ಸೋಮವಾರಪೇಟೆ: ತಾಲ್ಲೂಕಿನ ಗ್ರೇಡ್ – 1 ಗ್ರಾಮಪಂಚಾಯಿತಿ ಎಂದು ಹೆಸರು ಪಡೆದಿರುವ ಇಲ್ಲಿನ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೇಳೂರು ಪಂಚಾಯಿತಿಯಲ್ಲೂ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನಕಳೆದಂತೆ ಉಲ್ಬಣಿಸುತ್ತಿದೆ. ವೈಜ್ಞಾನಿಕವಾದ ವಿಲೇವಾರಿ ಕ್ರಮ ಇಲ್ಲದೇ ಜನಸಾಮಾನ್ಯರು ಕಿರಿಕಿರಿ ಅನುಭವಿಸಬೇಕಾಗಿದೆ.
ಕಸ ವಿಲೇವಾರಿ ಮಾಡಲೆಂದು ನಿರ್ಮಿಸುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ ಇನ್ನೂ ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಇದರಿಂದ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ.
ಹೆಚ್ಚಿನವರು ಹೆದ್ದಾರಿಯ ಬದಿಯಲ್ಲಿಯೇ ಕಸವನ್ನು ಎಸೆಯುವುದು ಸಾಮಾನ್ಯವಾಗಿದೆ. ಇಲ್ಲಿ ಸಂಚರಿಸುವವರು ಮೂಗು ಮುಚ್ಚಿ ಓಡಾಡಬೇಕಾಗಿದೆ.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಪಂಚಾಯಿತಿ ಕಚೇರಿಗೆ ಕೂಗಳತೆ ದೂರದಲ್ಲಿಯೇ ತ್ಯಾಜ್ಯ ವಿಲೇವಾರಿಯಾಗುತ್ತಿದ್ದು, ಇದೇ ಮಾರ್ಗದಲ್ಲಿ ಜನಪ್ರತಿನಿಧಿಗಳು ಮತ್ತು ಇಲಾಖೆಗಳ ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ, ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಹಿಡಿಯಲು ವಿಫಲರಾಗಿದ್ದಾರೆ ಎಂದು ಜನರು ದೂರುತ್ತಾರೆ.
ನಗರದಿಂದ 3 ಕಿ.ಮೀ ದೂರದಲ್ಲಿರುವ ಬಜೆಗುಂಡಿ 40 ಎಕರೆ ಪ್ರದೇಶದಲ್ಲಿ, 400 ಮನೆಗಳಿದ್ದು, 600ರಷ್ಟು ಕುಟುಂಬಗಳಿವೆ. ಸುಮಾರು 2 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, 1,180 ಮತದಾರರಿದ್ದಾರೆ. ಇಲ್ಲಿ 150 ಅಲ್ಪಸಂಖ್ಯಾತರ ಕುಟುಂಬಗಳು, 200 ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಗೂ 250 ಇತರ ವರ್ಗದ ಕುಟುಂಬಗಳಿವೆ.
ಎಲ್ಲಾ ಪಂಚಾಯಿತಿಗಳಲ್ಲಿರುವಂತೆ, ಬೇಳೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಕಸ ವಿಲೇವಾರಿಯ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿನ ಜನರು ಬೆಳಿಗ್ಗೆ ಮತ್ತು ಸಂಜೆಯಾದರೆ, ತಮ್ಮ ಮನೆಯಲ್ಲಿನ ಕಸವನ್ನು ಹೆದ್ದಾರಿ ಬದಿಯಲ್ಲಿಯೇ ತಂದು ಸುರಿಯುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳಿಯ ನಿವಾಸಿ, ಆಟೊ ಚಾಲಕ ಶಶಿ, ‘ಹಲವು ವರ್ಷಗಳ ಹಿಂದಿನಿಂದಲೂ ಇಲ್ಲಿ ಸಮಸ್ಯೆಗಳು ಕಾಡುತ್ತಿವೆ. ಯಾರೇ ಅಧಿಕಾರ ಮಾಡಿದರೂ, ಈ ಸಮಸ್ಯೆಗೆ ಪರಿಹಾರ ಕಾಣಿಸಲು ಮುಂದಾಗಿಲ್ಲ. ಕೂಡಲೇ ಇಲ್ಲಿನ ಕಸ ವಿಲೇವಾರಿಗೆ ಸರಿಯಾದ ಸ್ಥಳ ಗುರುತಿಸಿ, ಸೂಕ್ತವಾಗಿ ವಿಲೇವಾರಿ ಮಾಡಲು ಮುಂದಾಗಬೇಕಿದೆ’ ಎಂದರು.
ಹೆದ್ದಾರಿಯ ಪಕ್ಕದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಮೂಗು ಮುಚ್ಚಿಯೆ ಗ್ರಾಮಕ್ಕೆ ಪ್ರವೇಶ ಪಡೆಯುವಂತಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಪೇಪರ್ ಇರುವುದರಿಂದ ಗಾಳಿ ಬಂದೊಡನೆ ಎಲ್ಲೆಂದರಲ್ಲಿ ಹಾರಿ ಬಿದ್ದಿರುತ್ತದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರತ್ತ ನೋಡದೆ ಸಂಚರಿಸುತ್ತಿರುವುದು, ಸಮಸ್ಯೆ ಜೀವಂತವಾಗಿ ಉಳಿಯುವಂತಾಗಿದೆ. ಸರ್ಕಾರ ಸಾಕಷ್ಟು ಹಣವನ್ನು ತ್ಯಾಜ್ಯ ವಿಲೇವಾರಿಗೆ ವಿನಿಯೋಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಬೇಕು ಎಂದು ಕೆ.ಪಿ.ದಿನೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.