ADVERTISEMENT

ಕೊಡಗಿನ ಸಿದ್ದಾಪುರದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ; ನಿಷೇಧಾಜ್ಞೆ

ಕಾರು ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತ ಸಾವು, ಘಟನೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 4:47 IST
Last Updated 20 ಏಪ್ರಿಲ್ 2024, 4:47 IST
ಕೊಡಗಿನ ಸಿದ್ದಾಪುರದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು
ಕೊಡಗಿನ ಸಿದ್ದಾಪುರದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮದ ಸಮೀಪ ಗುರುವಾರ ರಾತ್ರಿ ಕಾರು ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತ ರಾಮಪ್ಪ (60) ಎಂಬುವವರು ಮೃತಪಟ್ಟ ಘಟನೆಯು, ಶುಕ್ರವಾರ ಸಿದ್ದಾಪುರ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು.

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಜರಂಗದಳದ ಕಾರ್ಯಕರ್ತರು ಗ್ರಾಮಕ್ಕೆ ಬಂದು ಘಟನೆಯನ್ನು ಖಂಡಿಸಿದರು. ಕೆಲವು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಸವಾರರು ಪರದಾಡಿದರು.‌

ಪರಿಸ್ಥಿತಿಯನ್ನು ಗಮನಿಸಿದ ಜಿಲ್ಲಾಡಳಿತ ತಕ್ಷಣವೇ ಸಿದ್ದಾಪುರ, ವಾಲ್ನೂರು, ಅರೆಕಾಡು, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಸ್ಥಳಕ್ಕೆ ಬಂದ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂತರ್‌ಗೌಡ ಅವರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಒಪ್ಪದ ಕಾರ್ಯಕರ್ತರು, ‘ಮೃತ ರಾಮಪ್ಪ ಕುಟುಂಬದವರಿಗೆ ₹ 25 ಲಕ್ಷ ಪರಿಹಾರ ನೀಡಬೇಕು, ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಸಿ.ಟಿ.ರವಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಪಕ್ಷದಿಂದ ಪರಿಹಾರ ದೊರಕಿರುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು. ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟರ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿದ್ದರು.

ಹಿನ್ನೆಲೆ: ಗುರುವಾರ ರಾತ್ರಿ ಪ್ರಚಾರ ಮುಗಿಸಿ ರಸ್ತೆಬದಿ‌ ನಿಂತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾರು ಡಿಕ್ಕಿ ಹೊಡೆದು, ರಾಮಪ್ಪ ಮೃತಪಟ್ಟಿದ್ದರು. ಚಂದ್ರರಾಜು ಮತ್ತು ರತೀಶ ಎಂಬ ಕಾರ್ಯಕರ್ತರು ಗಾಯಗೊಂಡಿದ್ದರು. ಆರೋಪಿ ಶೌಖತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.

‘ಬದುಕುವ ಗ್ಯಾರಂಟಿ ನೀಡಿ’: ಪ್ರತಿಭಟನೆ ವೇಳೆ ಮಾತನಾಡಿದ ಸಿ.ಟಿ.ರವಿ, ‘ರಾಜ್ಯ ಸರ್ಕಾರ ನಮಗೆ ಬದಕುವ ಗ್ಯಾರಂಟಿ ಕೊಡಬೇಕು’ ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲೆಯ ಸಿದ್ದಾಪುರದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ಭಾಗಿಯಾದರು

‘ಕೇಸರಿ ಶಾಲು ಹಾಕಿಕೊಂಡಿದ್ದಕ್ಕೆ ಕಾರನ್ನು ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆಸಲಾಗಿದೆ. ಇದೊಂದು ಹತ್ಯೆ ಎಂಬ ಅನುಮಾನವಿದೆ. ಆರೋಪಿಗಳ ಹಿನ್ನೆಲೆ ಹಾಗೂ ಯಾವ ಮದರಸಾದಲ್ಲಿ ಕಲಿತಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಗೃಹಸಚಿವರು ಕೂಲಂಕಷವಾಗಿ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.