ADVERTISEMENT

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:45 IST
Last Updated 11 ಜುಲೈ 2024, 6:45 IST
ಸಭೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಅವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಅವರು ಮಾತನಾಡಿದರು.   

ವಿರಾಜಪೇಟೆ : ಜಿಲ್ಲೆಯ ಕಾಫಿ ತೋಟಗಳಲ್ಲಿ ಗುಂಪುಗುಂಪಾಗಿ ಬೀಡುಬಿಟ್ಟಿರುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಕಾಡಿಗಟ್ಟುವ ಕಾರ್ಯವಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದರು.

ಕಾಡಾನೆ ಮಾನವ ಸಂಘರ್ಷ, ವನ್ಯಜೀವಿಗಳ ಉಪಟಳ ಹಾಗೂ ರೈತರ ಸಮಸ್ಯೆ ಕುರಿತು ಬುಧವಾರ ವಿರಾಜಪೇಟೆಯಲ್ಲಿನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಡಾನೆಗಳನ್ನು ನಿಯಂತ್ರಿಸಲು ಅರಣ್ಯದಂಚಿನಲ್ಲಿ ನಿರ್ಮಾಣ ಮಾಡಿರುವ ಕಂದಕವನ್ನು ಆಳ ಮತ್ತು ಅಗಲವನ್ನು ವಿಸ್ತರಿಸಬೇಕು. ಕೆಲವು ಭಾಗಗಳಲ್ಲಿ ರೈಲ್ವೆ ಬ್ಯಾರಿ ಗೇಡ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿಲ್ಲ. ಅರಣ್ಯದಂಚಿನಲ್ಲಿ ಕಾಡಾನೆಗಳನ್ನು ನಿಯಂತ್ರಣಗೊಳಿಸುವ ಸಲುವಾಗಿ ಅಳವಡಿಸಿರುವ ಸೊಲಾರ್ ಬೇಲಿಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅರಣ್ಯ ಗಡಿ ಭಾಗಗಳಲ್ಲಿನ ಜನ ವಾಸಿಸುವ ಪ್ರದೇಶಗಳಲ್ಲಿ ವೀಕ್ಷಕ ಗೋಪುರ ನಿರ್ಮಿಸಿ ಕೃತಕ ಬುದ್ದಿಮತ್ತೆ ಕ್ಯಾಮರಾಗಳನ್ನು ಅಳವಡಿಸಬೇಕು. ವನ್ಯಜೀವಿ ಉಪಟಳಗಳಿಂದಾಗುವ ಹಾನಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಶೇ 20 ರಷ್ಟು ಹೆಚ್ಚಿಸಬೇಕು. ಅರಣ್ಯ ಇಲಾಖೆಯು ಮತ್ತಿಗೋಡು ಅರಣ್ಯ ಪ್ರದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ತಕ್ಷಣ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಅವರು ಮಾತನಾಡಿ, ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳ ಸಂಖ್ಯೆ 160 ರಿಂದ 170 ಎಂದು ಅಂದಾಜಿಸಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಸಾವಿರಕ್ಕಿಂತ ಅಧಿಕ ಕಾಡಾನೆಗಳಿವೆ. ಕಾಡಾನೆಗಳ ನಿಯಂತ್ರಣಕ್ಕೆ ರಾಜ್ಯ, ಕೇಂದ್ರ ಸರ್ಕಾರ, ಹಾಗೂ ಅರಣ್ಯ ಇಲಾಖೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಬರುತ್ತಿದೆ. ಆನೆ ಮಾನವ ಸಂಘರ್ಷದಿಂದಾಗುವ ಪ್ರಾಣ ಹಾನಿ, ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಸಹಾಯಧನ ವಿತರಣೆಯಲ್ಲಿ ವಿಳಂಬವಾಗದಂತೆ ಕ್ರಮವಹಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದು ನವಂಬರ್ ತಿಂಗಳ ಅಂತ್ಯದ ವೇಳೆಗೆ ಕೊಂಚ ಮಟ್ಟಿಗೆ ಸಿಬ್ಬಂದಿಗಳ ಕೊರತೆ ನಿಗಬಹುದು ಎಂದರು.

ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ದಾಹ ನೀಗಿಸಲು ನೀರಿನ ವ್ಯವಸ್ಥೆಗೆ ಕ್ರಮವಹಿಸಲಾಗುವುದು. ಕಾಡಾನೆ ಮಾನವ ಸಂಘರ್ಷ ಅನೇಕ ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಕೂಡಲೇ ಇದನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಆದರೆ ಸರ್ಕಾರ, ಇಲಾಖೆ ಮತ್ತು ತಜ್ಞರ ಸಲಹೆ ಸೂಚನೆಯ ಮೇರೆಗೆ ಸಮಸ್ಯೆಯ ಪರಿಹಾರಕ್ಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕೊಡಗು ಜಿಲ್ಲಾ ಘಟಕದ ಸಂಚಾಲಕ ಪಿ.ಸುಭಾಸ್ ಸುಬ್ಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಖಜಾಂಚಿ ಸಬೀತ ಭೀಮಯ್ಯ, ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಉಪ ಸಂರಕ್ಷಣಾ ಅಧಿಕಾರಿ ಎನ್.ಟಿ. ಜಗನಾಥ್, ಸಹಾಯಕ ಅರಣ್ಯ ಅಧಿಕಾರಿಗಳಾದ ಕೆ.ಎ. ನೆಹರು, ಕೆ.ಪಿ.ಗೋಪಾಲ್, ದಯಾನಂದ, ಶ್ರೀನಿವಾಸ್ ನಾಯಕ್ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ರೈತರು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿರಾಜಪೇಟಯ ಅರಣ್ಯ ಭವನದಲ್ಲಿ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ರೈತ ಸಂಘದ ಪದಾಧಿಗಳು ಹಾಗೂ ರೈತರ ಸಭೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.