ADVERTISEMENT

ಹುತ್ತರಿ ಆಚರಣೆ: ಕಾಫಿನಾಡಿನ ಸಂಭ್ರಮಕ್ಕೆ ಮುನ್ನುಡಿ

ಸಿ.ಎಸ್.ಸುರೇಶ್
Published 27 ನವೆಂಬರ್ 2023, 6:09 IST
Last Updated 27 ನವೆಂಬರ್ 2023, 6:09 IST
ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮದಲ್ಲಿ ಹುತ್ತರಿ ಹಬ್ಬದಂದು ಕದಿರು ತೆಗೆಯಲು ಸಿದ್ಧಗೊಂಡಿರುವ ಭತ್ತದ ಪೈರು.
ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಗ್ರಾಮದಲ್ಲಿ ಹುತ್ತರಿ ಹಬ್ಬದಂದು ಕದಿರು ತೆಗೆಯಲು ಸಿದ್ಧಗೊಂಡಿರುವ ಭತ್ತದ ಪೈರು.   

ನಾಪೋಕ್ಲು: ಕೊಡಗಿನಲ್ಲಿ ಮಳೆದೇವರು ಎಂಬ ಖ್ಯಾತಿ ಪಡೆದ ಇಲ್ಲಿನವರ ಆರಾಧ್ಯ ದೈವವಾಗಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನ. 27ರಂದು ಹುತ್ತರಿ ಆಚರಣೆ ಮಾಡುವ ಮೂಲಕ ಕಾಫಿನಾಡಿನ ಸಂಭ್ರಮಕ್ಕೆ ಮುನ್ನುಡಿ ಬರೆಯಲಿದೆ.

ರೋಹಿಣಿ ನಕ್ಷತ್ರದ ಹುಣ್ಣಿಮೆ ದಿನವಾದ ನ. 27ರಂದು ಸೋಮವಾರ ಸಂಜೆ 7.20ಕ್ಕೆ ದೇವಾಲಯದಲ್ಲಿ ನೆರೆ ಕಟ್ಟುವುದು, 8.20ಕ್ಕೆ ಕದಿರು ತೆಗೆಯುವುದು ಮತ್ತು 9.20ಕ್ಕೆ ಪ್ರಸಾದ ಸ್ವೀಕಾರ ಮಾಡಲಾಗುತ್ತದೆ. ಇಲ್ಲಿ 8.20ಕ್ಕೆ ಕದಿರು ತೆಗೆದ ನಂತರ ಮಡಿಕೇರಿಯಲ್ಲಿರುವ ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ  ರಾತ್ರಿ 8.45ಕ್ಕೆ ಕದಿರು ತೆಗೆಯಲಾಗುತ್ತದೆ. ನಂತರದ ದಿನಗಳಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಎಲ್ಲೆಡೆ ಆಚರಿಸಲಾಗುತ್ತದೆ.

ಇದೇ ರೀತಿ ಹುತ್ತರಿ ಹಬ್ಬವನ್ನು ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ, ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ಕಕ್ಕಬ್ಬೆಯ ಪಾಡಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೆ ಐದು ಮನೆತನದ ಕುಟುಂಬದ ಮಹಿಳೆಯರು ತಳಿಯಕ್ಕಿ ಬೊಳಕ್ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆ ಮಾಡುತ್ತಾರೆ.

ADVERTISEMENT

ಹುತ್ತರಿ ಹಬ್ಬದ ಅಂಗವಾಗಿ ದೇವಾಲಯದಲ್ಲಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೊಲಿಪೊಲಿಯೇದೇವಾ ಎಂಬ ಉದ್ಘೋಷದೊಂದಿಗೆ ಕದಿರು ಕತ್ತರಿಸಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿಟ್ಟು ಧಾನ್ಯಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ.ಬಳಿಕ ನಾಡಿನೆಲ್ಲೆಡೆ ಸಂಭ್ರಮ ಮುಗಿಲು ಮುಟ್ಟುತ್ತದೆ.

ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ನ.27ರ ಸೋಮವಾರ ರಾತ್ರಿ ಕೊಡವ ಸಮಾಜದಲ್ಲಿ 7-45ಕ್ಕೆ ನೆರೆಕಟ್ಟಿ, 8-45 ಗಂಟೆಗೆ ಇಲ್ಲಿನ ಆಂಜನೇಯ ದೇವಾಲಯದ ಗದ್ದೆಯಲ್ಲಿ ಕದಿರು ತೆಗೆಯಲಾಗುವುದು ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ತಿಳಿಸಿದ್ದಾರೆ.

ತಾಲ್ಲೂಕಿನ ಗರ್ವಾಲೆ ಗ್ರಾಮದಲ್ಲಿ ನ.27ರ ಸೋಮವಾರ ರಾತ್ರಿ ದೇವರ ಗದ್ದೆಯಲ್ಲಿ ಕದಿರು ತೆಗೆಯಲಾಗುವುದು. ಗುರುವಾರ ಊರಿನ ಮಂದ್‌ನಲ್ಲಿ ಬೆಳಿಗ್ಗೆ 12ಕ್ಕೆ ಹುತ್ತರಿ ಹಬ್ಬದಾಚರಣೆ ನಡೆಸಲಾಗುವುದು. ಇದರಲ್ಲಿ ಕೋಲಾಟ್ ಸೇರಿದಂತೆ ವಿವಿಧ ಆಚರಣೆಗಳು ನಡೆಯುವುದು. ನಂತರ ಸಸ್ಯಹಾರಿ ಊಟದ ವ್ಯವಸ್ಥೆ ಇರುವುದು ಎಂದು ಗ್ರಾಮದ ಅಧ್ಯಕ್ಷ ಬಸಪ್ಪ ತಿಳಿಸಿದರು.

ಸಮೀಪದ ಕಿರಗಂದೂರು ಗ್ರಾಮದ ಸಮಿತಿ ವತಿಯಿಂದ ಹುತ್ತರಿ ಕದಿರು ತೆಗೆಯಲಾಗುತ್ತದೆ. ಅಂದು ಹೆದ್ದೇವರ ಗುಡಿಯಲಿ ಹಸಿ ಅಕ್ಕಿಯಲ್ಲಿ ಮಾಡಿದ ತಂಬಿಟ್ಟು ಇಟ್ಟು, ವಿಶೇಷ ಪೂಜೆ ಸಲ್ಲಿದ ನಂತರ ಗ್ರಾಮದ ಹಿರಿಯರಾದ ಎಚ್.ಎ.ನಾಗರಾಜು ಎಂಬುವವರ ಗದ್ದೆಯಲ್ಲಿ ಬೆಳೆದಿರುವ ಕದಿರನ್ನು ರಾತ್ರಿ 8-45ಕ್ಕೆ ತೆಗೆಯಲಾಗುವುದು. ದೇವಾಲಯದ ಬಾಗಿಲಿಗೆ ಕದಿರನ್ನು ಕಟ್ಟಿದ ನಂತರ ಊರಿನವರು ಮತ್ತು ಹೊರ ಭಾಗದ ಜನರು ಪಟಾಕಿ ಸಿಡಿಸಿ ಸಂಭ್ರಮದಾಚರಣೆ ಮೂಲಕ ಕದಿರನ್ನು ಮನೆಗೆ ತೆಗೆದುಕೊಂಡು ಹೋಗುವರು.

ಇದೂ ಸೇರಿದಂತೆ ಮಾದಾಪುರ, ಸೂರ್ಲಬ್ಬಿ, ಅರೆಯೂರು, ಐಗೂರು, ತಾಕೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹುತ್ತರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಸೋಮವಾರಪೇಟೆ ಸಮೀಪದ ಅರೆಯೂರು ಗ್ರಾಮದಲ್ಲಿ ಹಿಂದಿನ ವರ್ಷ ಗ್ರಾಮಸ್ಥರು ಭತ್ತದ ಕದಿರು ತೆಗೆದು ತೆಗೆದುಕೊಂಡು ಹೋಗುತ್ತಿರುವುದು. 
ಹುತ್ತರಿ ತಂಬಿಟ್ಟು
ನಾಪೋಕ್ಲು ಸಮೀಪದ ಮೂರ್ನಾಡು ಪಟ್ಟಣದ ಅಂಗಡಿಯೊಂದರಲ್ಲಿ ಭಾನುವಾರ ಮಾರಾಟಕ್ಕಿರಿಸಿದ್ದ ಹುತ್ತರಿ ಗೆಣಸು.

ವಿಶೇಷ ಖಾದ್ಯ ವೈವಿಧ್ಯ ತಂಬಿಟ್ಟು ಏಲಕ್ಕಿ ಪುಟ್...

ನಾಪೋಕ್ಲು: ಹುತ್ತರಿ ಹಬ್ಬ ಕೇವಲ ತನ್ನ ಆಚರಣೆಗಳಿಂದ ಮಾತ್ರವಲ್ಲ ಹಬ್ಬದ ದಿನದಂದು ತಯಾರಿಸುವ ಖಾದ್ಯಗಳಲ್ಲೂ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆ. ಹುತ್ತರಿ ತಂಬಿಟ್ಟು ಏಲಕ್ಕಿ ಪುಟ್ ಹೊಸ ಹೊಕ್ಕಿ ಪಾಯಸ ಹುತ್ತರಿ ಗೆಣಸು ಸಾಂಬಾರು ಇತ್ಯಾದಿಗಳು ಹುತ್ತರಿ ಸಂಭ್ರಮವನ್ನು ಸಾರಿ ಹೇಳುತ್ತವೆ. ಬಾಳೆಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’ ಘಮಘಮಿಸುವ ಏಲಕ್ಕಿ ಪುಟ್ ಆಗತಾನೆ ಗದ್ದೆಯಿಂದ ಕುಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿ ಪಾಯಸ ಹುತ್ತರಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ. ಪಾಯಸದಲ್ಲಿ ಕಲ್ಲು ಆಗತಾನೆ ಗದ್ದೆಯಿಂದ ಕುಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿಗೆ ಐದಾರು ಪುಟ್ಟ ಕಲ್ಲು ಚೂರುಗಳನ್ನು ಸೇರಿಸಿ ಪಾಯಸ ಮಾಡುವ ಕ್ರಮ ರೂಡಿಯಲ್ಲಿತ್ತು. ಪಾಯಸ ಸೇವಿಸುವಾಗ ಕಲ್ಲು ಸಿಕ್ಕಿದವರಿಗೆ ಕಲ್ಲಾಯುಷ್ಯ (ಅಂದರೆ ಧೀರ್ಘಾಯುಷ್ಯ) ಎಂಬುದಾಗಿ ಹಿರಿಯರ ಆಶೀರ್ವಾದ ಲಭಿಸುತ್ತದೆ. ಹುತ್ತರಿಯಲ್ಲಷ್ಟೇ ಈ ವಿಶೇಷತೆ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.