ADVERTISEMENT

ಜಲಕ್ಷಾಮದ ಆತಂಕ: ಕಾವೇರಿ ತಟದಲ್ಲೇ ಮೂರು ದಿನಕ್ಕೊಮ್ಮೆ ನೀರು!

RAJANI M
Published 10 ಮಾರ್ಚ್ 2024, 6:08 IST
Last Updated 10 ಮಾರ್ಚ್ 2024, 6:08 IST
ನೀರಿನ ಮಟ್ಟ ಕಡಿಮೆಯಾಗಿರುವ ಘಟ್ಟದಳ ತೋಡು
ನೀರಿನ ಮಟ್ಟ ಕಡಿಮೆಯಾಗಿರುವ ಘಟ್ಟದಳ ತೋಡು   

ಸಿದ್ದಾಪುರ: ಕಾವೇರಿ ನದಿ ಹರಿಯವ ಗ್ರಾಮಗಳಲ್ಲೇ ಇದೀಗ ನೀರಿನ ಸಮಸ್ಯೆ ತಲೆದೋರಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಿನಗಳಿಗೆ ಒಮ್ಮೆ ನೀರು ಗ್ರಾಮಸ್ಥರಿಗೆ ಸಿಗುತ್ತಿದ್ದರೆ, ಕರಡಿಗೋಡು ಗ್ರಾಮದಲ್ಲಿ ಎರಡು ದಿನಗಳಿಗೆ ನೀರು ಸರಬರಾಜಾಗುತ್ತಿದೆ.

ಬಿಸಿಲಿನ ತಾಪಕ್ಕೆ ಕಾವೇರಿ ನದಿ ನೀರು ಗಣನೀಯವಾಗಿ ಕುಸಿತ ಕಂಡಿದ್ದು, ಸಿದ್ದಾಪುರ ಭಾಗದ ಕೆರೆ, ತೋಡುಗಳು ಬತ್ತಲಾರಂಭಿಸಿವೆ.

ಸಿದ್ದಾಪುರ ಗ್ರಾಮ ಪಂಚಾಯಿತಿಯಿಂದ ಗುಹ್ಯ, ಕರಡಿಗೋಡು ಹಾಗೂ ಸಿದ್ದಾಪುರ ಗ್ರಾಮಗಳಲ್ಲಿ ಕೊಳವೆ ಬಾವಿಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಇದೀಗ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಗುಹ್ಯ ಗ್ರಾಮದಲ್ಲಿ ಮೂರು ಕೊಳವೆ ಬಾವಿಗಳು ಇದ್ದು, ಇದೀಗ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ADVERTISEMENT

ಕರಡಿಗೋಡು ಗ್ರಾಮದಲ್ಲಿರುವ ಕೊಳವೆ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಎರಡು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ನೆಲ್ಯಹುದಕೇರಿ, ಮಾಲ್ದಾರೆ, ಚೆನ್ನಯ್ಯನಕೋಟೆ ಗ್ರಾಮದಲ್ಲೂ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಆತಂಕ ಎದುರಾಗಿದೆ.

ಸಿದ್ದಾಪುರದಲ್ಲಿ ಕಾವೇರಿ ನದಿ ನೀರು ಎಲ್ಲಾ ವರ್ಷಕ್ಕಿಂತಲೂ ಈ ಬಾರಿ ತೀರಾ ಕಡಿಮೆಯಾಗಿದೆ. ನೀರು ಕಾಣಬೇಕಾದ ನದಿಯಲ್ಲಿ ಬಂಡೆಗಳು ಎದ್ದು ಕಾಣುತ್ತಿವೆ. ಸಣ್ಣ ಪ್ರಮಾಣದಲ್ಲಿ ನದಿ ಹರಿವು ಇದ್ದು, ನಿರಂತರ ಬಿಸಿಲಿನಿಂದ ನದಿ ಹರಿವು ನಿಲ್ಲುವ ಅಪಾಯ ಎದುರಾಗಿದೆ. ಕರಡಿಗೋಡು, ಘಟ್ಟದಳ, ಗುಹ್ಯ ಗ್ರಾಮದ ತೋಡುಗಳ ನೀರು ನದಿ ಸೇರುತ್ತಿದ್ದು, ಕೆಲ ತೋಡುಗಳು ಸಂಪೂರ್ಣ ಬತ್ತಿ ಹೋಗಿವೆ. ಬಿಸಿಲಿನ ತಾಪಕ್ಕೆ ಕೆರೆಗಳು ಕೂಡ ಬತ್ತುತ್ತಿದ್ದು, ಜಲಚರಗಳಿಗೆ ಕಂಟಕ ಎದುರಾಗಿದೆ. ಮೈದುಂಬಿ ಹರಿಯುತ್ತಿದ್ದ ಕಾವೇರಿ, ಇದೀಗ ಬತ್ತುವ ಭೀತಿ ಎದುರಾಗಿದೆ. ಕಾವೇರಿ ತಟದ ಗ್ರಾಮಗಳಿಗೆ ಜಲಕ್ಷಾಮದ ಭೀತಿ ಕಾಡಲಾರಂಭಿಸಿದೆ.

ಬಿಸಿಲ ಬೇಗೆಗೆ ಕಾಫಿ, ಕರಿಮೆಣಸು ಸೇರಿದಂತೆ ಕೃಷಿ ಗಿಡಗಳು ಬಾಡಲು ಆರಂಭಿಸಿದೆ. ಸ್ವಂತ ಕೆರೆ ಇರುವ ಬೆಳೆಗಾರರು ಕೆರೆಯಿಂದ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಹೊಳೆ, ತೋಡುಗಳಿಂದ ನೀರು ಹಾಯಿಸುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ರೈತರು ಕಂಗಾಲಾಗಿದ್ದಾರೆ. ಕೆಲವು ಕೃಷಿಕರು ಕಾಳು ಮೆಣಸಿನ ಬಳ್ಳಿಗೆ ಬಿಂದಿಗೆಯನ್ನು ಬಳಸಿ ನೀರು ಒದಗಿಸುತ್ತಿದ್ದಾರೆ.

ಹಾಡಿಗಳಲ್ಲಿ ನೀರಿಗೆ ಸಮಸ್ಯೆ: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬಾರೆ ಸಾಕಾನೆ ಶಿಬಿರದ ಹಾಡಿಗೆ ಸೂಕ್ತ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಪೈಪ್ ಲೈನ್ ಸಮಸ್ಯೆ, ಮೋಟರ್ ಸಮಸ್ಯೆಯಿಂದಾಗಿ ಹಾಡಿಯ ನಿವಾಸಿಗಳು ದೂರದ ಕಾವೇರಿ ನದಿಯಿಂದ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಾಲ್ದಾರೆ ಸಮೀಪದ ಹಸ್ತಾನ ಗಿರಿಜನರ ಹಾಡಿಯಲ್ಲೂ ಪೈಪ್‌ಲೈನ್ ಸಮಸ್ಯೆಯಿಂದ ಕುಡಿಯುವ ನೀರು ಸಿಗುತ್ತಿಲ್ಲ. ಕಾಮಗಾರಿ ಶೀಘ್ರದಲ್ಲಿ ಮುಗಿಸುವುದಾಗಿ ಗ್ರಾಮ ಪಂಚಾಯಿತಿ ಹೇಳಿಕೆ ನೀಡಿ ತಿಂಗಳಾದರೂ, ಹಾಡಿಯ ನಿವಾಸಿಗಳಿಗೆ ಕುಡಿಯುವ ನೀರು ಇನ್ನೂ ಸಿಕ್ಕಿಲ್ಲ.

ವಾಲ್ನೂರು ಭಾಗದಲ್ಲಿ ಕಾವೇರಿ ನದಿಯ ನೋಟ
ಬಂಡೆಗಳು ಎದ್ದು ಕಾಣುತ್ತಿರುವ ಗುಹ್ಯ ಗ್ರಾಮದಲ್ಲಿನ ಕಾವೇರಿ ನದಿ

ನದಿಯಲ್ಲಿ ನೀರಿನ ಹರಿವು ಕಡಿಮೆ ಕಾವೇರಿ ನದಿಯಲ್ಲಿ ಎದ್ದು ಕಾಣುತ್ತಿವೆ ಬಂಡೆಗಳು ದುಬಾರೆ ಸಾಕಾನೆ ಶಿಬಿರದ ಹಾಡಿಗೂ ನೀರಿನ ಕೊರತೆ

ಇದೀಗ 3 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ನೀರನ್ನು ಮಿತವಾಗಿ ಬಳಸಬೇಕಿದೆ.- ಸುರೇಶ್ ಪೂಜಾರಿ ಗ್ರಾಮಸ್ಥ ಗುಹ್ಯ

ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈಗ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿದೆ.- ಪ್ರೇಮಾ ಗೋಪಾಲ್ ಅಧ್ಯಕ್ಷೆ ಸಿದ್ದಾಪುರ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.