ಮಡಿಕೇರಿ: ಕೊಡಗು ಜಿಲ್ಲೆಯು 2018ರಲ್ಲಿ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿತ್ತು. ಜಿಲ್ಲೆಯಲ್ಲಿ ಅದೆಷ್ಟೋ ಮನೆಗಳು ಕುಸಿದಿದ್ದವು. ಪ್ರವಾಸಿ ತಾಣಗಳೂ ಅಪಾಯಕ್ಕೆ ಸಿಲುಕಿದ್ದವು. ಅದರಲ್ಲೂ ‘ಮಂಜಿನ ನಗರಿ’ಯ ಹೃದಯ ಭಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ಆ ಸ್ಥಳದಲ್ಲಿ ಎರಡು ವರ್ಷವಾದರೂ ಯಾವುದೇ ತಡೆಗೋಡೆ ನಿರ್ಮಾಣವಾಗಿಲ್ಲ.
ವರ್ಷದಿಂದ ವರ್ಷಕ್ಕೆ ಆ ಸ್ಥಳವು ಅಪಾಯಕಾರಿ ಆಗುತ್ತಿದೆ. ಜಿಲ್ಲಾಡಳಿತ, ಶಾಸಕರು ಸಭೆಯ ಮೇಲೆ ಸಭೆ ನಡೆಸಿದರೂ ಮಾತ್ರ ಕಾಮಗಾರಿ ಆರಂಭಿಸಲು ಹಲವು ವಿಘ್ನಗಳು ಎದುರಾಗುತ್ತಿವೆ.
ಎರಡು ವರ್ಷಗಳ ಹಿಂದೆ ‘ಮಡಿಕೇರಿ ಸ್ಕ್ವೇರ್’ ಹೆಸರಿನಲ್ಲಿ ಅದೇ ಸ್ಥಳದಲ್ಲಿ ಕಾಮಗಾರಿ ಆರಂಭಿಸಲಾಗಿದ್ದು ಅದಕ್ಕೆ ₹ 1.7 ಕೋಟಿ ವೆಚ್ಚವಾಗಿದೆ. ಮಣ್ಣು ತೆರವು ಮಾಡಿ, ಕಬ್ಬಿಣ ಸರಳು ಹಾಕಿದ್ದನ್ನು ಬಿಟ್ಟರೆ ಗುರುತಿಸುವಂತಹ ದೊಡ್ಡ ಕಾಮಗಾರಿ ಆ ಸ್ಥಳದಲ್ಲಿ ನಡೆದಿಲ್ಲ. ಆದರೂ, ಕೋಟಿಯಷ್ಟು ಹಣ ಖರ್ಚಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಅದರ ತನಿಖೆಯೂ ಹಳ್ಳ ಹಿಡಿದಿದೆ.
ಈಗ ಮತ್ತೆ ಅದೇ ಕಾಮಗಾರಿಗೆ ₹ 2.96 ಕೋಟಿ ಅನುದಾನು ಮಂಜೂರಾಗಿದ್ದು ಅದರಲ್ಲಿ ಶೇ 75ರಷ್ಟು ಅನುದಾನವು ನಗರಸಭೆಗೆ ಬಿಡುಗಡೆಯಾಗಿದೆ.
ಎರಡು ವರ್ಷಗಳ ಹಿಂದೆ ಮಹಾಮಳೆ ಸುರಿದಿದ್ದರಿಂದ ರಾತ್ರೋರಾತ್ರಿ ಬರೆ (ಗುಡ್ಡ) ಹಳೇ ಖಾಸಗಿ ಬಸ್ ನಿಲ್ದಾಣದ ಮೇಲೆ ಕುಸಿದಿತ್ತು. ಕೆಲವು ಅಂಗಡಿಗಳು ಅಪಾಯಕ್ಕೆ ಸಿಲುಕಿದ್ದವು. ಘಟನೆ ನಡೆದು ಹಲವು ತಿಂಗಳ ನಂತರ ಅಲ್ಲಿಂದ ಎರಡು ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗಿತ್ತು. ಕೊನೆಗೂ ಅಂದಿನ ನಗರಸಭೆ ಆಡಳಿತವು ಯೋಜನೆ ರೂಪಿಸಿ ‘ಮಡಿಕೇರಿ ಸ್ಕ್ವೇರ್’ ಹೆಸರಿನಲ್ಲಿ ಕಾಮಗಾರಿ ಆರಂಭಿಸಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರು (ಅಂದು ಪ್ರವಾಸೋದ್ಯಮ ಸಚಿವರು) ಆರಂಭಿಕ ಹಂತದಲ್ಲಿ ಮುತುವರ್ಜಿ ವಹಿಸಿ ಈ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿ ಬದಲಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಮಣ್ಣು ಪರೀಕ್ಷೆಯೂ ನಡೆದು ಕಾಮಗಾರಿ ಆರಂಭವಾಗಿತ್ತು. ಆದರೆ, ಇಂದಿಗೂ ಅಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ.
ಹೃದಯಭಾಗದಲ್ಲಿ ಇಂದಿಗೂ ಕುಸಿದ ದೃಶ್ಯ ಕಾಣಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಅದನ್ನೇ ನೋಡುತ್ತಾ ಓಡಾಟ ನಡೆಸುತ್ತಿದ್ದಾರೆ. ಸ್ಥಳೀಯರಿಗೂ ಮಳೆಗಾಲದಲ್ಲಿ ಈ ದಶ್ಯ ಭಯ ಹುಟ್ಟಿಸುತ್ತಿದೆ. ಇನ್ನು ಇದೇ ರೀತಿಯಲ್ಲಿ ಬೆಟ್ಟವು ಕುಸಿಯುತ್ತಿದ್ದರೆ ಮಡಿಕೇರಿಯ ಐತಿಹಾಸಿಕ ಕೋಟೆಗೂ ಅಪಾಯ ಕಾದಿದೆ.
‘ಮತ್ತೊಂದು ಮಳೆಗಾಲದ ವೇಳೆಗಾದರೂ ತಡೆಗೋಡೆ ನಿರ್ಮಿಸಿದರೆ ಅನುಕೂಲ. ಇಲ್ಲದಿದ್ದರೆ ಭಾರಿ ಮಳೆ ಸುರಿದು ಹೃದಯ ಭಾಗದಲ್ಲಿ ಮತ್ತೊಂದು ಅನಾಹುತಕ್ಕೆ ನಾವೇ ಅನುವು ಮಾಡಿಕೊಟ್ಟಂತೆ ಆಗಲಿದೆ’ ಎಂದು ನಗರದ ಸಂದೇಶ ಎಚ್ಚರಿಸುತ್ತಾರೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ:ಇನ್ನು 10 ದಿನಗಳ ಹಿಂದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ನಗರದ ಖಾಸಗಿ ಹಳೇ ಬಸ್ ನಿಲ್ದಾಣದ ಬಳಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದರು. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ರೇಸ್ ಕೋರ್ಸ್ ರಸ್ತೆಯಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆಯ ಬಳಿ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ಮಣ್ಣು ತೆರವು ಮಾಡಲಾಗಿದೆ. ಇಂದಿರಾ ಕ್ಯಾಂಟೀನ್ ಬಳಿ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕರೂ ತಡೆಗೋಡೆ ಕಾಮಗಾರಿ ಆರಂಭವಾಗಿಲ್ಲ.
ಮಳೆ ನಿಂತ ಕೂಡಲೇ ಆರಂಭ:‘ಅಜ್ಜಮಾಡ ದೇವಯ್ಯ ವೃತ್ತದ ಬಳಿ ತಡೆಗೋಡೆ ಮಾತ್ರ ನಿರ್ಮಾಣ ಮಾಡಲಾಗುತ್ತಿದೆ. ಮಡಿಕೇರಿ ಸ್ಕ್ವೇರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿಲ್ಲ. ತಡೆಗೋಡೆಗೆ ಹೊಸದಾಗಿ ₹ 2.96 ಕೋಟಿ ಅನುದಾನ ನಿಗದಿಯಾಗಿದೆ’ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.