ADVERTISEMENT

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ

ನಿಗಮದ ಸೌಲಭ್ಯ ಪಡೆದುಕೊಳ್ಳಲು ಶಾಸಕ ಕೆ.ಜಿ.ಬೋಪಯ್ಯ ಕರೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 15:50 IST
Last Updated 17 ಸೆಪ್ಟೆಂಬರ್ 2022, 15:50 IST
ಮಡಿಕೇರಿಯ ಚೌಡೇಶ್ವರಿ ದೇಗುಲದ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಕರ್ಮ ಜಯಂತಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು
ಮಡಿಕೇರಿಯ ಚೌಡೇಶ್ವರಿ ದೇಗುಲದ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಕರ್ಮ ಜಯಂತಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು   

ಮಡಿಕೇರಿ: ‘ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅನನ್ಯ’ ಎಂದು ಶಾಸಕ ಕೆ.ಜಿ.ಬೋಪಯ್ಯ ಶ್ಲಾಘಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ವತಿಯಿಂದ ನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮಾಜಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಇದೆ. ವೇದಗಳ ಕಾಲದಿಂದಲೂ ಸಮಾಜಕ್ಕೆ ಇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಿಶ್ವಕರ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಅನೇಕತೆಯಲ್ಲಿ ಏಕತೆ ಹೊಂದಿರುವುದೇ ನಮ್ಮ ವೈಶಿಷ್ಟ್ಯವಾಗಿದೆ’ ಎಂದು ನುಡಿದರು.

ADVERTISEMENT

ಸಮಾಜದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ಅನಿವಾರ್ಯ. ಆ ನಿಟ್ಟಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋಟೇಕಾರು ಗೋಸೇವಾಶ್ರಮ ಟ್ರಸ್ಟ್‌ನ ಅಧ್ಯಕ್ಷ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಾತನಾಡಿ, ‘ವಿಶ್ವ ಎಂದರೆ ಜಗತ್ತು. ಜಗತ್ತನ್ನು ಸೃಷ್ಟಿ ಮಾಡಿದವರೇ ವಿಶ್ವಕರ್ಮ. ಯುಗ ಯುಗ ಕಳೆದರೂ ಸಮಾಜ ಬದಲಾವಣೆ ಹೊಂದುತ್ತದೆ. ವಿಶ್ವಕರ್ಮವು ಒಂದು ಜಾತಿ ಸಮುದಾಯಕ್ಕೆ ಸೇರಿದಲ್ಲ. ಎಲ್ಲರೂ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತದ್ದು’ ಎಂದರು.

‘ಜಗತ್ತಿಗೆ ಎಲ್ಲವನ್ನೂ ನೀಡಿದ ವಿಶ್ವಕರ್ಮರ ಕೊಡುಗೆ ಅಪಾರ. ವಿಶ್ವಕರ್ಮರು ಕುಲಕಸುಬು ಮಾಡುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸುವಂತಾಗಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ದೇವದಾಸ್ ಮಾತನಾಡಿ, ‘ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಎಚ್.ಎನ್.ಸುಬ್ರಮಣಿ ಮಾತನಾಡಿ, ‘ನಿಗಮದಿಂದ ಸಮಾಜದ ಯುವಜನರು ಹಲವು ಸೌಲಭ್ಯ ಪಡೆಯಲು ಅವಕಾಶವಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಕೋರಿದರು.

ತಹಶೀಲ್ದಾರ್ ಪಿ.ಎಸ್.ಮಹೇಶ್, ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಜಗದೀಶ್ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು, ವಿಶ್ವಕರ್ಮ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿದ್ಯಾಲತಾ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.