ADVERTISEMENT

ಗೋಣಿಕೊಪ್ಪಲು, ನಾಪೋಕ್ಲು ಭಾಗದಲ್ಲಿ ಮುಸ್ಲಿಮರೊಂದಿಗೆ ಹುತ್ತರಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 15:25 IST
Last Updated 28 ನವೆಂಬರ್ 2023, 15:25 IST
ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿಯ ಐಮಂಗಲದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್‌ನಿಂದ ಸೋಮವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಹುತ್ತರಿ ಕದಿರು (ಭತ್ತದ ತೆನೆ) ತೆಗೆಯಲಾಯಿತು
ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಬಳಿಯ ಐಮಂಗಲದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್‌ನಿಂದ ಸೋಮವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಹುತ್ತರಿ ಕದಿರು (ಭತ್ತದ ತೆನೆ) ತೆಗೆಯಲಾಯಿತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಹುತ್ತರಿ ಹಬ್ಬದಲ್ಲಿ ಮುಸ್ಲಿಮರೂ ಪಾಲ್ಗೊಂಡು ಸಂಭ್ರಮಿಸಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಗೋಣಿಕೊಪ್ಪಲು ಸಮೀಪದ ಐಮಂಗಲದಲ್ಲಿ (ಕೊಮ್ಮೆತೊಡು) ಸೋಮವಾರ ರಾತ್ರಿ ಹುತ್ತರಿ ಆಚರಿಸಲಾಯಿತು.

ಶ್ರದ್ಧಾಭಕ್ತಿಯಿಂದ ಕದಿರು ತೆಗೆದ ಅವರು ಭತ್ತದ ತೆನೆಯನ್ನು ಅಲ್ಲಿ ಸೇರಿದ್ದ ಎಲ್ಲರಿಗೂ ಹಂಚಿದರು. ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಬಳಿಕ ಕೋಳುಮಂಡ ರಫೀಕ್ ಅವರು ತಮ್ಮ ಮನೆಯಲ್ಲಿ ಸಾಂಪ್ರದಾಯಿಕ ತಂಬಿಟ್ಟು- ಪುತ್ತರಿ ಗೆಣಸು ಉಪಾಹಾರ ಮತ್ತು ಊಟೋಪಚಾರವನ್ನು ವ್ಯವಸ್ಥೆಗೊಳಿಸಿದ್ದರು.

ADVERTISEMENT

ನಾಪೋಕ್ಲು ಸಮೀಪದ ಹಳೆತಾಲ್ಲೂಕಿನ ಬೊಪ್ಪೆರ ಕಾವೇರಪ್ಪ ಅವರ ಮನೆಯಲ್ಲಿ ನಡೆದ ಹುತ್ತರಿಯಲ್ಲಿ ಮುಸ್ಲಿಮರು ಪಾಲ್ಗೊಂಡು ಸಂಭ್ರಮಿಸಿದರು. ಆ ವೇಳೆ ಮಾತನಾಡಿದ ಬೊಪ್ಪೆರ ಕಾವೇರಪ್ಪ, ‘1948ರಿಂದ ಸೌಹಾರ್ದಯುತವಾಗಿ ಹುತ್ತರಿ ಆಚರಿಸುತ್ತಿದ್ದೇವೆ. ಮುಸ್ಲಿಮರೂ ಸೇರಿದಂತೆ ಎಲ್ಲರೂ ತೀರ್ಥಪ್ರಸಾದ ಸೇವಿಸಿ ಭತ್ತದ ತೆನೆ ತೆಗೆದುಕೊಂಡು ಮನೆಗೆ ತೆರಳುತ್ತಾರೆ’ ಎಂದರು.

ಎಂ.ಎಸ್.ಇಬ್ರಾಹಿಂ ಮಾತನಾಡಿ, ‘46 ವರ್ಷದಿಂದ ಹುತ್ತರಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಸೌಹಾರ್ದವಾಗಿ ಪ್ರತಿ ವರ್ಷ ಅವರು ಆಹ್ವಾನಿಸುತ್ತಾರೆ. ನಮ್ಮ ಸುತ್ತಮುತ್ತಲ ಮನೆಯವರೆಲ್ಲ ಸೇರಿ ವಿಜೃಂಭಣೆಯಿಂದ ಆಚರಿಸುತ್ತೇವೆ’ ಎಂದರು.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಹಳೆತಾಲ್ಲೂಕಿನ ಬೊಪ್ಪೆರ ಕಾವೇರಪ್ಪ ಅವರ ಮನೆಯಲ್ಲಿ ಸೋಮವಾರ ರಾತ್ರಿ ನಡೆದ ಹುತ್ತರಿಯಲ್ಲಿ ಮುಸ್ಲಿಮರು ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.