ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ, ಬಿರುಸಿನ ಗಾಳಿ ಸೋಮವಾರವೂ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರಲಾರಂಭಿಸಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ 11 ಗಂಟೆಯಿಂದ ನದಿಗೆ 20 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಕಾವೇರಿ ಹಾಗೂ ಹಾರಂಗಿ ನದಿ ದಂಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆ ಇದ್ದು ನದಿ ತೀರದ ಜನತೆ ಎಚ್ಚರಿಕೆ ವಹಿಸುವಂತೆ ಜಲಾಶಯದ ಅಧಿಕಾರಿಗಳು ಮುನ್ನಚ್ಚರಿಕೆ ನೀಡಿದ್ದಾರೆ.
ತೀವ್ರಗತಿಯಲ್ಲಿ ಬೀಸುತ್ತಿರುವ ಗಾಳಿಗೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಅಂದಗೋವೆ ಗ್ರಾಮದ ಮನೆಯ ಚಾವಣಿಯ ಶೀಟ್ ಗಳು ನುಚ್ಚು ನೂರಾಗಿವೆ. ಗಾಳಿಯ ವೇಗ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.
ನಗರದಲ್ಲಿ ಬೆಳಿಗ್ಗೆ 2 ಗಂಟೆ ಕಾಲ ಭಾರಿ ಮಳೆ ಸುರಿಯಿತು. ನಂತರ ಸಾಧಾರಣ ಮಳೆಯೊಂದಿಗೆ ಜೋರು ಗಾಳಿ ಬೀಸುತ್ತಿದೆ. ದಟ್ಟ ಮಂಜು, ಮೋಡಗಳು ಕವಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.