ADVERTISEMENT

ವಾಹನ ಡಿಕ್ಕಿ: ಮಾವುತ ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:45 IST
Last Updated 20 ಜುಲೈ 2020, 15:45 IST

ಗೋಣಿಕೊಪ್ಪಲು: ಆನೆ ಓಡಿಸಲು ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಮಾವುತನಿಗೆ ಡಿಕ್ಕಿ ಹೊಡೆದ ಪರಿಣಾಮ ಮಾವುತ ಮೃತಪಟ್ಟ ಘಟನೆ ತಿತಿಮತಿ ಸಮೀಪದ ಮತ್ತಿಗೋಡಿನಲ್ಲಿ ಜುಲೈ 16ರಂದು ನಡೆದಿದೆ.

ಮತ್ತಿಗೋಡು ಸಾಕಾನೆ ಶಿಬಿರದ ಜಮೇದಾರ್ ಜೆ.ವಿ. ತಿಮ್ಮ (45) ಮೃತಪಟ್ಟ ವ್ಯಕ್ತಿ.

ಸಾಕಾನೆ ಶಿಬಿರದ ಬಳಿಗೆ ಬರುತ್ತಿದ್ದ ಕಾಡಾನೆಗಳ ಹಿಂಡನ್ನು ತಿಮ್ಮ ಮರಳಿ ಕಾಡಿಗಟ್ಟಲು ಹೋಗುತ್ತಿದ್ದರು ಎನ್ನಲಾಗಿದೆ. ಹೆದ್ದಾರಿ ಬದಿಯಲ್ಲಿ ತೆರಳುತ್ತಿದ್ದ ತಿಮ್ಮನಿಗೆ ಗೋಣಿಕೊಪ್ಪಲು ಕಡೆಯಿಂದ ಬಂದ ಕೆ.ಆರ್.ನಗರದ ಕ್ಯಾಂಟರ್ ಡಿಕ್ಕಿ ಹೊಡೆದು ಕಾಲಿಗೆ ತೀವ್ರ ಗಾಯವಾಗಿತ್ತು. ಚಿಕಿತ್ಸೆಗಾಗಿ ವಿರಾಜಪೇಟೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ತಿಮ್ಮ ಕೊನೆ ಉಸಿರೆಳೆದಿದ್ದಾರೆ.

ADVERTISEMENT

ಪ್ರಕರಣ ದಾಖಲಿಸಿಕೊಂಡಿರುವ ಗೋಣಿಕೊಪ್ಪಲು ಪೊಲೀಸರು ಚಾಲಕ ರವಿ ಎಂಬಾತನ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಇದೇ ಮಾರ್ಗದಲ್ಲಿ ಒಂದು ವರ್ಷದ ಹಿಂದೆ ಶಿಬಿರದ ಸಾಕಾನೆಯೊಂದಕ್ಕೆ ಕೇರಳದ ಖಾಸಗಿ ಬಸ್ ಡಿಕ್ಕಿ ಹೊಡೆದು ಆನೆ ಮೃತ ಪಟ್ಟಿತ್ತು. ಇದರಿಂದ ವಾಹನಗಳ ವೇಗ ನಿಯಂತ್ರಿಸಲು ಅರಣ್ಯದ ಹೆದ್ದಾರಿಯಲ್ಲಿ 500 ಮೀಟರ್ ಒಂದರಂತೆ ರಸ್ತೆ ಉಬ್ಬು ನಿರ್ಮಿಸಲಾಗಿದೆ. ಆದರೂ ಕೆಲವು ಚಾಲಕರು ವೇಗವಾಗಿ ಬರುತ್ತಾರೆ ಎಂದು ಶಿಬಿರದ ಮಾವುತರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.