ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಈ ಮೂಲಕ ಸರ್ಕಾರ ಹೊಸ ವರ್ಷದ ಕೊಡುಗೆಯನ್ನು ನಗರದ ಜನತೆಗೆ ನೀಡಿದೆ.
ಪಟ್ಟಣವನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಾದ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಈ ಕುರಿತ ಅಂತಿಮ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.
ಕೊಡಗು ರಾಜ್ಯವಾಗಿದ್ದ ಕಾಲದಲ್ಲಿ 1904ರಲ್ಲಿಯೇ ಪುರಸಭೆಯಾಗಿದ್ದ ವಿರಾಜಪೇಟೆಯು 1986ರಲ್ಲಿ ಮಂಡಲ ಪಂಚಾಯಿತಿಯಾಗಿ ಬದಲಾಗಿತ್ತು. ನಂತರ, 1996ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಯಾಗಿತ್ತು. 1996ರಿಂದ ಪಟ್ಟಣ ಪಂಚಾಯಿತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿರಾಜಪೇಟೆ ಇದೀಗ ನಿಯಾಮಾವಳಿಗಳ ಪ್ರಕಾರ ಪುರಸಭೆಯಾಗಿ ಮೇಲ್ದರ್ಜೆಗೇರುತ್ತಿದೆ. 2011ರ ಜನಗಣತಿಯ ಪ್ರಕಾರ ನಗರದ ಜನಸಂಖ್ಯೆಯು 21,058 ಆಗಿದೆ.
ನಾಲ್ಕು ದಿಕ್ಕುಗಳಿಂದಲೂ ರಾಜ್ಯ ಹೆದ್ದಾರಿಗಳು ನಗರಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ನೆರೆಯ ಕೇರಳ ರಾಜ್ಯಕ್ಕೆ ಸಮೀಪದಲ್ಲಿರುವ ಪಟ್ಟಣವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಆದರೆ, ವಿಪರ್ಯಾಸ ಎಂದರೆ ಪಟ್ಟಣದ ಒಳಗೆ ಆಯಾಕಟ್ಟಿನ ಭಾಗದಲ್ಲಿರುವ ಕೆಲವು ಪ್ರದೇಶಗಳು ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಿಗೆ ಸೇರಿದೆ. ಪಟ್ಟಣದೊಳಗಿರುವ ಕೆಲ ಪ್ರಮುಖ ಬಡಾವಣೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಇದರಿಂದ ಈ ಬಡಾವಣೆಗಳಲ್ಲಿ ನಿವಾಸಿಗಳು ಒಂದು ರೀತಿಯಲ್ಲಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಕಂದಾಯ ಕಟ್ಟಲು ಅಥವಾ ಮೂಲಸೌಲಭ್ಯಗಳನ್ನು ಕೇಳಲು ಪಟ್ಟಣ ಪಂಚಾಯಿತಿಗೆ ಹೋದರೆ ಗ್ರಾಮ ಪಂಚಾಯಿತಿಯತ್ತ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಟ್ಟಣ ಪಂಚಾಯಿತಿಯತ್ತ ಬೆರಳು ತೋರಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು.
ನೂತನ ಪುರಸಭೆಯ ವ್ಯಾಪ್ತಿಯು 9.02 ಚದರ ಕಿ.ಮೀ.ಗೆ ಏರಿಕೆಯಾಗಲಿದೆ. ಪಟ್ಟಣ ಪಂಚಾಯಿತಿ ಅವಧಿಯಲ್ಲಿ ಇದು 2.63 ಚದರ ಕಿ.ಮೀ ಆಗಿತ್ತು. ವಿರಾಜಪೇಟೆಗೆ ಸಮೀಪವಿರುವ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ಕುಕ್ಲೂರು ಹಾಗೂ ಮಗ್ಗುಲ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿ, ಆರ್ಜಿ ಹಾಗೂ ಬೇಟೋಳಿ ಗ್ರಾಮಗಳ ಭಾಗಶಃ ಪ್ರದೇಶಗಳು ಇನ್ನು ಮುಂದೆ ವಿರಾಜಪೇಟೆ ಪುರಸಭೆಯ ವ್ಯಾಪ್ತಿಗೆ ಒಳಪಡಲಿವೆ.
ನಗರದ ವ್ಯಾಪ್ತಿ ಹೆಚ್ಚಾಗುವುದರಿಂದ ಸ್ಥಳೀಯ ಆಡಳಿತಕ್ಕೆ ಹೆಚ್ಚು ಆದಾಯ ಸಂಗ್ರಹವಾಗುವ ನಿರೀಕ್ಷೆಯಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲಿವೆ. ಜತೆಗೆ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಈ ಹಿಂದಿಗಿಂತಲೂ ಹೆಚ್ಚಿನ ಅನುದಾನ ದೊರೆಯಲಿದೆ. ಇದರಿಂದ ನಗರದ ಅಭಿವೃದ್ಧಿ ಹೆಚ್ಚಿನ ವೇಗವನ್ನು ಪಡೆದುಕೊಳ್ಳಲಿದೆ.
‘ಆದಾಯ ಹೆಚ್ಚಳದ ನಿರೀಕ್ಷೆ’
‘ವಿರಾಜಪೇಟೆ ಪುರಸಭೆಯಾಗುವುದರಿಂದ ನಗರದ ಗಡಿಭಾಗದಲ್ಲಿನ ಗ್ರಾಮಗಳ ಭಾಗಶಃ ಪ್ರದೇಶ ಸೇರ್ಪಡೆಯಾಗುವುದರಿಂದ ಆದಾಯ ಹೆಚ್ಚಳವಾಗಲಿದೆ. ಪಟ್ಟಣ ಪಂಚಾಯಿತಿಗಿಂತ ಪುರಸಭೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆಯುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜತೆಗೆ ನಗರ ಯೋಜನೆಯಲ್ಲಿ ಉಂಟಾದ ಗೊಂದಲ ನಿವಾರಣೆಯಾಗಲಿದೆ. ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಲು ಶ್ರಮಿಸಿದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಅಭಿನಂದನೆಗಳು’ ಎಂದು ವಿರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದರು.
‘ತ್ರಿಶಂಕು ಸ್ಥಿತಿಯಿಂದ ಮುಕ್ತಿ’
‘ಬಡಾವಣೆಯ ಹಲವು ನಿವಾಸಿಗಳಿಗೆ ವಾಸದ ಮನೆಯಿರುವ ನಿವೇಶನದ ಭೂಪರಿವರ್ತನೆಗಾಗಿ ಅಲೆದು ಸಾಕಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಯವರು ಪರಸ್ಪರ ಬೆರಳು ತೋರಿಸುತ್ತಿದ್ದರು. ಇದೀಗ ವಿರಾಜಪೇಟೆ ಪುರಸಭೆಯಾಗಿ ಮೇಲ್ದರ್ಜೆಗೇರುತ್ತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ತ್ರಿಶಂಕು ಸ್ಥಿತಿಯಿಂದ ಮುಕ್ತಿ ಸಿಗಬಹುದು ಎನ್ನುವ ಆಶಾಭಾವನೆ ಮೂಡಿದೆ’ ಎಂದುವಿರಾಜಪೇಟೆಯ ವಿಜಯನಗರ 2ನೇ ಹಂತದ ನಿವಾಸಿ ಜೋನಾಥನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.