ಕುಶಾಲನಗರ: ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶದಿಂದ ವಂಚಿಸಲಾಗುತ್ತಿದೆ ಎಂದು ಚಿಕ್ಕ ಅಳುವಾರ ಗ್ರಾಮಸ್ಥರು ಸೋಮವಾರ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಆರೋಪಿಸಿದ ಸ್ಥಳೀಯರು ಕೇಂದ್ರದ ಪ್ರವೇಶ ದ್ವಾರದ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ.ಬೇಬಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸ್ಥಳೀಯವಾಗಿ ಸ್ನಾತಕೋತ್ತರ ಪದವಿಗಳನ್ನು ಪಡೆದ ನೂರಾರು ಮಂದಿ ನಿರುದ್ಯೋಗಿ ಯುವಕ ಯುವತಿಯರಿದ್ದು ಅವರಿಗೆ ಉದ್ಯೋಗಾವಕಾಶದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಕೆ.ಕೆ. ಧರ್ಮಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ‘ಸ್ಥಳೀಯರಿಗೆ ಉದ್ಯೋಗದಲ್ಲಿ ಆದಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಯಾರಿಂದಲೂ ಹಣ ಪಡೆದು ಉದ್ಯೋಗ ನೀಡಿರುವುದಿಲ್ಲ‘ ಎಂದರು.
ಮಂಗಳೂರು ವಿವಿ ಕುಲಪತಿಗಳ ಗಮನಕ್ಕೆ ಸ್ಥಳೀಯರ ಅಹವಾಲು ಹಾಗೂ ಅಭಿಪ್ರಾಯಗಳನ್ನು ತಿಳಿಸಲಾಗುವುದು ಎಂದು ಧರ್ಮಪ್ಪ ಹೇಳಿದರು.
ಪಂಚಾಯಿತಿ ಸದಸ್ಯರಾದ ಶೋಭಪ್ರಕಾಶ್, ಶಿವಕುಮಾರ್, ತೀರ್ಥಾನಂದ, ಮಾಜಿ ಸದಸ್ಯ ಟಿ.ಎಲ್.ಮಹೇಶ್, ಚಿಕ್ಕ ಅಳುವಾರ ದೇವಾಲಯ ಸಮಿತಿ ಎ.ಕೆ. ಸುಂದರ, ಪ್ರಮುಖರಾದ ಅರ್ಜುನ್, ಎ.ಎಸ್.ಮಹೇಶ್, ಜನಾರ್ಧನ, ಮಂಜು, ಉದಯಕುಮಾರ್, ದಿನೇಶ್, ಸುಗು, ಚಿಕ್ಕಯ್ಯ, ಬಾಲಪ್ಪ, ಗಣೇಶ್, ನಿರಂಜನ ಇದ್ದರು.
ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್ ಬಂದೋಬಸ್ತ್ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.