ADVERTISEMENT

ಅಭಿವೃದ್ಧಿ ಹೆಸರಿನಲ್ಲಿ ಜಗತ್ತು ಸ್ಮಶಾನ: ಹಿರಿಯ ಸಾಹಿತಿ ವೈದೇಹಿ ಆತಂಕ

ಮಡಿಕೇರಿಯಲ್ಲಿ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 14:04 IST
Last Updated 28 ಡಿಸೆಂಬರ್ 2019, 14:04 IST
ಮಡಿಕೇರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ವೈದೇಹಿ ಅವರು ಮಾತನಾಡಿದರು
ಮಡಿಕೇರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ವೈದೇಹಿ ಅವರು ಮಾತನಾಡಿದರು   

ಮಡಿಕೇರಿ: ‘ಕೊಡಗಿನ ಗೌರಮ್ಮ ಅವರು ಆ ಕಾಲದಲ್ಲೇ ಅಗ್ರ ಶ್ರೇಣಿಯ ಮಹಿಳಾ ಲೇಖಕಿಯಾಗಿ ಹೊರ ಹೊಮ್ಮಿದ್ದರು. ಸಮಕಾಲೀನ ಸಾಹಿತ್ಯ ಪ್ರಪಂಚದಲ್ಲಿ ಅವರು ಇದ್ದಿದ್ದರೆ ಅದ್ಭುತವಾದ ಕಥಾ ಲೋಕವನ್ನೇ ಸೃಷ್ಟಿಸುತ್ತಿದ್ದರು’ ಎಂದು ಹಿರಿಯ ಸಾಹಿತಿ ವೈದೇಹಿ ಅವರು ಬಣ್ಣಿಸಿದರು.

ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಸಭಾಂಗಣದಲ್ಲಿ ಶನಿವಾರ ನಡೆದ ಕೊಡಗಿನ ಗೌರಮ್ಮ ದತ್ತಿ ನಿಧಿಯ ವಾರ್ಷಿಕ ಮಹಿಳಾ ಪ್ರಶಸ್ತಿಯನ್ನು ಲೇಖಕಿ ಸುನಿತಾ ಲೋಕೇಶ್ ಸಾಗರ್‌ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

‘ಗೌರಮ್ಮ ಕೊಡಗಿಗೆ ಮಾತ್ರವಲ್ಲದೆ, ಇಡೀ ಮಹಿಳಾ ಜಗತ್ತಿಗೆ ಸೇರಿದ್ದರು. ಗೌರಮ್ಮ ಅವರ ‘ವಾಣಿಯ ಸಮಸ್ಯೆ’ ಸಣ್ಣ ಕಥೆ ಮಹಿಳಾ ಲೇಖಕಿಯ ಅತ್ಯಂತ ಶ್ರೇಷ್ಠ ಸಣ್ಣ ಕಥೆಯೆಂದು ಮಾನ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತ್ಯ ಬೇಕೇ ಎನ್ನುವ ಪ್ರಶ್ನೆ ಪ್ರತಿ ಸಾಹಿತ್ಯ ಸಭೆಗಳಲ್ಲಿ, ವಿಚಾರ ಕಮ್ಮಟಗಳಲ್ಲಿ ಎದುರಾಗುತ್ತದೆ. ಜೊತೆಗೆ ಕೊಡಗಿನಲ್ಲಿ ಸಾಹಿತ್ಯಿಕ ವಾತಾವರಣ ಶುಷ್ಕವಾಗಿದೆ ಎಂಬ ಮಾತೂ ಇದೆ. ಆದರೆ, ಇದಕ್ಕೆ ಅವರವರ ನೆಲೆಯಲ್ಲಿ ಪ್ರಾದೇಶಿಕ ಗುಣ ಸ್ವಭಾವಗಳ ಹಿನ್ನೆಲೆಯಲ್ಲಿ ಉತ್ತರ ಕಂಡುಕೊಳ್ಳಬೇಕು’ ಎಂದು ಹೇಳಿದರು.

ಅಭಿವೃದ್ಧಿಯ ಹೆಸರಿನಲ್ಲಿ ಜಗತ್ತು ಸ್ಮಶಾನವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ವೈದೇಹಿ, ಈ ರೀತಿಯ ಅಸಹಜ ಮತ್ತು ಬದುಕಿಗೆ ಪೂರಕವಾಗದ ಅಭಿವೃದ್ಧಿ ಕಾಮಗಾರಿಗಳ ಕುರಿತು ನಾವೆಲ್ಲರೂ ಚಿಂತಿಸಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಕೊಡಗಿನ ಗೌರಮ್ಮ ಪ್ರಶಸ್ತಿ ಸ್ಥಾಪನೆಯ ಸಂದರ್ಭ ಮಹಿಳಾ ಲೇಖಕಿಯರ ಕೊರತೆ ನಮ್ಮನ್ನು ಕಾಡಿತ್ತು. ಮೊದಲ ಪ್ರಶಸ್ತಿಗೆ ಭಾಜನರಾದ ನಯನಾ ಕಶ್ಯಪ್ ಅವರು ವೈದೇಹಿ ಅವರ ಪುತ್ರಿ. ಇದೀಗ ಮಹಿಳಾ ಲೇಖಕಿಯರ ನಡುವೆ ಕೊಡಗಿನ ಗೌರಮ್ಮ ಪ್ರಶಸ್ತಿಗೆ ಪೈಪೋಟಿ ಕಂಡು ಬಂದಿರುವುದು ಉತ್ತಮ ಬೆಳವಣಿಗೆ’ ಎಂದು ನುಡಿದರು.

ಕೊಡಗಿನಲ್ಲಿ ಸಾಹಿತ್ಯ ಪರವಾದ ಚಟುವಟಿಕೆಗಳು ಕ್ಷೀಣ ಎಂಬ ಅಪವಾದವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಚುಕ್ಕಾಣಿಯನ್ನು ತಾವು ತೆಗೆದುಕೊಂಡು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡ ಒಂದು ಐತಿಹಾಸಿಕ ಘಟನೆಯನ್ನಾಗಿ ರೂಪಿಸಿದ ಹೆಮ್ಮೆ ಕೊಡಗಿನ ಜನರದ್ದಾಗಿದೆಯೆಂದು ಅವರು ತಿಳಿಸಿದರು.

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ಕೊಡಗಿನ ಮಾಧ್ಯಮದ ಅನೇಕ ಪತ್ರಕರ್ತರು ಸಾಹಿತಿಗಳಾಗಿ ಮಾರ್ಪಾಡಾಗಿದ್ದು, ಪುಸ್ತಕಗಳನ್ನು ಬರೆಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತರಾದ ಸುನೀತಾ ಲೋಕೇಶ್ ಸಾಗರ್ ಮಾತನಾಡಿದರು.

ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್, ಕುಶಾಲನಗರ ಹೋಬಳಿ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ, ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ, ಕಿಗ್ಗಾಲು ಗಿರೀಶ್, ಡಾ.ಕೋರನ ಸರಸ್ವತಿ, ಎಸ್.ಐ. ಮುನೀರ್ ಅಹಮ್ಮದ್, ಸ್ಮಿತಾ ಅಮೃತರಾಜ್, ಭಾರತಿ ಪ್ರಶಾಂತ್, ಕೆ.ಎಸ್. ರಮೇಶ್, ನಾಗೇಶ್ ಉರಾಳ ಉಪಸ್ಥಿತರಿದ್ದರು. ಕಸಾಪದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.