ADVERTISEMENT

ಸುಂಟಿಕೊಪ್ಪ: ಉಕ್ಕೇರಿ ಹರಿಯುತ್ತಿದೆ ‘ಹಾಲೇರಿ ಫಾಲ್ಸ್’

ಮಡಿಕೇರಿ ಸಮೀಪದಲ್ಲೇ ಇದೆ ರಮಣೀಯ ಜಲಪಾತ, ಕಿರು ಜಲಧಾರೆಯೂ ಸೃಷ್ಟಿ

ಸುನಿಲ್ ಎಂ.ಎಸ್.
Published 9 ಜುಲೈ 2024, 7:32 IST
Last Updated 9 ಜುಲೈ 2024, 7:32 IST
ಸುಂಟಿಕೊಪ್ಪ ಸಮೀಪದ ಹಾಲೇರಿ ಫಾಲ್ಸ್ ಉಕ್ಕೇರಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ
ಸುಂಟಿಕೊಪ್ಪ ಸಮೀಪದ ಹಾಲೇರಿ ಫಾಲ್ಸ್ ಉಕ್ಕೇರಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ   

ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಗೆ ರಸ್ತೆ ಬದಿ, ಕಾಫಿ ತೋಟ, ಬೆಟ್ಟದ ತಪ್ಪಲು... ಹೀಗೆ ನಾನಾ ಕಡೆ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ಪ್ರಕೃತಿಯ ಸೌಂದರ್ಯಕ್ಕೆ ಮೆರುಗು ತುಂಬಿದೆ.

ನಿರಂತರ ಮಳೆಗೆ ಮೈದುಂಬಿಕೊಂಡು ಅಸಾಧಾರಣ ಚೆಲುವನ್ನು ಹೊರಸೂಸುತ್ತಿರುವ ಈ ಜಲಪಾತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹದ್ದೊಂದು ಕಣ್ಣಿಗೆ ಹಬ್ಬವನ್ನು ತರುವ ಜಲಪಾತ ಇಲ್ಲಿನ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಹಾಲೇರಿ ಫಾಲ್ಸ್.

ಹೌದು. ಇದು ಅಬ್ಬಿ, ಇರ್ಪು, ಚೇಲಾವರ ಜಲಪಾತಗಳಷ್ಟು ಹೆಚ್ಚು ಪ್ರಚಲಿತವಾಗಿಲ್ಲ. ಆದರೆ, ಸೌಂದರ್ಯದಲ್ಲಿ ಅದರ ಸಾಲಿನಲ್ಲೇ ನಿಲ್ಲುವಂತ ಜಲಪಾತ ಎನಿಸಿದೆ. ಈಗ ಈ ಜಲಧಾರೆ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ADVERTISEMENT

ಸುಂಟಿಕೊಪ್ಪದಿಂದ ಮಡಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಿಂದ ಬೋಯಿಕೇರಿ ಎಂಬ ಸ್ಥಳವಿದ್ದು ಅಲ್ಲಿಂದ ಬಲಕ್ಕೆ ತಿರುಗಿ 2 ಕಿ.ಮೀ ಕ್ರಮಿಸಿದರೆ ‘ಹಾಲೇರಿ ಫಾಲ್ಸ್’ ಧಮ್ಮಿಕ್ಕುತ್ತಿರುವ ರಮಣೀಯ ದೃಶ್ಯವನ್ನು ಕಣ್ಣಾರೆ ಕಂಡೆ ಅನುಭವಿಸಬಹುದು.

ಬೇಸಿಗೆಯಲ್ಲೂ ತನ್ನ ಸೌಂದರ್ಯವನ್ನು ತೋರಿಸುವ ಈ ಜಲಪಾತ ಮಳೆಗಾಲದಲ್ಲಂತೂ ಕಣ್ಮನ ಸೂರೆಗೊಳ್ಳುತ್ತದೆ. ಜಲಪಾತ ನೋಡಲು ಕಾಫಿ ತೋಟದ ನಡುವೆ ಒಂದಷ್ಟು ದೂರ ತೆರಳಿದರೆ ಈ ಸುಂದರ ಜಲಪಾತವನ್ನು ಆಸ್ವಾದಿಸಬಹುದಾಗಿದೆ.

ಇಲ್ಲಿಗೆ 2 ಕಿ.ಮೀ ದೂರದಲ್ಲೇ ಐತಿಹಾಸಿಕ ಹಾಲೇರಿ ಗ್ರಾಮವೂ ಇದೆ. ಮಡಿಕೇರಿಗೂ ಮುಂಚೆ ಇದೇ ಊರಿನಲ್ಲಿ ಕೊಡಗಿನ ಅರಸರು ಆಳ್ವಿಕೆ ಮಾಡುತ್ತಿದ್ದರು. ಇಂತಹದ್ದೊಂದು ಐತಿಹಾಸಿಕ ಗ್ರಾಮದ ಸಮೀಪ ಖಾಸಗಿ ಕಾಫಿ ತೋಟದಲ್ಲಿ ಈ ಜಲ‍ಪಾತ ಇದೆ.

ಹಾಲೇರಿ ಗ್ರಾಮಕ್ಕೆ ತೆರಳುವ ರಸ್ತೆಯ ಬದಿಯಲ್ಲೇ ಈ ಜಲಪಾತದ ವಯ್ಯಾರವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಗೆ ಬರಲು ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಇಲ್ಲ. ಬೋಯಿಕೇರಿವರೆಗೆ ಮಾತ್ರ ಬಸ್ ವ್ಯವಸ್ಥೆ ಇದೆ. ಅಲ್ಲಿಂದ 2 ಕಿ.ಮೀ ದೂರವನ್ನು ಕ್ರಮಿಸಬೇಕಿದೆ. ಹಾಗಾಗಿ, ಸ್ವಂತ ವಾಹನದಲ್ಲಿ ಬಂದರೆ ಯಾವುದೇ ಕಷ್ಟ ಇಲ್ಲದೇ ಈ ಜಲಪಾತದ ಸೌಂದರ್ಯವನ್ನು ವೀಕ್ಷಿಸಬಹುದು.

ಈ ಜಲಪಾತ ಧುಮ್ಮಿಕ್ಕಿ ಮುಂದೆ ಕೆಲವೇ ಮೀಟರ್‌ಗಳ ಅಂತರದಲ್ಲಿಯೂ ಮತ್ತೊಂದು ಕಿರು ಜಲಧಾರೆಯನ್ನು ಇದು ಸೃಷ್ಟಿಸಿದ್ದು, ಅದೂ ಸಹ ಮನಮೋಹಕ ಎನಿಸಿದೆ.

ಹಾಲೇರಿ ಜಲಪಾತ ಧುಮ್ಮಿಕ್ಕಿದ ನಂತರ ಕೆಲವೇ ಮೀಟರ್‌ಗಳ ಅಂತರದಲ್ಲಿ ಮತ್ತೊಂದು ಕಿರಿದಾದ ಜಲಪಾತವೂ ಉಕ್ಕೇರಿ ಹರಿಯುತ್ತಿದೆ

ಈ ವರ್ಷ ಬೇಸಿಗೆ ಸಮಯದಲ್ಲಿ ತೀರಾ ಸಣ್ಣದಾಗಿ ಹರಿಯುತ್ತಿತ್ತು. ಮಳೆಯ ಕೊರತೆಯಾಗದಿದ್ದರೆ ವರ್ಷಪೂರ್ತಿ ಈ ಜಲಪಾತ ಧುಮ್ಮಿಕ್ಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.