ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಸ ವಿಲೇವಾರಿಗೆ ಘಟಕ ನಿರ್ಮಾಣಗೊಂಡ ಬಳಿಕವೂ ತ್ಯಾಜ್ಯದ ಸಮಸ್ಯೆ ಬಗೆಹರಿದಿಲ್ಲ. ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ತೀವ್ರತರವಾಗಿ ಉಲ್ಬಣಿಸುತ್ತಿದ್ದು, ಆತಂಕ ಮೂಡಿಸಿದೆ.
ಪಟ್ಟಣದ ಪ್ರವೇಶದ್ವಾರದಲ್ಲೇ ರಾಶಿ ರಾಶಿ ಕಸವು ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ. ಪಟ್ಟಣದ ಮುಖ್ಯರಸ್ತೆಯ ಒಂದು ಬದಿಯಲ್ಲಿ ಕಸದ ರಾಶಿಯನ್ನೇ ಹಾಕಲಾಗಿದೆ. ಸಮೀಪದಲ್ಲೇ ಇರುವ ಹೊಳೆಗೇ ತಡೆಗೋಡೆ ಇಲ್ಲ. ಹೀಗಾಗಿ, ಕಸವೆಲ್ಲವೂ ನಿಧಾನವಾಗಿ ಹೊಳೆಯ ಪಾಲಾಗುತ್ತಿದೆ. ಇಲ್ಲಿನ ಜಲಚರಗಳು ಕೂಡ ಬದುಕಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರು ಕಾವೇರಿಯ ಉಪನದಿ ಹೇಮಾವತಿಯನ್ನು ಸೇರುತ್ತಿದೆ. ಒಂದು ವೇಳೆ ಇಲ್ಲಿರುವ ಕಸವನ್ನು ತೆಗೆಯದೇ ಹೋದರೆ ಮುಂಗಾರುಪೂರ್ವದಲ್ಲಿ ಬೀಳುವ ಭಾರಿ ಮಳೆಗೆ ಕಸವೆಲ್ಲವೂ ಹೊಳೆ ಸೇರುವ ಸಂಭವವೂ ಇದೆ.
ಈ ಕಸದ ರಾಶಿಗೆ ಕೂಗಳತೆ ದೂರದಲ್ಲೇ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ, ಸರ್ಕಾರಿ ಪ್ರಾಥಮಿಕ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳು ಇದ್ದರೂ ಯಾರೊಬ್ಬರ ಹೃದಯಗಳು ಕರಗಿಲ್ಲ. ನಿತ್ಯವೂ ರೋಗಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕಸದ ವಾಸನೆಯಲ್ಲೇ ಸಂಚರಿಸಬೇಕಾದ ಸ್ಥಿತಿ ಇದೆ.
ವಿಚಿತ್ರ ಎಂದರೆ, ಈಗಾಗಲೇ ಇಲ್ಲಿಗೆ 2 ಕಿ.ಮೀ ದೂರದಲ್ಲೇ ಕಸ ವಿಲೇವಾರಿ ಘಟಕ ಉದ್ಘಾಟನೆಯಾಗಿದ್ದರೂ ಸಮಸ್ಯೆ ಮಾತ್ರ ಇನ್ನೂ ಜೀವಂತ ಇದೆ. ಘಟಕಕ್ಕೆ ತಡೆಗೋಡೆ ಇಲ್ಲದೆ ಬೀದಿ ನಾಯಿಗಳು, ಗೋವುಗಳು, ಪ್ರಾಣಿ ಪಕ್ಷಿಗಳು ವಾಸ ಸ್ಥಾನವಾಗಿ ಮಾಡಿಕೊಂಡಿವೆ.
ಈ ಘಟಕವು ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಿದೆ. ಅಲ್ಲಿನ ಗ್ರಾಮಸ್ಥರು ಘಟಕಕ್ಕೊಂದು ಕಾಂಪೌಂಡ್ ಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಪೌಂಡ್ ಸಹ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಕಸ ಅಲ್ಲಿ ವಿಲೇವಾರಿಯಾಗುತ್ತಿಲ್ಲ. ಘಟಕ ಉದ್ಘಾಟನೆಯಾಗುವುದಕ್ಕೂ ಮುಂಚೆ ಇದ್ದ ಪರಿಸ್ಥಿತಿಯೇ ಈಗಲೂ ಮುಂದುವರಿದಿದೆ.
ಗುಡುಗಳಲೆ ಗ್ರಾಮದಲ್ಲೂ ಕಸದ ಸಮಸ್ಯೆ ತೀವ್ರವಾಗಿದೆ. ಗುಡುಗಳಲೆ ಜಂಕ್ಷನ್‌ನಲ್ಲಿ ಕಸವನ್ನು ರಸ್ತೆಬದಿಯಲ್ಲಿ ಹಾಕಲಾಗುತ್ತಿದೆ. ಮುಖ್ಯರಸ್ತೆಯಿಂದ ಬಂದವರನ್ನು ಕಸದ ರಾಶಿಯೇ ಸ್ವಾಗತಿಸುತ್ತಿದೆ. ಹಂಡ್ಲಿ ಗ್ರಾಮ ಪಂಚಾಯಿತಿ ಅವರು ಕೂಡಲೇ ಗಮನಹರಿಸಿ ಇಲ್ಲಿ ಕಸ ಸುರಿಯುವುದನ್ನು ತಡೆಯಬೇಕಿದೆ. ಕನಿಷ್ಠ ಫಲಕಗಳನ್ನಾದರೂ ಅಳವಡಿಸಿ ಜನರಲ್ಲಿ ಇಲ್ಲಿ ಕಸ ಹಾಕದಂತೆ ಜಾಗೃತಿ ಮೂಡಿಸಬೇಕಿದೆ. ನಂತರವೂ ಕಸ ಸುರಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಆಸಕ್ತಿ ಕೊರತೆ’ ಕಸ ವಿಲೇವಾರಿ ಘಟಕದ ಸಮಸ್ಯೆ ಬಗೆಹರಿಸಲು ಇಲ್ಲಿನ ಜನಪ್ರತಿನಿಧಿಗಳ ಆಸಕ್ತಿ ಕೊರತೆ ಇದೆ. ಇದರಿಂದ ಶನಿವಾರಸಂತೆಯ ಆಡಳಿತ ವ್ಯವಸ್ಥೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತಿದೆ. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲು ಆಗ್ರಹಿಸುತ್ತೇನೆ.-ಭಾರತಿ ಷಡಕ್ಷರಿ ಶನಿವಾರಸಂತೆ.
ಕಸದ ವಾಸನೆಯಿಂದ ಸ್ವಾಗತ ಶನಿವಾರಸಂತೆ ಪಟ್ಟಣಕ್ಕೆ ಆಗಮಿಸುವಾಗ ಕಸದ ವಾಸನೆಯಿಂದ ಸ್ವಾಗತ ಮಾಡಲಾಗುತ್ತಿದೆ. ಈ ಭಾಗದಲ್ಲಿ ನಾವು ವಾಹನ ರಿಪೇರಿಗೆ ತೆರಳಿದ ವೇಳೆ ಕಸದಿಂದ ದುರ್ವಾಸನೆ ಬಂದು 10 ನಿಮಿಷವು ಅಂಗಡಿಯಲ್ಲಿ ಇರುವ ಪರಿಸ್ಥಿತಿಯಲ್ಲಿ ಆ ಪರಿಸರ ಇಲ್ಲ. ಸಮಸ್ಯೆ ಬಗೆಹರಿಸದಿದ್ದಲ್ಲಿ ಸಾಂಕ್ರಮಿಕ ರೋಗ ಬರುವುದು ಗ್ಯಾರಂಟಿ.- ಆಕಾಶ್ (ಮುನ್ನ) ಶುಂಠಿ- ಬೀಟಿಕಟ್ಟೆ.
‘ಕಸ ಹಾಕುವುದು ಹೆಚ್ಚುತ್ತಿದೆ’ ಗುಡುಗಳಲೆ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಕಸ ಹಾಕುವುದು ಹೆಚ್ಚಾಗುತ್ತಿದೆ. ಜನರು ಈ ಕಸವನ್ನು ನೋಡಿ ಅಸಹ್ಯಪಡುತ್ತಿದ್ದಾರೆ. ನೋಡಿ ಮಲಗೋದು ಪಂಚಾಯಿತಿಯವರು ಕೂಡಲೇ ಸಮಸ್ಯೆ ಬಗೆಹರಿಸಬೇಕಾಗಿದೆ.-ಬಿ.ಕೆ.ಮಲ್ನಾಡ್ ದಿನೇಶ್ ಗುಡುಗಳಲೆ.
ಕಾಂಪೌಂಡ್ ನಿರ್ಮಾಣ ಶೀಘ್ರ ನೂತನವಾಗಿ ನಿರ್ಮಾಣವಾಗಿರುವ ಕಸ ವಿಲೇವಾರಿ ಘಟಕದ ಸುತ್ತು ಅತಿ ಶೀಘ್ರದಲ್ಲೇ ಕಾಂಪೌಂಡ್ ನಿರ್ಮಿಸಲಾಗುವುದು. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಕಸದ ಸಮಸ್ಯೆಯಿಂದ ಮುಕ್ತಿ ನೀಡಲಾಗುವುದು- ಗೀತಾ ಹರೀಶ್ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.