ADVERTISEMENT

ಮಡಿಕೇರಿ: ಅಣಬೆ ಬೆಳೆದು ಯಶಸ್ಸು ಕಂಡ ಮಹಿಳೆಯರು

ಬಾಳೆಲೆಯಲ್ಲಿ ಕೃಷಿ ಇಲಾಖೆಯಿಂದ ಅಪರೂಪದ ಕಾರ್ಯ

ಕೆ.ಎಸ್.ಗಿರೀಶ್
Published 2 ಫೆಬ್ರುವರಿ 2024, 4:16 IST
Last Updated 2 ಫೆಬ್ರುವರಿ 2024, 4:16 IST
ಬಾಳೆಲೆಯಲ್ಲಿ ಅಣಬೆ ಬೆಳೆದಿರುವುದು
ಬಾಳೆಲೆಯಲ್ಲಿ ಅಣಬೆ ಬೆಳೆದಿರುವುದು   

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಗ್ರಾಮದಲ್ಲಿ 20 ಮಹಿಳೆಯರು ಅಣಬೆ ಬೆಳೆದು ಯಶಸ್ಸು ಕಂಡಿದ್ದಾರೆ. ಇನ್ನು ಮುಂದೆ ಅಣಬೆಯನ್ನು ತಮ್ಮ ಜೀವನೋಪಾಯದ ಉಪ ಕಸುಬಾಗಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಕೃಷಿ ಇಲಾಖೆ ಆತ್ಮಯೋಜನೆಯಡಿ ಬೆನ್ನುಲುಬಾಗಿ ನಿಂತಿದೆ.

ಸಂಜೀವಿನಿ ಒಕ್ಕೂಟದ ಸ್ವಸಹಾಯ ಮಹಿಳೆಯರ ಗುಂಪಿನ 20 ಮಹಿಳೆಯರು 26 ದಿನಗಳ ಹಿಂದೆಯಷ್ಟೇ ಕೃಷಿ ಇಲಾಖೆಯಿಂದ ತರಬೇತಿ ಪಡೆದಿದ್ದರು. ಕೃಷಿ ಇಲಾಖೆಗೆ ಸೇರಿದ ಬಾಳೆಲೆಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯೊಂದರಲ್ಲಿ ಅವರು ಬೆಳೆದಿರುವ ಅಣಬೆ ಇದೀಗ ನಳನಳಿಸುತ್ತಿದೆ.

ಕೃಷಿ ಇಲಾಖೆಯ ಅಂಬಿಕಾ, ಮೀರಾ, ಕಾವ್ಯಾ, ಮೈತ್ರಿ ತರಬೇತಿ ನೀಡಿ, ಯಶಸ್ಸು ಪಡೆಯಲು ಕಾರಣರಾಗಿದ್ದಾರೆ ಎಂದು ಸಂಘದ ಮುಖಂಡರಾದ ಪಂಕಜಾ ಗಿರೀಶ್ ಹೇಳುತ್ತಾರೆ.

ADVERTISEMENT

‘ಇದಕ್ಕೆ ನಾವು ಯಾವುದೇ ಖರ್ಚು ಮಾಡಿಲ್ಲ. ಭತ್ತದ ಹುಲ್ಲುಗಳನ್ನು ನಮ್ಮದೇ ಗದ್ದೆಯಿಂದ ತಂದಿದ್ದೇವೆ. ಜಾಗ ಮತ್ತು ಅಣಬೆ ಬೀಜಗಳನ್ನು ಕೃಷಿ ಇಲಾಖೆ ನೀಡಿದೆ. ಈಗ 4 ಕೆ.ಜಿಯಷ್ಟು ಅಣಬೆಯನ್ನು ತೆಗೆಯಲಾಗಿದ್ದು, ಇನ್ನೂ 10 ಕೆ.ಜಿಯಷ್ಟು ತೆಗೆಯುವ ನಿರೀಕ್ಷೆ ಇದೆ’ ಎಂದು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

‘ಭತ್ತದ ಹುಲ್ಲನ್ನು ಕುದಿಯುವ ನೀರಿನಲ್ಲಿ ಬೇಯಿಸಬೇಕು. ನಂತರ ನೆರಳಿನ‌ಲ್ಲಿ ಒಣಗಿಸಬೇಕು. ಕೈಯಿಂದ ಮುಟ್ಟಿದರೆ ತೇವಾಂಶ ಮಾತ್ರ ಇರಬೇಕು, ನೀರು ಸೋರುತ್ತಿರಬಾರದು. ಅಂದರೆ ಶೇ 80ರಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ನಂತರ ಹುಲ್ಲನ್ನು ಎರಡು ಇಂಚಿನಷ್ಟು ಕತ್ತರಿಸಿ ಪ್ಲಾಸ್ಟಿಕ್ ಕವರ್‌ಗೆ ಹಾಕಬೇಕು. 5 ಕೆ.ಜಿ ಕವರ್‌ನಲ್ಲಿ ಒಣಗಿಸಿದಂತಹ ಹುಲ್ಲನ್ನು ಸುರುಳಿಯಾಕಾರದಲ್ಲಿ ಹಾಕಿ, ಬೀಜ ಹಾಕಿ ಮತ್ತೆ ಇನ್ನೊಂದು ಪದರ ಹುಲ್ಲನ್ನು ಹಾಕಬೇಕು, ಮತ್ತೆ ಬೀಜ ಹಾಕಬೇಕು. ಹೀಗೆ, 4 ಪದರ ಹುಲ್ಲು, 4 ಪದರ ಬೀಜಗಳನ್ನು ಹಾಕಬೇಕು. ರಬ್ಬರ್ ಬ್ಯಾಂಡ್ ಹಾಕಿ ನಂತರ ಕವರ್‌ನ್ನು ತೂತು ಮಾಡಬೇಕು. 21 ದಿನಗಳ ಕಾಲ ಕತ್ತಲ ಕೋಣೆಯಲ್ಲಿಡಬೇಕು’ ಎಂದು ಅವರು ಅಣಬೆ ಕೃಷಿ ಕುರಿತು ಹೇಳಿದರು.

ಅಣಬೆ ಬೆಳೆಯುವ ಕೊಠಡಿ ಶುಭ್ರವಾಗಿರಬೇಕು. ಇಲ್ಲದೇ ಇದ್ದರೆ ಫಂಗಸ್ ಆಗುವ ಸಾಧ್ಯತೆ ಇರುತ್ತದೆ. 21 ದಿನಗಳ ನಂತರ ಬೆಳಕಿಗೆ ತಂದರೆ ತೂತುಗಳಿಂದ ಅಣಬೆ ಬೆಳೆಯುತ್ತದೆ. ಕವರ್ ತೆಗೆದು ಅಣಬೆಯನ್ನು ತೆಗೆಯಬೇಕು’ ಎಂದು ತಿಳಿಸಿದರು.

ಈಗ 75 ಬ್ಯಾಗ್‌ಗಳಷ್ಟು ಅಣಬೆ ಬೆಳೆಯಲಾಗಿದೆ. 4 ಕೆ.ಜಿಯಷ್ಟು ಅಣಬೆ ತೆಗೆದು ಮಾರಾಟ ಮಾಡಲಾಗುತ್ತಿದೆ. ಇನ್ನೂ ತೆಗೆಯುವುದು ಇದೆ. ಇನ್ನೂ ಸುಮಾರು 10 ಕೆ.ಜಿಯಷ್ಟು ಬರುವ ನಿರೀಕ್ಷೆ ಇದೆ ಎಂದರು.

5 ಕೆ.ಜಿಯ ಒಂದು ಕವರ್‌ನಲ್ಲಿ ಕನಿಷ್ಠ ಎಂದರೂ 3 ಬಾರಿ ಕೊಯ್ಲು ಮಾಡಬಹುದು.  ಕನಿಷ್ಠ ಎಂದರೂ 2ರಿಂದ 3 ಕೆ.ಜಿ ಅಣಬೆಯನ್ನು ತೆಗೆಯಬಹುದು. ಸುಮಾರು 60 ಸಾವಿರಕ್ಕೂ ಅಧಿಕ ಹಣ ಬರುವ ನಿರೀಕ್ಷೆ ಎಂದು ಹೇಳಿದರು.

ಪಂಕಜಾ ಗಿರೀಶ್ ಅವರೊಂದಿಗೆ ಭವ್ಯಾ, ಪಾರ್ವತಿ, ಕವಿತಾ, ಗಿರಿಜಾ, ಪೊನ್ನಮ್ಮ, ಸರೋಜಾ, ಸುಜಾತಾ, ವಿನೀತಾ, ನಳಿನಿ ಈ ತಂಡದಲ್ಲಿದ್ದಾರೆ.

ಇವರಲ್ಲಿ ಬಹುತೇಕ ಮಂದಿ ಅಣಬೆ ಬೇಸಾಯವನ್ನು ತಾವೇ ಸ್ವತಃ ತಮ್ಮ ಮನೆಗಳಲ್ಲಿ ಮಾಡಲು ಮುಂದೆ ಬಂದಿದ್ದಾರೆ ಎಂದು ಸಂಪನ್ಮೂಲ ಅಧಿಕಾರಿ ಬಟ್ಟಿಯಂಡ ಅಂಬಿಕಾ ಅಚ್ಚಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಳೆಲೆಯಲ್ಲಿ ಅಣಬೆ ಬೆಳೆದಿರುವುದು
ಮಹಿಳೆಯರು ಅಣಬೆ ಬೆಳೆಯಲು ಸಿದ್ಧತೆ ನಡೆಸಿರುವುದು
ಅಣಬೆ ಬೆಳೆದು ಯಶಸ್ಸು ಕಂಡ ಮಹಿಳೆಯರು

ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಯ ಯಶಸ್ಸು ಪ್ರಮುಖ ಆದಾಯದ ಬೆಳೆ ಭರಪೂರ ಅಣಬೆ ಬೆಳೆದು ಖುಷಿಯಾದ ಮಹಿಳೆಯರು

‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮದಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅಣಬೆ ಬೇಸಾಯ ಕುರಿತು ಮಹಿಳೆಯರಿಗೆ ತರಬೇತಿ ನೀಡಿ ಅವರಿಂದಲೆ ಅಣಬೆ ಬೆಳೆಸಿ ಯಶಸ್ಸು ಪಡೆಯಲಾಗಿದೆ

-ಮೈತ್ರಿ ಉಪಯೋಜನಾ ನಿರ್ದೇಶಕಿ ಆತ್ಮ ಯೋಜನೆ ಕೃಷಿ ಇಲಾಖೆ.

ಮಹಿಳೆಯರು ಸ್ವಾವಲಂಬಿಯಾಗಿ ಬದುಕುಲು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡುವ ಬೇಸಾಯ ಎಂದರೆ ಅಣಬೆ ಬೇಸಾಯ. ಈ ಸಂಬಂಧ ನೀಡಿದ ತರಬೇತಿ ಬಾಳೆಲೆಯಲ್ಲಿ ಯಶಸ್ವಿಯಾಗಿದೆ ಬಟ್ಟಿಯಂಡ

-ಅಂಬಿಕಾ ಅಚ್ಚಯ್ಯ ಸಂಪನ್ಮೂಲ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.