ADVERTISEMENT

ಸಂತಾನಶಕ್ತಿ ನಿಯಂತ್ರಣದ ಜವಾಬ್ದಾರಿ ಮಹಿಳೆಯರದ್ದೇ!

ಕೆ.ಎಸ್.ಗಿರೀಶ್
Published 11 ಜುಲೈ 2024, 4:37 IST
Last Updated 11 ಜುಲೈ 2024, 4:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಮಕ್ಕಳನ್ನು ಹೆರುವುದು, ಪಾಲನೆ ಮಾಡುವುದು ಮಾತ್ರವೇ ಮಹಿಳೆಯರ ಜವಾಬ್ದಾರಿಯಾಗಿ ಉಳಿದಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯೂ ಮಹಿಳೆಯದ್ದೇ ಜವಾಬ್ದಾರಿ ಎನ್ನುವ ಮನೋಭಾವ ಪುರುಷ ಸಮುದಾಯದಲ್ಲಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ಒಂದೇ ಒಂದು ಪುರುಷ ಸಂತಾನಶಕ್ತಿ ಹರಣ ಚಿಕಿತ್ಸೆ ‘ವ್ಯಾಸೆಕ್ಟಮಿ’ಗೆ ಒಬ್ಬ ಪುರುಷರೂ ಮುಂದಾಗಿಲ್ಲ. ಮಕ್ಕಳನ್ನು ಹೆರುವ ನೋವಿನ ಜೊತೆಗೆ ಈ ಶಸ್ತ್ರಚಿಕಿತ್ಸೆಯ ಸಂಕಟವನ್ನೂ ಮಹಿಳೆಯರೇ ಅನುಭವಿಸಬೇಕಿದೆ.

ಕಳೆದ ಸಾಲಿನಲ್ಲಿ 16 ಮಂದಿ ಪುರುಷರು ವ್ಯಾಸೆಕ್ಟಮಿಗೆ ಒಳಗಾಗಿದ್ದರು. ಈ ಸಾಲಿನಲ್ಲಿ ಇನ್ನೂ ಒಬ್ಬರೂ ಮುಂದಾಗಿಲ್ಲ. ಮಾತ್ರವಲ್ಲ, ಕೊಡಗು ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ ಪುರುಷ ಸಂತಾನಶಕ್ತಿ ಹರಣದ ಚಿಕಿತ್ಸೆ ‘ವ್ಯಾಸಕ್ಟಮಿ’ಗೆ ಒಳಗಾದವರ ಸಂಖ್ಯೆ ಎರಡಂಕಿಯನ್ನೂ ದಾಟಿಲ್ಲ. ಹೀಗಾಗಿ, ಮಹಿಳೆಯರೇ ಈ ನೋವನ್ನೂ ಸಹಿಸಬೇಕಾದ ಅನಿವಾರ್ಯತೆ ಇದೆ.

ಹಾಗೆ ನೋಡಿದರೆ, ಮಹಿಳಾ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಿಂತಲೂ ಪುರುಷ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವ್ಯಾಸೆಕ್ಟಮಿ ಹೆಚ್ಚು ಸುಲಲಿತ, ನೋವು ರಹಿತವಾದುದು. ಸ್ವಲ್ಪವೂ ಅಡ್ಡಪರಿಣಾಮ ಬೀರದ ಅತ್ಯಂತ ಸುರಕ್ಷಿತವಾದುದು. ಆದಾಗ್ಯೂ, ಈ ಚಿಕಿತ್ಸೆ ಬಗ್ಗೆ ಇರುವ ಮೂಢನಂಬಿಕೆಗಳಿಂದ ಪುರುಷರು ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ. ವ್ಯಾಸೆಕ್ಟಮಿ ಎಂದರೆ ಸಾಕು ಮಾರು ದೂರ ಸರಿಯುತ್ತಿದ್ದಾರೆ.

ADVERTISEMENT

ಏನಿದು ವ್ಯಾಸೆಕ್ಟಮಿ?

ಪುರುಷರಿಗೆ ಇದೀಗ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ಅತ್ಯಂತ ಸರಳವಾದ ‘ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ’ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಲಭ್ಯವಿದೆ. ಗಾಯ, ಹೊಲಿಗೆ ಇಲ್ಲದೇ ಕೇವಲ 5ರಿಂದ 10 ನಿಮಿಷದಲ್ಲಿ ಈ ಚಿಕಿತ್ಸೆ ಮಾಡಬಹುದು. ಕೇವಲ ಅರ್ಧ ಗಂಟೆಯಲ್ಲೇ ಮನೆಗೆ ತೆರಳಲೂಬಹುದು. ಜತೆಗೆ, ಸರ್ಕಾರ ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಎಲ್ಲರಿಗೆ ₹ 1,100 ಹಣ ನೀಡುತ್ತಿದೆ. ಪುರುಷರನ್ನು ಈ ಚಿಕಿತ್ಸೆಗೆ ಒಳಗಾಗಲು ಕೌನ್ಸಿಲಿಂಗ್ ಮಾಡಿ ಮನವೊಲಿಸುವ ಆಶಾ ಕಾರ್ಯಕರ್ತೆಯರಿಗೂ ಪ್ರೋತ್ಸಾಹಧನವನ್ನೂ ಸರ್ಕಾರ ನೀಡುತ್ತಿದೆ. ಇಷ್ಟಾದರೂ, ಕೊಡಗು ಜಿಲ್ಲೆಯಲ್ಲಿ ಪುರುಷರ ಚಿತ್ತ ವ್ಯಾಸಕ್ಟಮಿಯತ್ತ ಒಲಿಯುತ್ತಿಲ್ಲ.

ಈ ಶಸ್ತ್ರಚಿಕಿತ್ಸೆಯಿಂದ ಪುರುಷರ ದೈಹಿಕ ಅಥವಾ ಮಾನಸಿಕ ಶಕ್ತಿ ಕುಂದುವುದಿಲ್ಲ. ಮೊದಲಿನಂತೆ ಎಲ್ಲ ಕೆಲಸವನ್ನೂ ಮಾಡಬಹುದು. ಲೈಂಗಿಕ ಶಕ್ತಿಯೂ ಕುಂದುವುದಿಲ್ಲ. ಈ ಕುರಿತು ಸಾಕಷ್ಟು ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.

ಈ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೆ 1,533 ಮಹಿಳೆಯರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಒಬ್ಬ ಪುರುಷನೂ ಸಂತಾನಶಕ್ತಿ ಹರಣ ಚಿಕಿತ್ಸೆಗೆ ಒಳಗಾಗಿಲ್ಲ.

ವಿಶ್ವ ಜನಸಂಖ್ಯಾ ದಿನದ ಅಭಿಯಾನದ ಅಂಗವಾಗಿ ಈ ವರ್ಷ ಸರ್ಕಾರ ‘ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ವ್ಯಾಪ್ತಿಗೆ ಒಳಗಾದ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ’ ಎಂಬುದನ್ನು ಘೋಷವಾಕ್ಯವನ್ನಾಗಿ ಪರಿಗಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.