ADVERTISEMENT

ವಿದ್ಯಾರ್ಥಿ ದೆಸೆಯಲ್ಲೆ ರಾಷ್ಟ್ರಪ್ರಶಸ್ತಿ

200ಕ್ಕೂ ಅಧಿಕ ಏಕವ್ಯಕ್ತಿ ಪ್ರದರ್ಶನ ನೀಡಿದ ಪೊನ್ನಂಪೇಟೆಯ ಪ್ರೇಕ್ಷಾಭಟ್

ಕೆ.ಎಸ್.ಗಿರೀಶ್
Published 3 ಜುಲೈ 2024, 6:29 IST
Last Updated 3 ಜುಲೈ 2024, 6:29 IST
ಪ್ರೇಕ್ಷಾಭಟ್
ಪ್ರೇಕ್ಷಾಭಟ್   

ಮಡಿಕೇರಿ: ಅತಿ ದೀರ್ಘಕಾಲ ನೃತ್ಯ ಮಾಡಿದ ಹೆಗ್ಗಳಿಕೆ ಹೊಂದಿರುವ, 20ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ  200ಕ್ಕೂ ಅಧಿಕ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿರುವ ವಿದ್ಯಾರ್ಥಿನಿ ಪ್ರೇಕ್ಷಾಭಟ್ ಜಿಲ್ಲೆಯ ಕಲಾವಿದರ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂತಹವರು.

ಪೊನ್ನಂಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದ ಅಶೋಕ್‌ಭಟ್ ಹಾಗೂ ವಿದ್ಯಾಶ್ರೀ ಅವರ ಪುತ್ರಿಯಾದ ಇವರು ಸದ್ಯ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿದ್ದಾರೆ. ಇಷ್ಟರಲ್ಲಾಗಲೇ ಅವರು 4 ಪ್ರಕಾರದ ನೃತ್ಯದಲ್ಲಿ ಪ್ರದರ್ಶನ ನೀಡಬಲ್ಲ ಅಪರೂಪದ ಕೊಡಗಿನ ಕಲಾವಿದೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

ಇವರು ಭರತನಾಟ್ಯ, ಕೂಚುಪುಡಿ, ಜನಪದ ಮತ್ತು ವೆಸ್ಟರ್ನ್‌ ಶೈಲಿಯಲ್ಲಿ ಪ್ರದರ್ಶನ ನೀಡುವ ನೈಪುಣ್ಯತೆ ಸಾಧಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲೆ ಇವರು ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧಿಸಿದ್ದ 2021ರಲ್ಲಿ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಆಕಾಡೆಮಿ ಆಯೋಜಿತ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ದೀರ್ಘಕಾಲ ಭರತನಾಟ್ಯ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಇಲ್ಲಿ ಇವರು 16 ಗಂಟೆಗಳ ಕಾಲ ನಿರಂತರವಾಗಿ ನೃತ್ಯ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ADVERTISEMENT

2022ರಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಆಲ್‌ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವೆಲ್‌ನಲ್ಲಿ ಭಾಗಿಯಾಗಿದ್ದ ಇವರು ಧಾರವಾಡ ಮತ್ತು ಮಂಡ್ಯದಲ್ಲಿ ನಡೆದ ಮಕ್ಕಳ ಸಮ್ಮೇಳನದಲ್ಲಿ, ಕೇರಳದ ಕಣ್ಣೂರು, ತಿರುನೆಲ್ಲಿಗಳಲ್ಲಿ, ನಮ್ಮ ರಾಜ್ಯದ ಮಂತ್ರಾಲಯ ಮತ್ತು ಕೊಲ್ಲೂರುಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಜನಮನ ಗೆದ್ದಿದ್ದಾರೆ.

ತನ್ನ 5ನೇ ವಯಸ್ಸಿನಿಂದಲೇ ನೃತ್ಯ ಕಲಿಯಲು ಆರಂಭಿಸಿದ ಪ್ರೇಕ್ಷಾಭಟ್ ಮೊದಲಿಗೆ ಪೊನ್ನಂಪೇಟೆಯ ವಿದ್ವಾನ್ ವಿ.ಟಿ.ಶ್ರೀನಿವಾಸ್ ಅವರ ಬಳಿ, ನಂತರ ವಿದುಷಿ ಜಿ.ಆರ್.ದೀವಿಕಾ ಬಳಿ ನೃತ್ಯ ಕಲಿತರು. ಭರತನಾಟ್ಯದಲ್ಲಿ ಸೀನಿಯರ್‌ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿರುವ ಇವರು ಸದ್ಯ, ವಿದ್ವತ್ ಪರೀಕ್ಷೆಗಾಗಿ ವಿದುಷಿ ಧನ್ಯಶ್ರೀ ಪಿ.ಎನ್. ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. 2023ರಲ್ಲಿ ‘ರಂಗಪ್ರವೇಶ’ವನ್ನೂ ಇವರು ಪೂರ್ಣಗೊಳಿಸಿದ್ದಾರೆ.

ಇವರಿಗೆ ಇಷ್ಟರಲ್ಲಾಗಲೇ 20ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳು, 10ಕ್ಕೂ ಅಧಿಕ ರಾಜ್ಯ ಪ‍್ರಶಸ್ತಿಗಳು ಮಾತ್ರವಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಡ ಮಾಡುವ ಪ್ರತಿಭಾ ಪುರಸ್ಕಾರಗಳೂ ಸಂದಿವೆ.

ಸದ್ಯ, ಇವರು ಪೊನ್ನಂಪೇಟೆಯಲ್ಲಿ ‘ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆ’ಯ ಮೂಲಕ ಮಕ್ಕಳಿಗೆ ನೃತ್ಯ ಕಲಿಸುವ ಮೂಲಕ ಕಲೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯದಲ್ಲಿಯೂ ನಿರತರಾಗಿದ್ದಾರೆ.

‘ಪ್ರಜಾವಾಣಿ’ ಅವರನ್ನು ಸಂಪರ್ಕಿಸಿದಾಗ, ‘ಭರತನಾಟ್ಯ ಸೇರಿದಂತೆ ಇತರೆ ಶಾಸ್ತ್ರೀಯ ನೃತ್ಯಗಳನ್ನು ಉಳಿಸುವ ಕೆಲಸ ಮಾಡಬೇಕು. ಮಕ್ಕಳು ಈ ನೃತ್ಯಗಳನ್ನು ಕಲಿಯಲು ಪೋಷಕರು ಪ್ರೋತ್ಸಾಹ ನೀಡಬೇಕು. ಸದ್ಯ, ಭರತನಾಟ್ಯ ದೊಡ್ಡ ಬಿಕ್ಕಟ್ಟಿನಲ್ಲಿದೆ. ಇತ್ತೀಚೆಗೆ ಆಯೋಜನೆಯಾಗುತ್ತಿರುವ ಬಹುತೇಕ ಸ್ಪರ್ಧೆಗಳಲ್ಲಿ ಭರತನಾ‌ಟ್ಯ ಹೊರತುಪಡಿಸಿ ಉಳಿದ ನೃತ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಸರಿಯಲ್ಲ. ಎಲ್ಲ ನೃತ್ಯ ಪ್ರಕಾರಗಳಿಗೂ ಸಮಾನ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಪ್ರೇಕ್ಷಾಭಟ್
ಪ್ರೇಕ್ಷಾಭಟ್
ಪ್ರೇಕ್ಷಾ ಭಟ್

ಕೊಡಗಿನಲ್ಲಿ ಅತಿ ವಿರಳ ಕಲಾವಿದರ ಪೈಕಿ ಪ್ರೇಕ್ಷಾಭಟ್ ಒಬ್ಬರು ಎಲ್ಲ ನೃತ್ಯ ಪ್ರಕಾರಗಳಿಗೂ ಸಮಾನ ಆದ್ಯತೆ ನೀಡಲು ಮನವಿ ಕಲೆಯನ್ನು ಮುಂದಿನ ತಲೆಮಾರಿಗೆ ಕಲಿಸುತ್ತಿರುವ ಅಪರೂಪದ ಸಾಧಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.