ADVERTISEMENT

ಆಟೋಗಳಿಗೆ ಜಿಲ್ಲಾ ಪರವಾನಗಿ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 5:38 IST
Last Updated 10 ಜುಲೈ 2024, 5:38 IST

ವಿರಾಜಪೇಟೆ: ಜಿಲ್ಲೆಯ ವಿವಿಧ ಭಾಗಗಳಿಂದ ಆಟೋಗಳು ಗ್ಯಾಸ್ ತುಂಬಿಸಲು ಸಿ.ಎನ್.ಜಿ. ಬಂಕ್ ಇರುವ ವಿರಾಜಪೇಟೆ ಮತ್ತು ಕುಶಾಲನಗರಕ್ಕೆ ಬರಬೇಕಾಗಿರುವುದರಿಂದ ರಿಕ್ಷಾಗಳಿಗೆ ಜಿಲ್ಲಾ ಪರವಾನಗಿ ‌ನೀಡಬೇಕು ಎಂದು ಜೈಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎನ್.ಎನ್. ಶಿವು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಪ್ರತಿದಿನ  ಹೊಸ ಸಿ.ಎನ್.ಜಿ ಆಟೋಗಳು ಬರುತ್ತಿದ್ದು, ಸಿ.ಎನ್.ಜಿ ತುಂಬಿಸಲು ದೂರದ ಸ್ಥಳಗಳಿಗೆ ಸಂಚರಿಸುವಾಗ ಅವಘಡಗಳು ಸಂಭವಿಸಿದರೆ  ವಿಮೆ ದೊರೆಯದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಜಿಲ್ಲಾ ಪರವಾನಗಿ ನೀಡಬೇಕು.

ಹೊಸ ಆಟೋಗಳು ರಸ್ತೆಗಿಳಿದರೂ ಪರವಾನಿಗೆ ಪತ್ರ ನೀಡಲು ಸುಮಾರು ನಾಲ್ಕು ತಿಂಗಳಾದರು ಕಾಯಬೇಕಾಗಿದೆ. ನೋಂದಣಿ ಪತ್ರವಿಲ್ಲದೆ ವಾಹನ ಚಾಲನೆ ಮಾಡದಂತೆ ಪೋಲೀಸರು ತಡೆಯುತ್ತಿದ್ದಾರೆ. ಚಾಲನೆ ಮಾಡದೇ, ಬಾಡಿಗೆ ಹಣವಿಲ್ಲದೆ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಪಾವತಿಗೆ ತೊಂದರೆ ಆಗುತ್ತಿದೆ. ವಿರಾಜಪೇಟೆ ನಗರ ಠಾಣೆಯಲ್ಲಿ ವಿ.ಟಿ.ಪಿ.ಎಸ್ ಸಂಖ್ಯೆಯನ್ನು ಪೊಲೀಸರು ಆಟೋಗಳಿಗೆ ನೀಡುತ್ತಿಲ್ಲ.  ಆದರೆ, ಕೆಲವು ಆಟೋಗಳು ನಗರದ ವಿ.ಟಿ.ಪಿ.ಎಸ್ ಸಂಖ್ಯೆ ಪಡೆದು ಠಾಣೆಯ ಮಿತಿ ದಾಟಿ ಕಡಂಗ, ಭೇತ್ರಿ, ಬಿಟ್ಟಂಗಾಲದಂತಹ ಗ್ರಾಮಾಂತರದಲ್ಲಿ ಚಲಿಸುತ್ತಿವೆ ಎಂದು ದೂರಿದರು.

ಪಟ್ಟಣದ ರಸ್ತೆ ವಿಸ್ತರಣೆಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕಿವೆ.  ಅಂಗಡಿಗಳ ಮಾಲಿಕರೇ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತಮ್ಮ ವಾಹನಗಳನ್ನು ಅಂಗಡಿ ಮುಂಭಾಗದಲ್ಲಿ ನಿಲುಗಡೆಗೊಳಿಸಿರುತ್ತಾರೆ. ಸಾರ್ವಜನಿಕರಿಗೆ ವಾಹನ‌ ನಿಲುಗಡೆಗೆ ಜಾಗವೇ ಇರುವುದಿಲ್ಲ ಎಂದರು.

ಕೆಲವರು ಆಟೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುವುದರಿಂದ ಪ್ರತಿದಿನ ಕಿರಿಕಿರಿ ಅನುಭವಿಸಬೇಕಾಗಿದೆ. ಪಟ್ಟಣದಲ್ಲಿ ಪ್ರಯಾಣಿಕರಿಗೆ, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಶೌಚಗೃಹದ ಅಗತ್ಯವಿದೆ.   ನಿರ್ಮಿಸುವ ಭರವಸೆ ನೀಡಿದ್ದ ಶಾಸಕರು ಜಾಗ ಗುರುತಿಸಿಕೊಟ್ಟರೂ ಈವರೆಗೆ  ಆಸಕ್ತಿ ವಹಿಸಿಲ್ಲ.  ಅವರಲ್ಲಿ  ಮತ್ತೊಮ್ಮೆ ಒತ್ತಾಯಿಸುತ್ತಿದ್ದೇವೆ ಎಂದರು.

  ಸಂಘದ ಪ್ರಧಾನ ಕಾರ್ಯದರ್ಶಿ ಜೀವನ್, ಸಹಕಾರ್ಯದರ್ಶಿ ಜಾಕೋಬ್‌ ನರೋನ, ಉಪಾಧ್ಯಕ್ಷ ಜಗದೀಶ್, ಸಲಹೆಗಾರ ಪ್ರವೀಣ್, ನಿರ್ದೇಶಕರಾದ ದಿನೇಶ್, ಭಾಗೇಷ್, ಕುಶಾಲಪ್ಪ, ವಸಂತ, ಸುನೀಲ್, ಸಂದೀಪ್ ಬೆಳ್ಯಪ್ಪ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.