ಸಿದ್ದಾಪುರ: ಅವಕಾಶಕ್ಕಾಗಿ ಹುಡುಕಾಡುವ ಬದಲು ಅವಕಾಶ ಸೃಷ್ಟಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಿದ್ದಾರೆ ನೆಲ್ಯಹುದಿಕೇರಿಯ ಆಟೊ ರಿಕ್ಷಾ ಚಾಲಕಿ ಎಸ್.ಸುಜಾತಾ. ನೂರಕ್ಕೂ ಅಧಿಕ ಆಟೊಗಳಿರುವ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಪಟ್ಟಣದಲ್ಲಿ ಏಕೈಕ ಮಹಿಳಾ ಆಟೊ ಚಾಲಕಿ ಎಂಬ ಮನ್ನಣೆಗೆ ಅವರು ಪಾತ್ರರಾಗಿದ್ದಾರೆ.
ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕರೆ ನಿವಾಸಿ ಸುಜಾತಾ ಅವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಕಡಿಮೆ ಕೂಲಿಗೆ ಕೆಲಸ ಮಾಡಬೇಕಾದ ಸ್ಥಿತಿ ಇತ್ತು. ಈ ವೇಳೆ ಅವರು ಸ್ವಂತ ಆಟೊ ರಿಕ್ಷಾ ಖರೀದಿಸಿ, ಜೀವನ ಕಂಡುಕೊಂಡರು. ಈ ಮೂಲಕ ಪುರುಷ ಪಾರಮ್ಯದ ಜಗತ್ತಿನಲ್ಲಿ ಮಹಿಳೆಯ ಅಸ್ಮಿತೆಯನ್ನು ಮೂಡಿಸಿದರು.
ಮಹಿಳೆಯರು ಮತ್ತು ಮಕ್ಕಳು ಸುಜಾತಾ ಅವರ ಆಟೊಗಾಗಿ ಕಾದು ಕುಳಿತು ಅವರ ಆಟೊದಲ್ಲೇ ಪ್ರಯಾಣಿಸುವುದು ವಿಶೇಷ. ಕಳೆದ 5 ವರ್ಷದಿಂದ ಆಟೊ ಚಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ‘ಲೇಡಿ ಆಟೊ’ ಎಂದೇ ಪಟ್ಟಣದಲ್ಲಿ ಹೆಸರಾಗಿದ್ದಾರೆ.
‘ಆಟೊ ರಿಕ್ಷಾ ಚಾಲನೆಯಿಂದ ಉತ್ತಮ ಆದಾಯದೊಂದಿಗೆ ಸಮಾಜದಲ್ಲಿ ಜನರು ಗುರುತಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಯೊಂದಿಗೆ ಇಬ್ಬರು ಗಂಡು ಮಕ್ಕಳನ್ನು ಓದಿಸಲು ಆಟೊ ಚಾಲಕ ವೃತ್ತಿ ಸಹಾಯವಾಗಿದೆ’ ಎನ್ನುತ್ತಾರೆ ಚಾಲಕಿ ಸುಜಾತಾ.
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಸುಜಾತಾ, ಜನಸೇವಕಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಾರ್ಡ್‌ನ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿ ಸೇವೆಯ ಜೊತೆಗೆ ಆಟೊ ರಿಕ್ಷಾ ಮೂಲಕ ಸಾರ್ವಜನಿಕ ಸಂಪರ್ಕದ ಸೇವೆಯನ್ನೂ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.