ವಿರಾಜಪೇಟೆ: ‘ರಾಷ್ಟ್ರೀಯ ಹಬ್ಬಗಳ ಆಚರಣೆಯ ಕುರಿತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ನಡೆಯುವ ಪೂವಭಾವಿ ಸಭೆಗಳಿಗೆ ಕೆಲ ಅಧಿಕಾರಿಗಳು ಗೈರು ಹಾಜರಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತಹ ವರ್ತನೆ ಮುಂದುವರಿದರೆ ನೋಟಿಸ್ ನೀಡಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ತಹಶೀಲ್ದಾರ್ ರಾಮಚಂದ್ರ ಅವರು ಎಚ್ಚರಿಕೆ ನೀಡಿದರು.
ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಕುರಿತು ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಭೆಗೆ ಕೆಲ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಕರ್ನಾಟಕ ರಾಜ್ಯೋತ್ಸವ ನಮ್ಮ ನೆಲದ ಕಾರ್ಯಕ್ರಮ. ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ನಿರ್ಲಕ್ಷ್ಯದಿಂದ ಗೈರಾಗುವುದು ಕನ್ನಡಕ್ಕೆ ಅಪಮಾನ ಮಾಡಿದಂತೆ. ಕೆಲ ಇಲಾಖೆಯ ಅಧಿಕಾರಿಗಳು ಸೂಕ್ತ ಸಹಕಾರ ನೀಡುತ್ತಿಲ್ಲ. ರಾಜ್ಯೋತ್ಸವ ಆಚರಣೆಯ ಸಂದರ್ಭ ಅಧಿಕಾರಿಗಳು ತುರ್ತು ಸಂದರ್ಭ ಹೊರತುಪಡಿಸಿ ತಪ್ಪದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಸೂಚಿಸಿದರು.
‘ಸ್ವಾತಂತ್ರ್ಯೋತ್ಸವದ ಸಂದರ್ಭ ಕಾರ್ಯಕ್ರಮಲ್ಲಿನ ನಿರೂಪಣೆಯ ಕುರಿತು ಸಭೆಯಲ್ಲಿ ದೂರುಗಳು ಕೇಳಿ ಬಂದವು. ಈ ಕುರಿತು ಮಾತನಾಡಿದ ತಹಶೀಲ್ದಾರ್ ರಾಮಚಂದ್ರ ಅವರು ಕಳೆದ ಬಾರಿಯ ಆದ ಪ್ರಮಾದ ನನ್ನ ಗಮನಕ್ಕೆ ಬಂದಿದೆ. ಈ ಬಾರಿ ಅಂತಹ ತಪ್ಪುಗಳಾಗದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರ ವಹಿಸುವಂತೆ’ ಸೂಚಿಸಿದರು.
‘ಸರ್ಕಾರದ ಸೂಚನೆಯಂತೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ 60ರ ಕನ್ನಡ ಬಳಸುವ ಕುರಿತು ಪುರಸಭೆ ಕಾರ್ಯ ಪ್ರವೃತ್ತವಾಗಬೇಕು. ಈ ಕಾರ್ಯಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ. ಅನ್ಯಭಾಷಿಕರು ಸೇರಿದಂತೆ ಎಲ್ಲರೂ ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸುವಂತೆ’ ಕೋರಿದರು.
ಸಭೆಯಲ್ಲಿ ಡಿ.ವೈ.ಎಸ್.ಪಿ ಮೋಹನ್ ಕುಮಾರ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್ ಪದ್ಮನಾಭ, ಸರ್ಕಾರಿ ಅಭಿಯೋಜಕ ನರೇಂದ್ರ ಕಾಮತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.