ADVERTISEMENT

ಕೊಡವ ಮುಸ್ಲಿಂ ಭಾವೈಕ್ಯತೆಯ ಕುತ್ತುನಾಡು ನೇರ್ಚೆ ಇಂದು

ಜೆ.ಸೋಮಣ್ಣ
Published 20 ಮೇ 2024, 7:21 IST
Last Updated 20 ಮೇ 2024, 7:21 IST
ಗೋಣಿಕೊಪ್ಪಲು ಬಳಿಯ ಕುತ್ತುನಾಡ್‌ನ ಸೂಫಿ ಶಹೀದ್ ವಲಿಯುಲ್ಲಾ ಸ್ಮಾರಕದ ನೂತನ ಬಿಡಾರ
ಗೋಣಿಕೊಪ್ಪಲು ಬಳಿಯ ಕುತ್ತುನಾಡ್‌ನ ಸೂಫಿ ಶಹೀದ್ ವಲಿಯುಲ್ಲಾ ಸ್ಮಾರಕದ ನೂತನ ಬಿಡಾರ   

ಗೋಣಿಕೊಪ್ಪಲು: ಕೊಡವ, ಮುಸ್ಲಿಂ ಜನಾಂಗದ ಧಾರ್ಮಿಕ ಸಾಮರಸ್ಯದ ಪ್ರಮುಖ ಕೇಂದ್ರ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಬಳಿ ಇರುವ ಕುತ್ತುನಾಡ್. ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟಾಗಿ ಸೇರಿದರೆ ಮಾತ್ರ ಇಲ್ಲಿ ನೇರ್ಚೆ (ಉರೂಸ್) ನಡೆಯುತ್ತದೆ.

ಸೂಫಿ ಶಹೀದ್ ವಲಿಯುಲ್ಲಾರವರ ಸಮಾಧಿ ಎನ್ನಲಾಗುವ ಈ ಸ್ಥಳದಲ್ಲಿ ನಡೆಯುವ ಉರೂಸ್‌ನಲ್ಲಿ ಉಭಯ ಧರ್ಮದವರಿಗೂ ಸಮಾನ ಸ್ಥಾನವಿದೆ. ಕೊಡವರು ಮತ್ತು ಮುಸ್ಲಿಂಮರು ಒಗ್ಗೂಡಿ ಆಚರಿಸುವ ಮಹತ್ವದ ಉರೂಸ್ (ನೇರ್ಚೆ) ಇದು. ವಿಭಿನ್ನ ಧರ್ಮದವರು ಒಂದುಗೂಡಿ ನಡೆಸುವ ಈ ನೇರ್ಚೆ (ಉರೂಸ್) ಉತ್ಸವ ಮೇ 20ರಂದು ಜರುಗಲಿದೆ.

ಪೊನ್ನಂಪೇಟೆ ಬಳಿಯ ಬೇಗೂರು ಕಲ್ಲಾಯಿ ಮಸೀದಿಯ ಆಡಳಿತ ಮಂಡಳಿ, ಬೇಗೂರು- ಮಾಪಿಳ್ಳೆತೋಡಿನ ತಕ್ಕರು (ಊರಿನ ಹಿರಿಯ ಮುಖ್ಯಸ್ಥರು) ಕುತ್ತುನಾಡಿಗೆ ತೆರಳಿ ಅಲ್ಲಿ ಕರ್ತುರ ಕುಟುಂಬದ ತಕ್ಕರು ಮತ್ತು ಗ್ರಾಮಸ್ಥರೊಂದಿಗೆ ಸೇರಿ ಕುತ್ತುನಾಡು ಉರೂಸ್‌ನ ದಿನವನ್ನು ನಿಶ್ಚಯಿಸುತ್ತಾರೆ. ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮಕ್ಕೆ ಒಳಪಟ್ಟಿರುವ ನಾಡುಗುಂಡಿ ಹೊಳೆದಡದ ಕಾಡಿನಲ್ಲಿ ಸೂಫಿ ಶಹೀದ್ ಅವರ ಸ್ಮಾರಕ ಬಿಡಾರವಿದೆ. ಉರೂಸ್‌ನ ದಿನದಂದು ಬಿಡಾರದ ಬಳಿ ಬೆಳಿಗ್ಗೆ 8 ಗಂಟೆಗೆ ಆಲೀರ ಮತ್ತು ಕರ್ತುರ ಕುಟುಂಬದ ತಕ್ಕರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್‌ಗೆ ಚಾಲನೆ ನೀಡುತ್ತಾರೆ. ಬಳಿಕ ಸಾಮೂಹಿಕ ಪ್ರಾರ್ಥನೆ ಜರುಗಿ ಧಾರ್ಮಿಕ ಆಚರಣೆಗಳು ಆರಂಭಗೊಳ್ಳುತ್ತವೆ.

ADVERTISEMENT

ಭಂಡಾರ ಜಮಾಯಿಸುವುದು:‌ ಉರೂಸ್ ದಿನದಂದು ಬೆಳಿಗ್ಗೆ ಬಿಡಾರದ ಮುಂಭಾಗದಲ್ಲಿರುವ ಹೊಳೆಯಲ್ಲಿ ಬಾಳೆಗೊನೆಯೊಂದನ್ನು ಮುಳುಗಿಸಿ ಬಿಡಾರದ ದ್ವಾರದ ಮೇಲ್ಬಾಗದಲ್ಲಿ ಕಟ್ಟಲಾಗುತ್ತದೆ. ಈ ವೇಳೆ ಆಲೀರ ಕುಟುಂಬದ ತಕ್ಕರು ಪ್ರಾರ್ಥನೆ ಸಲ್ಲಿಸಿ ದ್ವಾರದ ಎಡಭಾಗದಲ್ಲಿ ಕೂರುತ್ತಾರೆ. ನಂತರ, ಕೊಡವ ಜನಾಂಗದ ಕರ್ತುರ ಕುಟುಂಬದ ತಕ್ಕರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ದ್ವಾರದ ಬಲಭಾಗದಲ್ಲಿ ಕೂರಿಸಿದ ನಂತರ ಭಂಡಾರ ಇಡುವ ಸಂಪ್ರದಾಯ ಆರಂಭವಾಗುತ್ತದೆ. ಕಾರ್ಯ ಮುಗಿಯುವವರೆಗೂ ಉಭಯ ತಕ್ಕರು ಎಡ-ಬಲದಲ್ಲಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಹುರಿದ ಅಕ್ಕಿ, ಕರಿಮೆಣಸು ಹಾಗೂ ಸಕ್ಕರೆಯಿಂದ ತಯಾರಿಸಿದ ಕಾಪೊಡಿ ಮತ್ತು ನೇರ್ಚೆ ಗುಂಡಿಯಲ್ಲಿ ಮುಳುಗಿಸಿ ತಂದ ಬಾಳೆ ಹಣ್ಣು ಇಲ್ಲಿ ಭಕ್ತರಿಗೆ ನೀಡುವ ಪ್ರಸಾದವಾಗಿದೆ.

ಹಾಲನ್ನ ಪ್ರಸಾದ: ಉಭಯ ಸಮುದಾಯದವರು ಜೊತೆಗೂಡಿ ಬಿಡಾರದ ಆವರಣದಲ್ಲಿ 3 ಕಲ್ಲುಗಳನ್ನು ಜೋಡಿಸಿ ಪಾತ್ರೆಯಲ್ಲಿ ಹರಕೆ ರೂಪದಲ್ಲಿ ತರುವ ಹಾಲನ್ನೆಲ್ಲ ಹಾಕಿ ಕುದಿಸುತ್ತಾರೆ. ಕುದಿಯುವ ಹಾಲಿಗೆ ಅಕ್ಕಿಯನ್ನು ಹಾಕಿ ಹಾಲು ಮತ್ತು ಅಕ್ಕಿಯಿಂದ ಪ್ರಸಾದವನ್ನು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿಯಾಗಿ ವಿತರಿಸುತ್ತಾರೆ. ನಂತರ, ಎಲ್ಲರಿಗೂ ಮಾಂಸಾಹಾರ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ಕುರಿ ಅಥವಾ ಕೋಳಿಮಾಂಸ ಮತ್ತು ತುಪ್ಪದ ಅನ್ನ ಇಲ್ಲಿನ ಅನ್ನ ಪ್ರಸಾದದ ವಿಶೇಷ.

ಭಂಡಾರ ಜಮಾಯಿಸುವ ಜಾಗ
ಹಿಂದೆ ಇದ್ದ ಹಳೆಯ ಬಿಡಾರ (ಈಗ ಇಲ್ಲ)
ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಉರೂಸ್‌ ಹಾಲನ್ನ ಪ್ರಸಾದ ಇಲ್ಲಿನ ವಿಶೇಷ ಕುರಿ ಅಥವಾ ಕೋಳಿಮಾಂಸ, ತುಪ್ಪದ ಅನ್ನ ಅನ್ನ ಪ್ರಸಾದ ವಿತರಣೆ
ಉರೂಸ್‌ಗೆ ಇದೆ 4 ಶತಮಾನಗಳ ಇತಿಹಾಸ
ಸುಮಾರು 4 ಶತಮಾನಗಳ ಹಿಂದೆ ಕೊಡಗಿಗೆ ಬಂದು ಎಮ್ಮೆಮಾಡಿನಲ್ಲಿ ಸಮಾಧಿಯಾದ ಸೂಫಿ ಶಹೀದ್ ವಲಿಯುಲ್ಲಾ ಅವರು ಭಾಗಮಂಡಲ ಬಳಿಯ ತಾವೂರಿಗೆ ತೆರಳುವ ಮಾರ್ಗಮಧ್ಯೆ ದಟ್ಟಾರಣ್ಯವಾದ ಕುತ್ತುನಾಡಿನ ಕೊಂಗಣ ಕಾಡಿನಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಸೂಫಿ ಸಂತರನ್ನು ಅಲ್ಲಿನ ಕರ್ತುರ ಕುಟುಂಬದ ಹಿರಿಯರೊಬ್ಬರು ಕಾಡಿನಲ್ಲಿ ಭೇಟಿಯಾದರು ಎನ್ನಲಾಗಿದೆ. ಕಾಡಿನಲ್ಲಿ ವಿಶ್ರಾಂತಿ ಪಡೆದ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ಇವರು ಸಮೀಪದ ಮಾಪಿಳೆತೋಡುವಿನ ಮುಸ್ಲಿಂ ಜನಾಂಗದವರನ್ನು ಸೇರಿಸಿಕೊಂಡು ಈ ದಾರ್ಶನಿಕ ವ್ಯಕ್ತಿ ವಿಶ್ರಾಂತಿ ಪಡೆದ ಸ್ಥಳದಲ್ಲಿ ಅವರ ನೆನಪಿಗಾಗಿ ಬಿಡಾರವೊಂದನ್ನು ನಿರ್ಮಿಸಿ ಅಂದಿನಿಂದ ಪ್ರತಿವರ್ಷ ಉರೂಸ್ ಆಚರಣೆಯನ್ನು ಪ್ರಾರಂಭಿಸಲಾಯಿತು ಎಂಬ ಪ್ರತೀತಿ ಇದೆ.‌
₹ 1 ಸಾವಿರಕ್ಕೂ ಅಧಿಕ ಬೆಲೆಗೆ ನಾಟಿಕೋಳಿ ಹರಾಜು
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಒಪ್ಪಿಸುವ ಹರಕೆಗಳನ್ನು ಮಧ್ಯಾಹ್ನದ ನಂತರ ಹರಾಜು ಮಾಡಲಾಗುತ್ತದೆ. ಹಸು ಕರು ಕೋಳಿ ಅಕ್ಕಿ ತೆಂಗಿನಕಾಯಿ ಹಾಲು ತುಪ್ಪ ಕಾಫಿ ಕರಿಮೆಣಸು ಮೊದಲಾದವುಗಳನ್ನು ಇಲ್ಲಿ ಹರಾಜು ಹಾಕಲಾಗುತ್ತದೆ. ನಾಟಿ ಕೋಳಿಗಳನ್ನು ಉರೂಸ್‌ನ ಹರಾಜಿನಲ್ಲಿ ಪಡೆದು ಸಾಕಿದರೆ ಅವುಗಳ ಸಂಖ್ಯೆ ಹೆಚ್ಚುತ್ತದೆ ಎಂದು ಭಕ್ತರು ನಂಬುತ್ತಾರೆ. ಇದರಿಂದ ನಾಟಿ ಕೋಳಿಯೊಂದು ಇಲ್ಲಿ ₹ 1000ದಿಂದ ₹ 1500ರವರೆಗೂ ಹರಾಜಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.