ADVERTISEMENT

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿದ್ದರೂ ಚಿಂತೆ ತಪ್ಪಿದ್ದಲ್ಲ!

ಮಳೆ ಇಲ್ಲದ ಪರಿಸ್ಥಿತಿ, ಇದೇ ರೀತಿ ಮುಂದುವರೆದರೆ ಕಡು ಕಷ್ಟ ಸಂಭವ

ಕೆ.ಎಸ್.ಗಿರೀಶ್
Published 12 ಮಾರ್ಚ್ 2024, 7:02 IST
Last Updated 12 ಮಾರ್ಚ್ 2024, 7:02 IST
ಹಾರಂಗಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವ ದೃಶ್ಯ ಈಚೆಗೆ ಕಂಡು ಬಂತು
ಹಾರಂಗಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿರುವ ದೃಶ್ಯ ಈಚೆಗೆ ಕಂಡು ಬಂತು   

ಮಡಿಕೇರಿ: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯ ಬೇಸಿಗೆಯ ಹೊಸ್ತಿಲಲ್ಲಿಯೇ ಬರಿದಾಗುತ್ತಿದ್ದು, ಆತಂಕ ಮೂಡಿಸಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದು ಸದ್ಯದಲ್ಲಿ ಒಂದು ಜೋರು ಮಳೆ ಬಾರದಿದ್ದರೆ ಜಲಾಶಯವನ್ನೇ ನಂಬಿಕೊಂಡಿರುವ ರೈತಾಪಿ ಸಮುದಾಯದವರಿಗೆ ಕಡು ಕಷ್ಟ ಎದುರಾಗುವ ಸಾಧ್ಯತೆಗಳಿವೆ. ಮಾತ್ರವಲ್ಲ, ಅಂತರ್ಜಲದ ಪ್ರಮಾಣವೂ ಕಡಿಮೆಯಾಗುವ ಸಂಭವಗಳಿವೆ.

ಜಲಾಶಯದ ಮಟ್ಟವನ್ನು ಗಮನಿಸಿದರೆ ಕಳೆದ ವರ್ಷದ ಮಟ್ಟಕ್ಕಿಂತ ಮೂರು ಅಡಿಗಳಷ್ಟು ಹೆಚ್ಚು ನೀರು ಈಗ ಇದೆ. ಆದರೆ, ನಿಜಕ್ಕೂ ಈ ನೀರು ಸಾಕಾಗುತ್ತಿಲ್ಲ. ಮುಂಗಾರಿನಲ್ಲಿ ತುಂಬುವ ಮೊದಲ ಜಲಾಶಯ ಎಂಬ ಹೆಸರಿಗೆ ಪಾತ್ರವಾದ ಈ ಜಲಾಶಯದಲ್ಲಿ ಸಾಕಷ್ಟು ಹೂಳು ತುಂಬಿದೆ. ಹೂಳು ತೆಗೆಯದ ಹೊರತು ನೀರಿನ ಲಭ್ಯತೆ ಕುರಿತು ಸ್ಪಷ್ಟವಾಗಿ ಹೇಳಲಾಗದು.

ADVERTISEMENT

8.5 ಟಿಎಂಸಿ ಗರಿಷ್ಠ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಸದ್ಯ ಇರುವುದು ಕೇವಲ 2.6 ಟಿಎಂಸಿ ಗರಿಷ್ಠ ಅಡಿ ನೀರು ಮಾತ್ರ. ಇಷ್ಟು ಕಡಿಮೆ ನೀರು ಇದ್ದರೂ ಸದ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‌ಅಂಕಿ ಅಂಶಗಳನ್ನು ಗಮನಿಸಿದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಹೆಚ್ಚಿನ ನೀರು ಜಲಾಶಯದಲ್ಲಿದೆ. 2,859 ಗರಿಷ್ಠ ಅಡಿಯ ಈ ಜಲಾಶಯದಲ್ಲಿ ಕಳೆದ ವರ್ಷ ಮಾರ್ಚ್ 8ರಂದು 2,827.78 ಅಡಿಯಷ್ಟು ನೀರು ಇತ್ತು. ಈ ವರ್ಷ ಇದೇ ದಿನ 2,830.34 ಅಡಿಯಷ್ಟು ನೀರು ಇದೆ. ಹೀಗಾಗಿಯೇ ಹೆಚ್ಚಿನ ತೊಂದರೆಯಾಗದು ಎಂಬುದು ಅಧಿಕಾರಿಗಳ ನಂಬುಗೆ.

ಆದರೆ, ವಾಸ್ತವದಲ್ಲಿ ಗಮನಿಸುವುದಾದರೆ ತಾಂತ್ರಿಕವಾಗಿ ಹೆಚ್ಚು ನೀರು ಇದ್ದರೂ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ತಾಪಮಾನ ಏರುಗತಿಯಲ್ಲಿದೆ. ಬೇಗ ಬೇಗನೇ ನೀರು ಆವಿಯಾಗುತ್ತಿದೆ. ಬೇಸಿಗೆಯ ಆರಂಭದಲ್ಲೇ ಹೆಚ್ಚು ಬಿಸಿಲು, ತಾಪಮಾನ ಇರುವುದರಿಂದ ಮುಂದೆ ಹೇಗೆ ಎಂಬ ಆತಂಕವೂ ಕಾಡುತ್ತಿದೆ. ಹೆಚ್ಚು ನೀರು ಆವಿಯಾದರೆ ಖಂಡಿತವಾಗಿಯೂ ನೀರು ಕಡಿಮೆಯಾಗಲಿದೆ ಎಂಬ ಮಾತನ್ನೂ ಅಧಿಕಾರಿಗಳು ಹೇಳುತ್ತಾರೆ.

ಕುಡಿಯುವ ನೀರಿನ ಪೂರೈಕೆ ಮೇಲೆ ಈ ಜಲಾಶಯದ ನೀರನ್ನು ಹೆಚ್ಚಾಗಿ ಅವಲಂಬಿಸದೇ ಹೋದರೂ ಕೊಳವೆ ಬಾವಿಗಳು ಬರಿದಾದ ನಂತರ ತುರ್ತು ಅಗತ್ಯಕ್ಕೆ ಬಳಕೆ ಮಾಡಲು, ಜಾನುವಾರುಗಳು ನೀರು ಕುಡಿಯಲು ಒಂದಿಷ್ಟು ಪ್ರಮಾಣದಲ್ಲಿ ನದಿಗೆ ಹಾಗೂ ಕಾಲುವೆಗೆ ಹರಿಸಲಾದರೂ ಈ ಜಲಾಶಯದಲ್ಲಿ ನೀರು ಇರಬೇಕಿದೆ. ಮಳೆ ಕೊರತೆಯಾಗಿರುವ ಈ ದಿನಗಳಲ್ಲಿ ಒಂದಿಷ್ಟು ನೀರನ್ನು ಕಾಲುವೆಗೆ ಹರಿಸಿ ಎಂಬ ಒತ್ತಾಯವೂ ರೈತರಿಂದ ಕೇಳಿ ಬಂದಿದೆ. ಹೀಗಾಗಿ, ಜಲಾಶಯದಲ್ಲಿರುವ ನೀರು ಮಹತ್ವ ಪಡೆದುಕೊಂಡಿದೆ. ಒಳ್ಳೆಯ ಮಳೆ ಬಿದ್ದರೆ ಪರಿಸ್ಥಿತಿ ಸರಿ ಹೋಗಲಿದೆ. ಇಲ್ಲದಿದ್ದರೆ ಕಷ್ಟ ಕಾದಿದೆ.

ಹಾರಂಗಿ ಜಲಾಶಯ ಈಚೆಗೆ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ
ಹಾರಂಗಿ ಜಲಾಶಯದ ನೀರು ಸದ್ಯಕ್ಕೆ ಸಾಕಾಗುವಂತಿದೆ. ಆದರೆ ಬಿಸಿಲ ಬೇಗೆ ಹೆಚ್ಚಿರುವುದರಿಂದ ಹೆಚ್ಚು ನೀರು ಆವಿಯಾಗುವ ಸಂಭವವೂ ಇದೆ. ಏಪ್ರಿಲ್ ಹೊತ್ತಿಗೆ ಒಮ್ಮೆಯಾದರೂ ಜಾನುವಾರುಗಳಿಗಾಗಿ ಒಂದಷ್ಟು ನೀರು ಹರಿಸುವ ಚಿಂತನೆ ಇದೆ.
–ದೇವೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್ ಹಾರಂಗಿ ಜಲಾಶಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.