ವಿರಾಜಪೇಟೆ: ಸಮೀಪದ ಐಮಂಗಲ ಗ್ರಾಮದ ಕುಂಡ್ರಂಡ ಸಿ.ಪೊನ್ನಪ್ಪ ಅವರ ಭತ್ತದ ಗದ್ದೆ ಹಾಗೂ ತೋಟದಲ್ಲಿ ಈಚೆಗೆ ಕಾಡಾನೆಗಳು ದಾಂದಲೆ ನಡೆಸಿದ ಪರಿಣಾಮ ಭತ್ತ, ಕಾಫಿ, ಅಡಿಕೆ ಫಸಲು ನಷ್ಟವಾಗಿದೆ.
ಕಾಫಿ ತೋಟಕ್ಕೆ ದಾಳಿ ಮಾಡಿದ ಕಾಡಾನೆಗಳು ಅಡಿಕೆ ಗಿಡ, ಬಾಳೆ, ಫಸಲು ಬಂದಿದ್ದ ಕಾಫಿಗಿಡಗಳನ್ನು ಮುರಿದು ಅಂದಾಜು ₹ 3 ಲಕ್ಷದಷ್ಟು ನಷ್ಟ ಉಂಟಾಗಿದೆ. ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಆನೆಗಳನ್ನು ಕಾಡಿಗೆ ಅಟ್ಟಬೇಕು. ಜೊತೆಗೆ ನಷ್ಟ ಪರಿಹಾರವನ್ನು ಒದಗಿಸುವಂತೆ ಕುಂಡ್ರಂಡ ಸಿ. ಪೊನ್ನಪ್ಪ ಅವರು ಒತ್ತಾಯಿಸಿದ್ದಾರೆ.
ಕಳೆದ 15 ದಿನಗಳಿಂದಲೂ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮದ ಭದ್ರಕಾಳಿ ದೇವಸ್ಥಾನದ ಮುಖ್ಯದ್ವಾರದ ಗೇಟ್, ಆವರಣಗೋಡೆಗೆ ಹಾನಿ ಮಾಡಿವೆ. ಕಾಡಾನೆಗಳಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದು, ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.