ADVERTISEMENT

‘ಕಕ್ಕಡ ನಮ್ಮೆ’ಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹೂರಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 5:55 IST
Last Updated 5 ಆಗಸ್ಟ್ 2024, 5:55 IST
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊಮ್ಮಕ್ಕಡ ಕೂಟ ಕೊಡವ ಸಮಾಜ ಮಡಿಕೇರಿ ವತಿಯಿಂದ ಮಡಿಕೇರಿಯ ಕೊಡವ ಸಮಾಜದಲ್ಲಿ ಭಾನುವಾರ ನಡೆದ ‘ಕಕ್ಕಡ ನಮ್ಮೆ’ಯನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಉದ್ಘಾಟಿಸಿದರು
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊಮ್ಮಕ್ಕಡ ಕೂಟ ಕೊಡವ ಸಮಾಜ ಮಡಿಕೇರಿ ವತಿಯಿಂದ ಮಡಿಕೇರಿಯ ಕೊಡವ ಸಮಾಜದಲ್ಲಿ ಭಾನುವಾರ ನಡೆದ ‘ಕಕ್ಕಡ ನಮ್ಮೆ’ಯನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಉದ್ಘಾಟಿಸಿದರು   

ಮಡಿಕೇರಿ: ಒಂದೆಡೆ ಬಾಯಲ್ಲಿ ನೀರೂರಿಸುವ ತಿನಿಸುಗಳು, ಮತ್ತೊಂದೆಡೆ ಜ್ಞಾನವನ್ನು ಹೆಚ್ಚಿಸುವ ಪುಸ್ತಕಗಳು, ಮೊಗದೊಂದು ಕಡೆ ವಿಚಾರವಂತಿಕೆಯನ್ನು ಬೆಳೆಸುವ ನುಡಿಮುತ್ತುಗಳು... ಇವೆಲ್ಲವೂ ಮುಪ್ಪುರಿಗೊಂಡಿದ್ದು ಇಲ್ಲಿನ ಕೊಡವ ಸಮಾಜದಲ್ಲಿ.

ಇಲ್ಲಿ ಭಾನುವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಪೊಮ್ಮಕ್ಕಡ ಕೂಟ ಕೊಡವ ಸಮಾಜ ಮಡಿಕೇರಿ ಏರ್ಪಡಿಸಿದ್ದ ‘ಕಕ್ಕಡ ನಮ್ಮೆ’ ವಿಶಿಷ್ಟವಾದ ಲೋಕವನ್ನೇ ತೆರೆದಿಟ್ಟಿತು. ನೂರಾರು ಮಂದಿ ಇದರಲ್ಲಿ ಭಾಗಿಯಾಗಿ ದಿನವಿಡೀ ಸಂ‌ಭ್ರಮಿಸಿದರು.

ಕಕ್ಕಡ ತಿನಿಸುಗಳ ಪ್ರದರ್ಶನ ಮತ್ತು ಪೈಪೋಟಿ ಸೂಜಿಗಲ್ಲಿನಂತೆ ಸೆಳೆಯಿತು. ಮದ್ದ್ ಪಾಯಿಸ, ತಾತೆ ತೊಪ್ಪು ಪಲ್ಯ, ಚೆಕ್ಕೆರ ಕುವಲೆ ಪುಟ್ಟ್, ಚೆಕ್ಕೆಕುರು ಪಜ್ಜಿ, ನಾಡ್ ಕೋಳಿ ಕರಿ, ಪಂದಿ ಕರಿ, ಞಂಡ್ ಕರಿ, ಬೈಂಬಳೆ ಕರಿ, ಕಾಡ್ ಮಾಂಗೆ ಕರಿ, ಬಾಳೆ ನುರ್‌ಕ್ ಸೇರಿದಂತೆ ಇನ್ನೂ ಅನೇಕ ಕಕ್ಕಡ ತಿಂಗಳ ವಿಶೇಷ ತಿನಿಸುಗಳ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಹಲವು ಮಂದಿ ಭಾಗಿಯಾದರು.

ADVERTISEMENT

ಮತ್ತೊಂದು ಕಡೆ ಅಕಾಡೆಮಿ ಪ್ರಕಟಿತ ಪುಸ್ತಕಗಳ ಪ್ರದರ್ಶನ, ಮಾರಾಟವೂ ನಡೆದಿತ್ತು. ಕೆಲವೊಂದು ಪುಸ್ತಕಗಳಿಗೆ ವಿಶೇಷವಾದ ರಿಯಾಯಿತಿಯನ್ನೂ ನೀಡಲಾಗಿತ್ತು. ಮಹಿಳೆಯರ ಅಂಗಡಿ ಮಳಿಗೆಗಳಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇತ್ತು. ಇವೆಲ್ಲಕ್ಕೂ ಮಿಗಿಲಾಗಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರನ್ನು ರಂಜಿಸಿತು.

ಮೈಸೂರಿನ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ‘ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ’ ಎಂದು ಪ್ರತಿಪಾದಿಸಿದರು. ‘ದೃಢ ನಿರ್ಧಾರ ಕೈಗೊಂಡು ಆತ್ಮವಿಶ್ವಾಸದಿಂದ ಕಠಿಣ ಪರಿಶ್ರಮ ಹಾಕಿದ್ದಲ್ಲಿ ಸಾಧನೆ ಸಿದ್ಧಿಸುತ್ತದೆ’ ಎಂದು ಹೇಳಿದರು.

ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಮುಚ್ಚುವ ಹಂತದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಯಿತು. ಇಂದು ಆಸ್ಪತ್ರೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.

‘ಕಕ್ಕಡ ತಿಂಗತ್‌ರ ನೈಪು-ಪೈಪು-ತೀನಿ’ ವಿಷಯದ ಕುರಿತು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ವಿಚಾರ ಮಂಡಿಸಿದರು. ‘ಕಕ್ಕಡದ ಅವಧಿ ಕೆಟ್ಟದು ಎಂಬ ತಪ್ಪು ತಿಳಿವಳಿಕೆ ಹಲವರಲ್ಲಿದೆ. ಕಕ್ಕಡ ನಿಜಕ್ಕೂ ಪೂಜ್ಯವಾದ ತಿಂಗಳು. ಭೂಮಿ ತಾಯಿಗೆ ನೀರುಣಿಸುವ ಸಮಯವಿದು’ ಎಂದು ಹೇಳಿದರು.

ಹಿಂದೆ ಕಕ್ಕಡ ತಿಂಗಳಿನಲ್ಲಿ ಗದ್ದೆ ಕೆಲಸ ಹೆಚ್ಚಾಗಿರುತ್ತಿತ್ತು. ಎಡೆಬಿಡದೇ ಮಳೆ ಸುರಿಯುತ್ತಿತ್ತು. ಹಾಗಾಗಿ, ಸಭೆ, ಸಮಾರಂಭಗಳನ್ನು ನಡೆಸಬಾರದು ಎಂಬ ಭಾವನೆ ಬೇರೂರಿತು ಎಂದು ಹೇಳಿದರು.

ಅಡುಗೆಗೆ ಮಣ್ಣಿನ ಪಾತ್ರೆಗಳನ್ನು ಬಳಸಬೇಕು, ‘ವಿನಿಗರ್’ ಬದಲು ಕಾಚಂಪುಳಿ ಉಪಯೋಗಿಬೇಕು. ತೋಟಗಳಲ್ಲಿ ಹಳೆಯ ಕಾಲದ ಮರಗಳನ್ನು ಬೆಳೆಸಬೇಕು. ಯುವ ಪೀಳಿಗೆ ಕೊಡಗಿನಲ್ಲೇ ನೆಲೆಸುವಂತಾಗಬೇಕು. ಕೊಡವಾಮೆಯ ಉಳಿವಿಗೆ ಎಲ್ಲರೂ ಪಣತೊಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ, ‘ಕಕ್ಕಡ ತಿಂಗಳಲ್ಲಿ ಮದ್ದು ಸೊಪ್ಪಿನಿಂದ ತಯಾರಿಸುವ ಖಾದ್ಯಗಳನ್ನು ಸೇವಿಸುವುದರಿಂದ ಆರೋಗ್ಯ ವರ್ಧಿಸುತ್ತದೆ’ ಎಂದು ಹೇಳಿದರು.

ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಮ್ಮ ಮಾತನಾಡಿ, ‘ಮಕ್ಕಳಿಗೆ ಒಳ್ಳೆಯ ಗುಣ, ನಡತೆಯನ್ನು ಹೇಳಿಕೊಡಬೇಕು. ಅವರಿಗಾಗಿ ಸಮಯ ಮೀಸಲಿಡಬೇಕು’ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಹಿಂದಿನ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವವರು ಕ್ಷೀಣಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಸಿ.ಗಿರೀಶ್, ಪೊಮ್ಮಕ್ಕಡ ಕೂಟ ಕೊಡವ ಸಮಾಜದ ಕಾರ್ಯದರ್ಶಿ ಬೊಳ್ಳಜಿರ ಯಮುನಾ ಅಯ್ಯಪ್ಪ ಭಾಗವಹಿಸಿದ್ದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಪೊಮ್ಮಕ್ಕಡ ಕೂಟ ಕೊಡವ ಸಮಾಜದ ಮಡಿಕೇರಿ ಭಾನುವಾರ ಏರ್ಪಡಿಸಿದ್ದ ‘ಕಕ್ಕಡ ನಮ್ಮೆ’ಯಲ್ಲಿ ಕಕ್ಕಡದ ವಿಶೇಷ ತಿನಿಸುಗಳ ಸ್ಪರ್ಧೆಯನ್ನು ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಉದ್ಘಾಟಿಸಿ ತಿನಿಸುಗಳ‌ನ್ನು ಸವಿದರು
‘ಕಕ್ಕಡ ನಮ್ಮೆ’ಯಲ್ಲಿದ್ದ ವೈವಿಧ್ಯಮಯವಾದ ತಿನಿಸುಗಳು
‘ಕಕ್ಕಡ ನಮ್ಮೆ’ಯಲ್ಲಿ ಭಾಗವಹಿಸಿದ್ದ ಸಭಿಕರು
‘ಕಕ್ಕಡ ನಮ್ಮೆ’ಯಲ್ಲಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.