ADVERTISEMENT

ಕೊಡಗಿನಲ್ಲಿ ಕಕ್ಕಡ ಸಂಭ್ರಮ: ಎಲ್ಲೆಡೆ ಆಟಿಸೊಪ್ಪಿನ ಘಮಲು

ಸಿ.ಎಸ್.ಸುರೇಶ್
Published 3 ಆಗಸ್ಟ್ 2024, 8:24 IST
Last Updated 3 ಆಗಸ್ಟ್ 2024, 8:24 IST
ಮದ್ದುಸೊಪ್ಪಿನಿಂಡ ತಯಾರಿಸಲಾದ ವಿವಿಧ ತಿನಿಸುಗಳು.
ಮದ್ದುಸೊಪ್ಪಿನಿಂಡ ತಯಾರಿಸಲಾದ ವಿವಿಧ ತಿನಿಸುಗಳು.   

ನಾಪೋಕ್ಲು: ಧಾನ್ಯಗಳ, ಹಣ್ಣುಗಳ, ತರಕಾರಿಗಳ ರುಚಿಕರ ಪಾಯಸ ಗೊತ್ತು. ಸೊಪ್ಪಿನ ಪಾಯಸ ಗೊತ್ತೇ? ಹೌದು. ಕೊಡಗಿನಲ್ಲಿ ಇಂದು ಜುಲೈ 3ರಂದು ಮನೆಮನೆಗಳಲ್ಲಿ ಸೊಪ್ಪಿನ ಪಾಯಸದ ಘಮಲು ಪಸರಿಸುತ್ತದೆ. ಇದು ಆಟಿ ಸೊ‍ಪ್ಪಿನ ಅಥವಾ ಮದ್ದುಸೊಪ್ಪಿನ ಪಾಯಸ. ರುಚಿಕರ ಮಾತ್ರವಲ್ಲ. ರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಜಿಲ್ಲೆಯ ಮಂದಿಯದ್ದು. ಅಂತೆಯೇ ಆಟಿಸೊಪ್ಪನ್ನು ಬಳಸಿ ಅಕ್ಕಿ ಇಲ್ಲವೇ ರವೆಯಿಂದ ಪಾಯಸ ತಯಾರಿಸಿ ಸವಿದು ಸಂಭ್ರಮಿಸುತ್ತಾರೆ ಇಲ್ಲಿನ ಮಂದಿ.

ಕೊಡಗಿನಲ್ಲಿ ಕಕ್ಕಡ ತಿಂಗಳಿನಲ್ಲಿ ಕಕ್ಕಡ 18ರ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಕಕ್ಕಡ 18 ಹಬ್ಬದ ಆಚರಣೆಯೆಂದರೆ ಅದು ಆಟಿಸೊಪ್ಪಿನ ಬಳಕೆಯ ಹಬ್ಬ. ಕಕ್ಕಡ ತಿಂಗಳ 18ನೇ ದಿನಕ್ಕೆ ಆಟಿ ಸೊಪ್ಪಿನಲ್ಲಿ (ಮಧುಬನ) 18 ಔಷಧೀಯ ಗುಣಗಳು ಸೇರಲಿದ್ದು ಅದನ್ನು ಹಬ್ಬದಂದು ವಿಶೇಷವಾಗಿ ಬಳಸಲಾಗುವುದು. ಕಕ್ಕಡ ತಿಂಗಳಲ್ಲಿ ಶರೀರ ಶೀತದಿಂದ ಕೂಡಿರುತ್ತದೆ. ಅದನ್ನು ನಿವಾರಿಸಲು ಆಟಿ ಸೊಪ್ಪಿನ ಪಾಯಸದ ಸೇವನೆಯನ್ನು ಹಿರಿಯರು ಹಿಂದಿನಿಂದ ಮಾಡುತ್ತಾ ಬಂದಿದ್ದಾರೆ. ದಿನದ ಮಹತ್ವ ಸಾರುವ ಆಟಿ 18ನ್ನು ಈಚೆಗೆ ವಿವಿಧ ಜನಾಂಗದವರಿಂದ ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.

ಆಟಿ ಸೊಪ್ಪು ಔಷದೀಯ ಗುಣಗಳನ್ನು ಹೊಂದಿದ ಸೊಪ್ಪು. ಇದನ್ನು ಆರಿಸಿ ತಂದು ಬೇಯಿಸಿ ಅದರ ರಸವನ್ನು ತೆಗೆದು ಅದರಲ್ಲಿ ಪಾಯಸ ತಯಾರಿಸುತ್ತಾರೆ. ಇದು ಕಂದು ಬಣ್ಣದಿಂದ ಕೂಡಿರುತ್ತದೆ. ಹಿಂದಿನಿಂದಲೂ ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಪಾಯಸ ತಯಾರಿಸಿ ಸೇವಿಸುತ್ತಾರೆ.

ADVERTISEMENT

ಈಚಿನ ದಿನಗಳಲ್ಲಿ ಆಟಿಸೊಪ್ಪಿನ ಬಳಕೆಯಲ್ಲಿ ವೈವಿಧ್ಯತೆ ಕಾಣಿಸಿಕೊಂಡಿದೆ. ಕೇವಲ ಪಾಯಸ ಮಾತ್ರವಲ್ಲ, ಮದ್ದುಸೊಪ್ಪಿನ ಕೇಸರಿಭಾತ್, ಹಲ್ವ, ಕಡುಂಬುಟ್, ಜೆಲ್ಲಿ. ಹೀಗೆ ಬಗೆಬಗೆಯ ತಿನಿಸು ವೈವಿಧ್ಯಗಳನ್ನು ತಯಾರಿಸಿ ಬಂಧುಬಳಗದವರ ಜೊತೆಯಲ್ಲಿ ಸೇವಿಸುವ ಪರಿಪಾಠ ಹೆಚ್ಚುತ್ತಿದೆ. ಅಲ್ಲಲ್ಲಿ ಜನಾಂಗದ ಮಂದಿ ಒಗ್ಗೂಡಿ ಆಟಿಸೊಪ್ಪಿನ ತಿನಿಸುಗಳ ಪ್ರದರ್ಶನ ಮಾಡುತ್ತಾರೆ. ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಮನೋರಂಜನಾ ಕಾರ್ಯಕ್ರಮಗಳೂ ಜರುಗುತ್ತವೆ. ಹೀಗೆ ಜನಪದೀಯ ಆಚರಣೆಯಾಗಿ ರೂಢಿಗೆ ಬಂದ ಕಕ್ಕಡ-18 ರ ಆಚರಣೆ ವೈವಿಧ್ಯಮಯ ಸ್ವರೂಪ ಪಡೆದುಕೊಂಡಿದ್ದು ಜನಾಂಗದವರ ಒಗ್ಗೂಡುವಿಕೆಗೆ,ಭಾಂದವ್ಯದ ಬೆಸುಗೆಗೆ ಕಾರಣವಾಗಿದೆ.

ಆಟಿಸೊಪ್ಪಿನ .ತಿನಿಸು
ಮರಗೆಸಕ್ಕೆ ಇನ್ನಿಲ್ಲದ ಬೇಡಿಕೆ
ಲೋಕೇಶ್.ಡಿ.ಪಿ ಸೋಮವಾರಪೇಟೆ: ಕೊಡಗಿನಲ್ಲಿ ಅತ್ಯಂತ ಪ್ರಮುಖವಾದದ್ದು ಕಕ್ಕಡ ಮಾಸ. ಈ ಮಾಸದ 18ನೇ ದಿನ ಔಷಧಯುಕ್ತ ಆಹಾರ ಸೇವನೆ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ. ಅದ‌ನ್ನು ಚಾಚೂತಪ್ಪದ ಪಾಲನೆ ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತಿದೆ. ಆಟಿ ಸೊಪ್ಪ ಅಥವಾ ಮಧುಬನ ಹೇಗೆ ಔಷಧೀಯ ಗುಣವುಳ್ಳದ್ದೆಂದು ಹೆಸರಾಗಿದೆಯೋ ಹಾಗೆಯೇ ಮರಗೆಸವೂ ಒಂದು. ದಕ್ಷಿಣ ಕನ್ನಡದಲ್ಲಿ ಮರಗೆಸಕ್ಕೆ ಇನ್ನಿಲ್ಲದ ಬೇಡಿಕೆಯಿದ್ದು ಈ ಭಾಗದಲ್ಲಿ ಮೆರಗೆಸದಿಂದ ಪತ್ರೊಡೆ ಮಾಡಿ ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಲ್ಲಿನ ಜನರ ಬೇಡಿಕೆಗನುಗುಣವಾಗಿ ಸ್ಥಳೀಯವಾಗಿ ಸಿಗದ ಕಾರಣ ಮಲೆನಾಡಿನ ಭಾಗಗಳಲ್ಲಿ ಮರಗಳಲ್ಲಿ ಬೆಳೆದಿರುವ ಮರಗೆಸವನ್ನು ಹುಡುಕಿ ಕೊಂಡೋಯ್ದು ಅಲ್ಲಿನ ವ್ಯಾಪಾರಿಗಳು ಮಾರಿ ತಮ್ಮ ಜೇಬನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ಕೆಲವು ಆಚರಣೆಗಳನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದನ್ನು ಆಚರಿಸುವವರು ಬೇರೆ ಜಿಲ್ಲೆಯಲ್ಲಿ ಜೀವನ ನಡೆಸುತ್ತಿದ್ದರೂ ತಾವು ಮಾಡಿಕೊಂಡು ಬಂದಿರುವ ಆಚರಣೆಯನ್ನು ಅಲ್ಲಿಯೂ ಮುಂದುವರೆಸುತ್ತಾರೆ. ಈ ಸೊಪ್ಪಿನಲ್ಲಿ ವಿಶೇಷವಾದ ಔಷಧೀಯ ಗುಣಗಳಿರುವುದಾಗಿ ಪೂರ್ವಜನರು ಬಳಸಿಕೊಂಡು ಬಂದಿದ್ದಾರೆ ಎಂದು ಸುಶೀಲಾ ತಿಳಿಸಿದರು. ಇದರೊಂದಿಗೆ ಏಡಿ ಕಳಿಲೆ ವಿವಿಧ ಸೊಪ್ಪು ನಾಟಿಕೋಳಿ ಸೇರಿದಂತೆ ಎಲ್ಲದರಲ್ಲಿ ಔಷಧಿ ಸೇರಿದ್ದು ಅದನ್ನು ಸಹ ವಿಶೇಷ ಖಾದ್ಯ ತಯಾರಿಸಿ ಸೇವಿಸುವುದನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.