ADVERTISEMENT

29ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥ: ಡಾ.ಮಂತರ್ ಗೌಡ

ಹುದುಗೂರು: ಜಾಗ ಹಂಚಿಕೆಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:13 IST
Last Updated 23 ಅಕ್ಟೋಬರ್ 2024, 5:13 IST
ಕುಶಾಲನಗರ ಪೊಲೀಸ್ ಸಮುದಾಯ ಭವನದಲ್ಲಿ ಶಾಸಕ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಹುದುಗೂರು ಅರಣ್ಯ ಇಲಾಖೆಯ ಜಾಗ ಹಂಚಿಕೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿದರು.
ಕುಶಾಲನಗರ ಪೊಲೀಸ್ ಸಮುದಾಯ ಭವನದಲ್ಲಿ ಶಾಸಕ ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಹುದುಗೂರು ಅರಣ್ಯ ಇಲಾಖೆಯ ಜಾಗ ಹಂಚಿಕೆ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿದರು.   

ಕುಶಾಲನಗರ: ತಾಲ್ಲೂಕಿನ ಹುದುಗೂರು ಕಾಳಿದೇವರ ಹೊಸೂರು ಗ್ರಾಮದ ಸರ್ವೇ ನಂಬರ್ 2/1ರ 2.53 ಎಕರೆ ಜಾಗದಲ್ಲಿ ಸಾಮಾಜಿಕ ಅರಣ್ಯ, ಗೋಸದನ, ಪಶುಆಸ್ಪತೆ ಹಾಗೂ ಹಾಲಿನ ಡೈರಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಅರಣ್ಯ ಇಲಾಖೆ ಹೆಸರಿನಲ್ಲಿರುವ‌ ಈ ಜಾಗವನ್ನು ಇತರೆ ಇಲಾಖೆಗಳಿಗೂ ಹಂಚಿಕೆ ಮಾಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.

ಇಲ್ಲಿನ ಪೊಲೀಸ್ ಸಮುದಾಯ ಭವನದಲ್ಲಿ ಶಾಸಕ ಡಾ.ಮಂತರ್‌ಗೌಡ ಅವರು ಮಂಗಳವಾರ ಕಂದಾಯ, ಅರಣ್ಯ, ಪಶುಪಾಲನೆ ಇಲಾಖೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ ಜಾಗದ ಸಮಸ್ಯೆ ಹಾಗೂ ಪರಿಹಾರ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಎಚ್.ಎಸ್.ರವಿ ಮಾತನಾಡಿ, ‘ಹುದುಗೂರು ಗ್ರಾಮದಲ್ಲಿ 1925ರಲ್ಲಿ ಗೋಸದನ ಆರಂಭಗೊಂಡಿತು. ನಂತರ, ಮೈಸೂರು ರಾಜರು ಗ್ರಾಮಾಂತರ ಪಶುಶಾಲೆಯಾಗಿ ಆರಂಭಿಸಿದರು. 1964ರಿಂದ ಪಶು ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯ ಕೇಂದ್ರಕ್ಕೆ 1971ರಲ್ಲಿ 2.20 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. 2.20 ಎಕರೆ ಜಾಗದಲ್ಲಿ 80 ಸೆಂಟ್ ಜಾಗವನ್ನು ಪಶು ಇಲಾಖೆ, ಗೋಸದನ ಹಾಗೂ ಹಾಲಿನ ಡೇರಿಗೆ ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಸಾಮಾಜಿಕ ಅರಣ್ಯ ಇಲಾಖೆಯ ಡಿಆರ್‌ಎಫ್ಒ ಭವ್ಯಾ ಮಾತನಾಡಿ, ‘ಹುದುಗೂರು ಸಸ್ಯ ಕೇಂದ್ರದಲ್ಲಿ ಪ್ರತಿ ವರ್ಷ ಲಕ್ಷಾಂತರ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಇಲಾಖೆಯ ಅಧೀನದಲ್ಲಿರುವ ಜಾಗವನ್ನು ಇತರೆ ಇಲಾಖೆಗೆ ಬಿಟ್ಟು ಕೊಟ್ಟರೆ ನಮಗೆ ಜಾಗದ ಕೊರತೆ ಉಂಟಾಗುತ್ತದೆ‌’ ಎಂದು ಹೇಳಿದರು.

ಜಿಲ್ಲಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗಮೂರ್ತಿ ದೊಡ್ಡಮನಿ ಮಾತನಾಡಿ, ‘70 ಸೆಂಟ್ ಜಾಗವನ್ನು ಪಶುಪಾಲನಾ ಇಲಾಖೆಗೆ ಹಸ್ತಾಂತರಿಸಿದರೆ ಹುದುಗೂರು ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತದೆ’ ಎಂದು ಹೇಳಿದರು.

ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ‘ಸಾಮಾಜಿಕ ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡುವಾಗ ಗೋಸದನ, ಪಶುಪಾಲನೆ ಆಸ್ಪತ್ರೆ ಕಟ್ಟಡ ಹಾಗೂ ವಾಲಿಬಾಲ್ ಮೈದಾನವನ್ನು ಬಿಟ್ಟು ಉಳಿದ ಜಾಗವನ್ನು ಅರಣ್ಯ ಇಲಾಖೆಗೆ ಮಂಜೂರು ಮಾಡಿದ್ದು, 80 ಸೆಂಟ್ ಜಾಗವನ್ನು ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಗ್ರಾಮಸ್ಥರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಶಾಸಕ ಮಂತರ್ ಗೌಡ ಮಾತನಾಡಿ, ‘ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಜಾಗದ ಸಮಸ್ಯೆ ಬಗೆಹರಿಸಬೇಕಾಗಿದೆ. ಸಾಮಾಜಿಕ ಅರಣ್ಯ ಇಲಾಖೆಯು ಕಾರ್ಯ ನಿರ್ವಹಿಸಬೇಕು. ಅದೇ ರೀತಿ ಪಶುಪಾಲನೆ ಆಸ್ಪತ್ರೆ ಗೋಸದನ, ಹಾಲಿನ ಡೇರಿ ಕೂಡ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಈಗ ಇರುವ ಜಾಗವನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಅ. 29ರಂದು ಮಡಿಕೇರಿ ಸಿಸಿಎಫ್ ಕಚೇರಿಯಲ್ಲಿ ಸಭೆ ನಡೆಸಿ ಜಾಗದ ಸಮಸ್ಯೆ ಇತ್ಯರ್ಥಕ್ಕೆ ಒಮ್ಮತ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಈ ವೇಳೆ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ರೈತ ಸಂಘದ ಮುಖಂಡರಾದ ಗಣೇಶ್, ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯೆ ರತ್ಮಮ್ಮ, ಗ್ರಾಮದ ಮುಖಂಡರಾದ ಉಮಾಪ್ರಭಾಕರ್, ಟಿ.ಎಂ.ಚಾಮಿ, ಮಲ್ಲಪ್ಪ, ರವಿ.ಮಂಜುನಾಥ್, ಸುಮನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.