ADVERTISEMENT

ಸುಂಟಿಕೊಪ್ಪ: ಕೈ ಬೀಸಿ ಕರೆಯುತ್ತಿದೆ ‘ಡಿ ಬ್ಲಾಕ್’, ಮುಕ್ಕೋಡ್ಲು

ಸುನಿಲ್ ಎಂ.ಎಸ್.
Published 11 ಜುಲೈ 2024, 5:15 IST
Last Updated 11 ಜುಲೈ 2024, 5:15 IST
ಕಣ್ಮನ ಸೆಳೆಯುತ್ತಿರುವ ಮುಕ್ಕೋಡ್ಲು ಜಲಪಾತ
ಕಣ್ಮನ ಸೆಳೆಯುತ್ತಿರುವ ಮುಕ್ಕೋಡ್ಲು ಜಲಪಾತ   

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಮಳೆ‌ ಇಳಿಮುಖವಾಗಿದ್ದರೂ, ಜಲಪಾತಗಳ ನೀರಿನ ಪ್ರಮಾಣ ಕಡಿಮೆಯಾಗದೆ ತನ್ನ ಸೊಬಗನ್ನು ತೋರಿಸಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ‌ ಕರೆಯುತ್ತಿದೆ.

ಈ ಜಲಪಾತಗಳು ಮೈದುಂಬಿಕೊಂಡು ಅಸಾಧಾರಣ ಚೆಲುವನ್ನು ಹೊರಸೂಸುತ್ತಿವೆ. ಹಸಿರ ಸಿರಿಯ ನಡುವೆ ಬಂಡೆಗಳ ನಡುವೆ ನರ್ತಿಸುತ್ತಾ ಹಾಲ್ನೋರೆಯಂತೆ ಧುಮ್ಮಿಕ್ಕುವ - ‘ಜಲಕನ್ಯೆಯರ’ರನ್ನು ನೋಡುವುದೇ ಕಣ್ಣಿಗೆ ಆನಂದ.  ಮಳೆಗಾಲದಲ್ಲಂತೂ‌ ಅವುಗಳ‌ ನರ್ತನ ನೋಡಲು ಕಣ್ಣೆರಡು ಸಾಲದು.

ಕೊಡಗಿನ ಸೌಂದರ್ಯಯುತ ಜಲಪಾತಗಳಲ್ಲಿ ‘ಡಿ ಫಾಲ್ಸ್’ ಮುಂಚೂಣಿಯಲ್ಲಿ ನಿಲ್ಲುವಂತದ್ದು. ಸೌಂದರ್ಯದ ರಾಶಿಯನ್ನೇ ಮೈತುಂಬಿಕೊಂಡ ಈ ಜಲಪಾತ ಅತ್ಯಂತ ಮನಮೋಹಕ ಎನಿಸಿದೆ.

ADVERTISEMENT

ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಕೆದಕಲ್ ಎಂಬ ಸ್ಥಳವಿದ್ದು, ಅಲ್ಲಿಂದ ಎಡಕ್ಕೆ ತಿರುಗಿ 2 ಕಿ.ಮೀ ದೂರದಲ್ಲಿರುವ ಖಾಸಗಿ ತೋಟದ ರಮಣೀಯ ಸೊಬಗಿನ ನಡುವೆ ಕಲ್ಲು ಬಂಡೆಗಳ ನಡುವೆ ಜುಳುಜುಳನೇ ಕರ್ಣಕ್ಕೆ ಹಿತವಾದ ಶಬ್ದದೊಂದಿಗೆ ಹರಿಯುವ ‘ಡಿ ಬ್ಲಾಕ್ ಫಾಲ್ಸ್’ ಅನ್ನು ನೋಡುವುದೇ ಚೆಂದ. ಇದರ ಹರಿವು ಎಂತಹವರಲ್ಲೂ ಸೋಜಿಗ ಎನಿಸಿದೆ ಇರದು. ಬೇಸಿಗೆಯಲ್ಲಿ ಕಾಣ ಸಿಗದ ಈ ಜಲಪಾತ, ಮಳೆಗಾಲದಲ್ಲಂತೂ ಮೈ ಚಾಚಿ ಪ್ರವಾಸಿಗರನ್ನು ತನ್ನತ್ತ ಬರಸೆಳೆಯುತ್ತದೆ.

ಹೊರಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರಿಗೆ ಅಷ್ಟೊಂದು ಪರಿಚಯವಾಗದಿದ್ದರೂ‌, ಈ‌ ಭಾಗದ ಜನರು ಮಾತ್ರ ಮಳೆಗಾಲದಲ್ಲಿ ವೀಕ್ಷಿಸಲು ತುದಿಗಾಲಿ‌ನಲ್ಲಿ ನಿಲ್ಲುತ್ತಾರೆ.

ರಾಷ್ಟ್ರೀಯ ಹೆದ್ದಾರಿ 175ರ ಕೆದಕಲ್ ಗ್ರಾಮದಲ್ಲಿ ಸಿಟಿ ಬಸ್‌ನಲ್ಲಿ ಇಳಿದ ನಂತರ ಅಲ್ಲಿಗೆ ನಡೆದುಕೊಂಡೆ ಹೋಗಬೇಕಾಗುತ್ತದೆ. ಸ್ವಂತ ವಾಹನಗಳ ಮೂಲಕ ಬಂದರೆ ಅದರ ತಟದವರೆಗೂ ಹೋಗಿ ಆಸ್ವಾದಿಸಬಹುದಾಗಿದೆ.

ಮುಕ್ಕೋಡ್ಲು ಅಬ್ಬಿ ಜಲಪಾತ:

ಸುಂಟಿಕೊಪ್ಪ ಸಮೀಪದ ಮಾದಾಪುರ ವ್ಯಾಪ್ತಿಯ ಅಬ್ಬಿ ಜಲಪಾತವು ನಿಸರ್ಗದ ಮಡಿಲಲ್ಲಿ ಮಂದಹಾಸ ಬೀರುತ್ತಿದೆ. ಅಲ್ಲದೇ ಇದು ಮನಸ್ಸಿಗೆ ಹಿತಾನುಭವವನ್ನು ಕೂಡ ನೀಡುತ್ತಿದೆ.

ಸುಂಟಿಕೊಪ್ಪ ಮಾರ್ಗವಾಗಿ ಮಾದಾಪುರಕ್ಕೆ ತೆರಳಿ ಅಲ್ಲಿಂದ ಹಟ್ಟಿಹೊಳೆ ಗ್ರಾಮದಿಂದ‌ 7 ಕಿ.ಮೀ ದೂರದಲ್ಲಿರುವ ಈ ಜಲಪಾತ ಹರಿಯುವ ಸದ್ದು ಕಿವಿಗೆ ಸಂಗೀತ ನುಡಿಸಿದಂತೆ ಭಾಸವಾಗುತ್ತದೆ.

ಈ ಜಲಪಾತ ವೀಕ್ಷಿಸಲು ತೆರಳುವವರಿಗೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಮಡಿಕೇರಿ ಬಸ್ ನಿಲ್ದಾಣದಿಂದ ಕೆಎಸ್ಆರ್‌ಟಿಸಿ ಬಸ್‌ನ ವ್ಯವಸ್ಥೆಯಿದ್ದು, ಉಳಿದ ಸಮಯದಲ್ಲಿ ಸ್ವಂತ ವಾಹನವನ್ನೇ ಅವಲಂಬಿಸಬೇಕಾಗಿದೆ.

ಕಾನನದ‌ ನಡುವೆ ಪ್ರಕೃತಿ ಸೌಂದರ್ಯದ ನಡುವೆ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತ ನರ್ತನ ಮಾಡುವುದನ್ನು ನೋಡುವುದೇ ಮನಸ್ಸಿಗೆ ಮುದ‌ ನೀಡುತ್ತದೆ. ಇಂತಹ ರಮಣೀಯ ಜಲಪಾತಗಳು ಹೋಬಳಿಗೆ ಕಳಸಪ್ರಾಯ ಎನಿಸಿವೆ.

ಮೈದುಂಬಿಕೊಂಡು ಭೋರ್ಗರೆಯುತ್ತಿರುವ ಸುಂಟಿಕೊಪ್ಪ ಹೋಬಳಿಯ ಮುಕ್ಕೋಡ್ಲು ಜಲಪಾತ
ಸುಂಟಿಕೊಪ್ಪ ಸಮೀಪದಲ್ಲಿ ಧುಮ್ಮಿಕ್ಕುತ್ತಿರುವ ಡಿ ಬ್ಲಾಕ್ ಫಾಲ್ಸ್
ಹಸಿರ ಸಿರಿಯ ನಡುವೆ ಬೆಳ್ನೊರೆಯಂತೆ ಹರಿಯುತ್ತಿರುವ ಮುಕ್ಕೋಡ್ಲುವಿನ ಅಬ್ಬಿ ಜಲಪಾತದ ಸೊಬಗನ್ನು ದೂರದಿಂದಲೇ ಕಣ್ತುಂಬಿಕೊಳ್ಳಬಹುದು

Highlights - ಹೊರ ಜಿಲ್ಲೆಯವರಿಗೆ ಹೆಚ್ಚು ಪರಿಚಿತವಲ್ಲ ಜಲಪಾತಗಳು ಮಳೆಯಿಂದಾಗಿ ಹರಿಯುತ್ತಿವೆ ಎರಡು ಜಲಧಾರೆಗಳು ಪ್ರಕೃತಿಪ್ರಿಯರಿಗೆ ರಸದೌತಣ ನೀಡುತ್ತಿವೆ ಜಲಪಾತಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.