ADVERTISEMENT

ಇಂದು ವಿಶ್ವ ಗುಬ್ಬಿ ದಿನ: ಕೊಡಗಿನಲ್ಲೂ ತೆರೆಮರೆಗೆ ಸರಿಯುತ್ತಿವೆ ಗುಬ್ಬಚ್ಚಿಗಳು

ಹೆಚ್ಚಿದ ಕಾಂಕ್ರೀಟೀಕರಣ; ಕಡಿಮೆಯಾಗಿವೆ ಗುಬ್ಬಿಗಳು

ಕೆ.ಎಸ್.ಗಿರೀಶ್
Published 20 ಮಾರ್ಚ್ 2023, 2:51 IST
Last Updated 20 ಮಾರ್ಚ್ 2023, 2:51 IST
ಗುಬ್ಬಚ್ಚಿ
ಗುಬ್ಬಚ್ಚಿ   

ಮಡಿಕೇರಿ: ದಟ್ಟ ಕಾಡುಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗುತ್ತಿದ್ದಂತೆ ಪ್ರಕೃತಿಯ ಅಸಮತೋಲನವೂ ಹೆಚ್ಚುತ್ತಿದೆ. ಈ ಕುರಿತ ಒಂದಿಲ್ಲೊಂದು ಉದಾಹರಣೆಗಳು ಪ್ರತಿವರ್ಷವೂ ಅನುಭವಕ್ಕೆ ಬರುತ್ತಿದೆ. 2018ರ ಭೂಕುಸಿತದಂತಹ ಘಟನೆಗಳು ಜನಮಾನಸವನ್ನು ಇನ್ನಿಲ್ಲದಂತೆ ಹಿಂಡಿವೆ. ಇದರ ಜತೆ ಜತೆಗೆ ಗುಬ್ಬಿಗಳಂತಹ ಹಕ್ಕಿಗಳ ಸಂತತಿಯೂ ಕಡಿಮೆಯಾಗುತ್ತಿವೆ ಎಂದು ಪಕ್ಷಿ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಗುಬ್ಬಿಗಳು ಇಲ್ಲವೇ ಇಲ್ಲ ಎನಿಸುವಷ್ಟರ ಮಟ್ಟಿಗೆ ಕಡಿಮೆಯಾಗಿಲ್ಲ. ಆದರೆ, ಅವುಗಳ ಸಂಖ್ಯೆ ವರ್ಷ ಕಳೆದಂತೆ ಇಳಿಕೆಯಾಗುತ್ತಿರುವುದು ಬಹುತೇಕ ಎಲ್ಲರ ಗಮನಕ್ಕೆ ಬರುತ್ತಿವೆ.

ಸಾಮಾನ್ಯವಾಗಿ ಗುಬ್ಬಚ್ಚಿಗಳು ಮನೆಯ ಹೆಂಚಿನ ಚಾವಣಿಯ ಸಂದುಗೊಂದುಗಳಲ್ಲಿ, ಹುಲ್ಲಿನ ಚಾವಣಿಯಲ್ಲಿ ಗೂಡು ಕಟ್ಟುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಮನೆಯ ಹುಲ್ಲಿನ ಚಾವಣಿ, ಶೀಟಿನ ಚಾವಣಿಗಳು ಕಾಂಕ್ರೀಟ್‌ನ ಚಾವಣಿಗಳಾಗಿ ಬದಲಾಗುತ್ತಿವೆ. ಬಹು ಅಂತಸ್ತಿನ ಕಟ್ಟಡಗಳು ಹೆಚ್ಚುತ್ತಿವೆ. ಮಳೆಗಾಲ ಕಳೆಯುತ್ತಿದ್ದಂತೆ ಕೊಡಗಿನಾದ್ಯಂತ ನಿರ್ಮಾಣ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಇದರಿಂದ ಗುಬ್ಬಚ್ಚಿಗಳಿಗೆ ಗೂಡು ಕಟ್ಟುವುದಕ್ಕೆ ಬೇಕಾದ ಜಾಗ ಸಿಗುತ್ತಿಲ್ಲ.

ADVERTISEMENT

ಹಿಂದೆ ಅಂಗಡಿಗಳ ಮುಂದೆ ಧಾನ್ಯಗಳು ಚೆಲ್ಲಾಡುತ್ತಿತ್ತು. ಅವುಗಳನ್ನು ಗುಬ್ಬಚ್ಚಿಗಳು ತಿನ್ನುತ್ತಿದ್ದವು. ಆದರೆ, ಈಗ ಎಲ್ಲ ಧಾನ್ಯಗಳೂ ಪ್ಲಾಸ್ಟಿಕ್‌ ಚೀಲದಲ್ಲಿ ಕವರ್‌ ಆಗಿ ಬರುತ್ತಿವೆ. ಇದರಿಂದಾಗಿ ಗುಬ್ಬಚ್ಚಿಗಳೇ ಆಹಾರ ಸಿಗುತ್ತಿಲ್ಲ.

ಈ ಕುರಿತು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಕ್ಷಿ ವೀಕ್ಷಕ ಡಾ.ನರಸಿಂಹನ್, ‘ಮನೆಗಳಲ್ಲಿ ಸಂದು ಗೊಂದುಗಳು ಕಡಿಮೆಯಾಗಿರುವುದು ಗುಬ್ಬಚ್ಚಿಗಳು ಗೂಡು ಕಟ್ಟುವುದಕ್ಕೆ ತೊಡಕಾಗಿದೆ. ಕಳೆದ 10 ವರ್ಷಗಳಿಂದ ಈಚೆಗೆ ಗುಬ್ಬಿಗಳು ಮಾತ್ರವಲ್ಲ ಒಟ್ಟಾರೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮನುಷ್ಯ ಸೃಷ್ಟಿ ಮಾಡಿರುವ ಎಲ್ಲ ಬಗೆಯ ಮಾಲಿನ್ಯಗಳೂ ಇದಕ್ಕೆ ಕಾರಣ’ ಎಂದು ತಿಳಿಸಿದರು.

ಕನಿಷ್ಠ ಪಕ್ಷ ಗುಬ್ಬಿಗಳಿಗೆ ಗೂಡು ಕಟ್ಟಲು ಪೂರಕವಾದ ಗುಬ್ಬಿಗೂಡುಗಳನ್ನು ಪ್ರತಿ ಮನೆಗಳ ಹೊರಗಡೆ, ಚಾವಣಿಯಲ್ಲಿರಿಸಿದರೆ, ಅವುಗಳ ಆಹಾರಕ್ಕೆ ಧಾನ್ಯಗಳನ್ನಿರಿಸಿದರೆ ನಿಜಕ್ಕೂ ಗುಬ್ಬಚ್ಚಿಗಳ ಉಳಿವಿಗೆ ಸಹಾಯಕವಾಗುತ್ತದೆ.

ಹಕ್ಕಿಗಳನ್ನು ಉಳಿಸುವ ಕಸರತ್ತು

ಕೊಡಗು ಜಿಲ್ಲೆಯಲ್ಲೂ ಪಕ್ಷಿಗಳನ್ನು ಉಳಿಸುವ ಕಸರತ್ತುಗಳು ಆರಂಭವಾಗಿವೆ. ಸೋಮವಾರಪೇಟೆಯ ‘ನಾವು ಪ್ರತಿಷ್ಠಾನ’ದ ವತಿಯಿಂದ ‘ಹಕ್ಕಿಗಳಿಗೊಂದು ಗುಟುಕು ಅಭಿಯಾನ’ವು 3ನೇ ವರ್ಷಕ್ಕೆ ಕಾಲಿಡುತ್ತಿದೆ. ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಹಕ್ಕಿಗಳಿಗಾಗಿ ನೀರನ್ನು ಇಟ್ಟು, ಅದರ ಚಿತ್ರ ಅಥವಾ ಅದರೊಂದಿಗೆ ಸೆಲ್ಫಿಯನ್ನು ಕಳುಹಿಸಿಕೊಡುವ ಅಭಿಯಾನ ಇದಾಗಿದೆ. ಈ ವರ್ಷವೂ ಈ ಅಭಿಯಾನ ನಡೆಯಲಿದೆ ಎಂದು ಪ್ರತಿಷ್ಠಾನದ ಗೌತಮ್ ಕಿರಗಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ನಡೆದಿದ್ದ ಅಭಿಯಾನದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶದಿಂದಲೂ ಪರಿಸರ ಪ್ರೇಮಿಗಳು ಚಿತ್ರಗಳನ್ನು ಕಳುಹಿಸಿದ್ದರು. ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಈ ಬಾರಿ 9164131636 , 9880050881 ಸಂಖ್ಯೆಗೆ ಚಿತ್ರ ಕಳುಹಿಸಿ ಸ್ವವಿವರಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.