ಸೋಮವಾರಪೇಟೆ: ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ನದಿ ತೊರೆಗಳು ಬಿಸಿಲಿನ ಬೇಗೆಗೆ ಬತ್ತಿ ಹೋಗುತ್ತಿವೆ. ಪ್ರಾಣಿ ಮತ್ತು ಪಕ್ಷಿ ಸಂಕುಲ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.
ವರ್ಷದ ಮೊದಲ ಮಳೆ ಮಾರ್ಚ್ ತಿಂಗಳಿನಲ್ಲಿ ಸುರಿಯುತ್ತಿದ್ದುದ್ದು ಬಹಳ ಹಿಂದಿನಿಂದಲೂ ವಾಡಿಕೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ 13 ಕಳೆದರೂ, ಹಲವೆಡೆ ಇಂದಿಗೂ ಮಳೆಯಾಗಿಲ್ಲ. ಗಿಡಗಂಟಿಗಳು ಒಣಗುತ್ತಿದ್ದು, ಕಾಡು ಪ್ರಾಣಿಗಳಿಗೆ ಕಾಡುಗಳಲ್ಲಿ ಆಹಾರ ಮತ್ತು ಕುಡಿಯಲು ನೀರು ಸಿಗುತ್ತಿಲ್ಲ. ಇದು ಪ್ರಾಣಿ, ಪಕ್ಷಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಬಿಲಿನ ಝಳಕ್ಕೆ, ಪ್ರಾಣಿ, ಪಕ್ಷಿಗಳು ಬಸವಳಿಯುತ್ತಿವೆ. ದಣಿದಾಗ ಜೀವಜಲ ಸಿಗದೆ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಹೆಚ್ಚಿದೆ. ಬಿಸಿಲು ಹೆಚ್ಚಾದಂತೆ ಕೆಲವೆಡೆಗಳಲ್ಲಿ ಕಾಡು ಮತ್ತು ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದು ಪ್ರಾಣಿ, ಪಕ್ಷಿಗಳು ಪ್ರಾಣ ಕಳೆದುಕೊಂಡಿವೆ. ಆದರೆ, ಕಾಂಕ್ರೀಟ್ ಕಾಡೊಳಗೆ ಬರುವ ಚಿಕ್ಕಪುಟ್ಟ ಪ್ರಾಣಿ, ಪಕ್ಷಿಗಳಿಗಾಗಿ ಮಾನವೀಯತೆಯ ಹೃದಯ ಮಿಡಿಯಬೇಕಿದೆ. ಪ್ರಾಣಿ, ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸುವಂತೆ ಪ್ರಾಣಿ ಮತ್ತು ಪಕ್ಷಿ ಪ್ರಿಯರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಇಲ್ಲಿನ ‘ನಾವು ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮವೊಂದನ್ನು ನಡೆಸುತ್ತಿದೆ. ‘ಹಕ್ಕಿಗೊಂದು ಗುಟುಕು’ ಕಾರ್ಯಕ್ರಮ ರೂಪಿಸಿದ್ದು, ಈ ಮೂಲಕ ಪಕ್ಷಿಗಳ ದಾಹ ತಣಿಸುತ್ತಿದೆ.
ಏನಿದು ಕಾರ್ಯಕ್ರಮ?
‘ನಾವು ಪ್ರತಿಷ್ಠಾನ’ ಸಂಸ್ಥೆ ಜನರಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡಲು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡುತ್ತಿರುವ ಸೆಲ್ಫಿ ಸ್ಪರ್ಧೆ ನಡೆಸುತ್ತಿದ್ದು, ಇದರಲ್ಲಿ ರಾಜ್ಯದ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಚಿಕ್ಕ ಮಕ್ಕಳಲ್ಲಿ ಮೊದಲು ನಾವು ಜಾಗೃತಿ ಮೂಡಿಸುವ ಕೆಲಸ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಉಪಯೋಗವಾಗುವುದು’ ಎಂದು ನಾವು ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಕಿರಗಂದೂರು ಗೌತಮ್ ಹೇಳಿದರು.
‘ಬಿಸಿಲು ಹೆಚ್ಚಾಗುತ್ತಿರುವುದರಿಂದ ಪಕ್ಷಿಗಳು ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿವೆ. ‘ಹಕ್ಕಿಗೊಂದು ಗುಟುಕು’ ಕಾರ್ಯಕ್ರಮ ನನ್ನ ಪುಟ್ಟ ಸೇವೆಯಾಗಿದೆ’ ಎಂದು ಭಾಗಮಂಡಲ ಸಮೀಪದ ಕುದುಪಜೆ ದೇವಿಪ್ರಸಾದ್ ತಿಳಿಸಿದರು.
ಇಲ್ಲಿ ಪಕ್ಷಿ ಹಾಗೂ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ನೀಡುವ ಚಿತ್ರವನ್ನು ಕಳಿಸಬೇಕಿರುವುದರಿಂದ ಈ ಮೂಲಕ ಪ್ರಾಣಿ, ಪಕ್ಷಿಗಳಿಗೆ ಸಹಾಯಕವಾಗುತ್ತದೆ.
‘ಜಿಲ್ಲೆಯಲ್ಲಿ ಗಿಳಿ, ಪಾರಿವಾಳ, ಕೋಗಿಲೆ, ಮರಕುಟುಕ, ಗಿಡುಗ, ಗರುಡ, ಗುಳುಮುಳುಕ, ಕೊಕ್ಕರೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ವಿವಿಧ ಜಾತಿಯ ಚಿಕ್ಕ ಮತ್ತು ದೊಡ್ಡ ಪಕ್ಷಿಗಳಿವೆ. ಮಳೆಗಾಲ, ಚಳಿಗಾಲದಲ್ಲಿ, ಇವುಗಳ ಬದುಕು ಹೇಗೋ ಕಳೆಯುತ್ತದೆ. ಆದರೆ, ಬೇಸಿಗೆಯಲ್ಲಿ ಸಾಕಷ್ಟು ಬಸವಳಿದು ಬಿಡುತ್ತವೆ. ಸುಮಧುರ ಶಬ್ದ ಮಾಡುತ್ತ ಕಿವಿಗೆ ಇಂಪು ನೀಡುವ ಪಕ್ಷಿ ಸಂಕುಲ ಬಿಸಿಲಿನ ತಾಪಕ್ಕೆ ಕುತ್ತಾಗದಂತೆ ನೋಡಿಕೊಳ್ಳುದ ಹೊಣೆಗಾರಿಕೆ ನಮ್ಮೆಲ್ಲರದ್ದು’ ಎಂದು ಲೇಖಕಿ ಸುಮನಾ ಗೌತಮ್ ಹೇಳಿದರು.
‘ಭೂಮಿಯಲ್ಲಿನ ಸಕಲ ಜೀವಿಗಳಿಗೂ ಬುದ್ದಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯ ಗೌರವ ಕೊಡಬೇಕು. ಪ್ರಕೃತಿ ಇಂದು ಉಳಿದಿದ್ದರೆ ಪ್ರಾಣಿ, ಪಕ್ಷಿಗಳ ಒಡನಾಟದಿಂದ ಮಾತ್ರ. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕು ಇದೆ. ಆದರೆ, ಅದನ್ನು ಕಿತ್ತುಕೊಳ್ಳುವ ಬದಲು ಅವುಗಳು ಬದುಕಲು ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಪಕ್ಷಿ ತಜ್ಞರು ಮತ್ತು ಛಾಯಾಚಿತ್ರಗಾರರಾದ ಹಾಸನ ಬಿ.ಎಸ್. ದೇಸಾಯಿ ಹೇಳಿದರು.
ಬಿಸಿಲು ಹೆಚ್ಚಾದಂತೆ ಮನೆಯ ತಾರಸಿ, ಹೆಂಚು, ಮರ ಗಿಡಗಳಲ್ಲಿ ನೀರು ಮತ್ತು ಆಹಾರವನ್ನು ಇಟ್ಟರೆ, ನಮ್ಮ ಸುತ್ತಲೂ ವಾಸಿಸುವ ಹಲವು
ಪಕ್ಷಿಗಳಿಗೆ ಹೆಚ್ಚಿನ ಉಪಯೋಗವಾಗುವುದು. ಅಲ್ಲದೆ, ಪ್ರಾಣಿಗಳು ಲಭ್ಯತೆ ಇರುವ ಆಹಾರ ಮತ್ತು ನೀರನ್ನು ನೀಡಬೇಕಾಗಿದೆ ಎಂದು ಪಕ್ಷಿಪ್ರಿಯರ ಅನಿಸಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.