ ಕಾವೇರಿ ಸಂಕ್ರಮಣದ ಜಾತ್ರೆಗೂ ಈ ಮೂಲಕ ಚಾಲನೆ ದೊರಕಿತು.

ಇದಕ್ಕೂ ಮುನ್ನ, ಕೊಡಗಳು, ಕ್ಯಾನ್‌ಗಳನ್ನು ಹಿಡಿದು ತೀರ್ಥ ತುಂಬಿಸಿಕೊಳ್ಳಲು ಕಲ್ಯಾಣಿಗೆ ಧುಮುಕಿದ ಭಕ್ತವೃಂದ, ‘ಉಕ್ಕಿ ಬಾ ತಾಯಿ ಉಕ್ಕಿ ಬಾ’ ಎಂದು ಘೋಷಣೆ ಕೂಗಿದರು.

ADVERTISEMENT

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು, ಸಾಂಪ್ರದಾಯಿಕ ದಿರಿಸು ತೊಟ್ಟು, ಬುಧವಾರ ತಡರಾತ್ರಿಯಿಂದಲೇ ಜಿನುಗು ಮಳೆಯ ನಡುವೆ, ಭಾಗಮಂಡಲದಿಂದ ತಲಕಾವೇರಿಯವರೆಗೆ, ಕಾವೇರಿ ಮಾತೆಯ ಹಾಡುಗಳನ್ನು ಹಾಡುತ್ತಾ ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿದರು. ಕೊರೆಯುವ ಚಳಿಯ ನಡುವೆ ಬೆಟ್ಟ ಹತ್ತಿ ಖುಷಿಪಟ್ಟರು.

‘ಪೂರ್ವ ನಿಗದಿಯಂತೆ 7.40ರ ಬದಲಿಗೆ 7.41ಕ್ಕೆ ತೀರ್ಥೋದ್ಭವವಾಯಿತು’ ಎಂದು ಕೆಲವು ಭಕ್ತರು ಪ್ರತಿಪಾದಿಸಿದರು. ಈ ಕುರಿತು ಮಾತನಾಡಿದ ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ‘ಶಾಸ್ತ್ರೋಕ್ತವಾಗಿ ಈ ಹಿಂದೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿಯೇ ತೀರ್ಥೋದ್ಭವವಾಗಿದೆ. ಎಲ್ಲವೂ ಒಳ್ಳೆಯದಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ.ಮಂತರ್ ಗೌಡ, ಸುಜಾ ಕುಶಾಲಪ್ಪ ಭಾಗವಹಿಸಿದ್ದರು.

ಭಾಗಮಂಡಲದಿಂದ ತಲಕಾವೇರಿಯವರೆಗೆ ನಸುಕಿನಲ್ಲಿ ಉಂಟಾದ ಸಂಚಾರದಟ್ಟಣೆಯಿಂದ ಭಕ್ತರು ಪರದಾಡಿದರು. ಪೊಲೀಸರೂ ವಾಹನ ಇಳಿದು ಭಕ್ತರ ನಡುವೆ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ ದೇಗುಲ ತಲುಪಿದರು.

ತಲಕಾವೇರಿಯ ಬ್ರಹ್ಮಕುಂಡಿಕೆಯ ಬಳಿ ಗುರುವಾರ ಬೆಳಿಗ್ಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಶಾಸಕ ಡಾ.ಮಂತರ್‌ಗೌಡ ಜಿಲ್ಲಾಧಿಕಾರಿ ವೆಂಕಟ್ ರಾಜಾ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಕಾದು ನಿಂತಿದ್ದರು      ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.