ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಸಮಿತಿಯ ದಸರಾ ಜನೋತ್ಸವ ಆರಂಭಕ್ಕೆ ಕೇವಲ 7 ದಿನಗಳು ಉಳಿದಿದ್ದರೂ ಸಭಾಂಗಣ ನಿರ್ಮಾಣಕ್ಕೆ ಇನ್ನೂ ಟೆಂಡರ್ ನಿಗದಿಯಾಗಿಲ್ಲ.
ಜಿಲ್ಲಾಧಿಕಾರಿಗಳು ಈ ಸಂಬಂಧ ಟೆಂಡರ್ ಕರೆದಿದ್ದು, ದಸರಾ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಬುಧವಾರ ಸಂಜೆ ಟೆಂಡರ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ದಸರಾ ಜನೋತ್ಸವ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ 45 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಈ ಮೈದಾನದಲ್ಲಿ ಸಭಾಂಗಣ ನಿರ್ಮಿಸಿ 9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿಯೂ ಕೂಡ ಇದೇ ಮೈದಾನದಲ್ಲಿ ಸಭಾಂಗಣ ನಿರ್ಮಿಸಲು ಈಗಾಗಲೆ ಮೈದಾನವನ್ನು ಸ್ವಚ್ಛಗೊಳಿಸಲಾಗಿದೆ. ಆದರೆ, ಸಭಾಂಗಣ ನಿರ್ಮಾಣ ಮಾಡುವವರು ಮಾತ್ರ ಇನ್ನೂ ನಿಗದಿಯಾಗಿಲ್ಲ.
ಹಿಂದಿನ ವರ್ಷಗಳಲ್ಲಿ ಮೂಡುಬಿದರೆಯ ಮೋಹನ್ ಆಳ್ವ, ಮೈಸೂರು, ಪುತ್ತೂರಿನವರೇ ಅಲ್ಲದೆ ಸ್ಥಳೀಯ ಗೋಣಿಕೊಪ್ಪಲಿನವರು ಸಭಾಂಗಣ ನಿರ್ಮಿಸಿದ್ದರು. 2 ಸಾವಿರ ಜನ ಕುಳಿತುಕೊಳ್ಳಲು ಆಸನ, ವಿದ್ಯುತ್, ಧ್ವನಿವರ್ಧಕ, ಎಲ್ಲವೂ ಸಭಾಂಗಣ ನಿರ್ಮಾಣ ಜವಾಬ್ದಾರಿ ಹೊತ್ತವರದೇ ಅಗುತ್ತಿತ್ತು. ಈ ಸಭಾಂಗಣದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರು ಬಂದು ಸಾಂಸ್ಕೃತಿಕ ರಸದೌತಣ ನೀಡಿದ್ದಾರೆ. ಹೀಗಾಗಿ, ದಸರಾ ಉತ್ಸವ ಎಂದರೆ ಸಭಾಂಗಣದ ಸೌಂದರ್ಯ ಮತ್ತು ವ್ಯವಸ್ಥೆಯೂ ಬಹು ಮುಖ್ಯವಾಗಿದೆ.
ಸಭಾಂಗಣ ವ್ಯವಸ್ಥೆ ಆಯಿತೆಂದರೆ ಉಳಿದ ವ್ಯವಸ್ಥೆ ಆದಂತೆಯೇ. ಸಭಾಂಗಣ ನಿರ್ಮಾಣಕ್ಕೆ ಕನಿಷ್ಠವೆಂದರೂ 10 ದಿನಗಳು ಬೇಕಾಗುತ್ತದೆ. ಆದರೆ, ಈ ಬಾರಿ ಇನ್ನೂ ಟೆಂಡರ್ ಪ್ರಕ್ರಿಯೆ ಮುಗಿಯದಿರುವುದರಿಂದ ದಸರಾ ಸಮಿತಿ ಆಯೋಜಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಅಲ್ಲದೆ, ದಸರಾ ಸಭಾಂಗಣಕ್ಕೆ ತೆರಳುವ ರಸ್ತೆಗಳೂ ಹೊಂಡ ಬಿದ್ದು ಹಾಳಾಗಿವೆ. ಪಾಲಿಬೆಟ್ಟಕ್ಕೆ ತೆರಳುವ ರಸ್ತೆ, ಸರ್ಕಾರಿ ಆಸ್ಪತ್ರೆ ಹಿಂಭಾಗದ ರಸ್ತೆಯನ್ನು ವಿವಿಧ ಕಾರಣಗಳಿಂದ ಅಗೆದಿರುವುದರಿಂದ ರಸ್ತೆ ಹೊಂಡ ಹಾಗೆಯೇ ಉಳಿದಿದೆ. ಬೀದಿ ಬದಿಯ ವಿದ್ಯುತ್ ದೀಪಗಳು ದುರಸ್ತಿಯಾಗಬೇಕಿದೆ. ವಿಜಯದಶಮಿ ದಿನ ರಾತ್ರಿ ವೇಳೆ ಶೋಭಾಯಾತ್ರೆಯ ದಶಮಂಟಪಗಳು ತೆರಳುವ ಬೈಪಾಸ್ ರಸ್ತೆಯಲ್ಲಿನ ಹೊಂಡಗಳನ್ನು ಇನ್ನೂ ಮುಚ್ಚಿಲ್ಲ.
ಇವುಗಳ ಜತೆಗೆ, ಪಟ್ಟಣದ ಮುಖ್ಯ ರಸ್ತೆ ಮತ್ತು ಬೈಪಾಸ್ ರಸ್ತೆಯ ಇಕ್ಕೆಲಗಳ ಚರಂಡಿಗಳು ದುರಸ್ತಿಯಾಗಿಲ್ಲ. ಇವುಗಳಲ್ಲಿ ಹೋಟೆಲ್, ಬೇಕರಿ ಮೊದಲಾದವುಗಳ ನೀರು ನಿಂತು ಕೆಲವು ಕಡೆ ದುರ್ವಾಸನೆ ಬೀರುತ್ತಿದೆ.
ಈ ಬಗ್ಗೆ ಮಾತನಾಡಿದ ನಾಗರಿಕ ಹೋರಾಟ ಸಮಿತಿ ಮುಖಂಡ ನಾರಾಯಣಸ್ವಾಮಿ ನಾಯ್ಡು, ‘ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇಂಥ ಸಂದರ್ಭದಲ್ಲಿ ಸುವ್ಯವಸ್ಥಿತ ಬೀದಿ ಬದಿಯ ವಿದ್ಯುತ್ ದೀಪ, ಚರಂಡಿ ಮತ್ತು ರಸ್ತೆ ಸ್ವಚ್ಛತೆ ಇಲ್ಲದಿದ್ದರೆ ಅನೇಕ ಸಮಸ್ಯೆಗಳು ಕಾಡುವ ಆತಂಕವಿದೆ. ಇದಕ್ಕೆ ದಸರಾ ಸಮಿತಿ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದರು.
ಸಭಾಂಗಣ ನಿರ್ಮಾಣಕ್ಕೆ ಸಾಕಾಗದ ಕಾಲಾವಧಿ ಮುಂಚಿತವಾಗಿಯೇ ಟೆಂಡರ್ ಕರೆಯಬೇಕಿತ್ತು ಎನ್ನುವ ನಾಗರಿಕರು ಕೊನೆಗಳಿಗೆಯಲ್ಲೇ ಕಸರತ್ತು ಏಕೆ ಎಂಬ ಪ್ರಶ್ನೆ
ದಸರಾ ಸಭಾಂಗಣ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸಭಾಂಗಣ ನಿರ್ಮಾಣವಾದರೆ ಉಳಿದ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಲಿದ್ದೇವೆ-ಕುಲ್ಲಚಂಡ ಪ್ರಮೋದ್ ಗಣಪತಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.