ಸುಂಟಿಕೊಪ್ಪ: ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗಿನಲ್ಲಿ ಬಂದು ನೆಲೆಸಿರುವ ತುಳು ಭಾಷಿಗರು ತಾವು ನಂಬಿರುವ ದೈವಗಳ ಆರಾಧನೆ ನೇಮೋತ್ಸವವನ್ನು ಅನೇಕ ದಶಕಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ವಿಶೇಷವಾಗಿ ಈ ಆಚರಣೆಗಳು ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ಹೆಚ್ಚು ನಡೆಯುತ್ತವೆ.
ಶಕ್ತಿ ಕಾರಣಿಕ ಎಂದೇ ನಂಬಿಕೊಂಡು ಬಂದಿರುವ ಪಾಷಾಣಮೂರ್ತಿ, ಮಂತ್ರದೇವತೆ, ಗುಳಿಗ, ಪಂಜುರ್ಲಿ, ವಿಷ್ಣುಮೂರ್ತಿ, ಕೊರಗಜ್ಜ, ಅಣ್ಣಪ್ಪ, ರಕ್ತ ಚಾಮುಂಡಿ, ಮೈಯಾಂತಿ, ರಾಹುಗುಳಿಗ, ಕಲ್ಕುಡ ಸೇರಿದಂತೆ ಹತ್ತಾರು ದೈವಗಳ ನೇಮಗಳನ್ನು ಹರಕೆ, ವಾರ್ಷಿಕ ಪೂಜೋತ್ಸವದ ರೂಪದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ಆಚರಿಸುತ್ತಿದ್ದಾರೆ.
ಪ್ರತಿವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹರಕೆ ಮತ್ತು ಹಿರಿಯರು ಹಾಕಿಕೊಟ್ಟ ದೈವರಾಧನೆಯನ್ನು ಕುಟುಂಬದ ಸದಸ್ಯರು ಮತ್ತು ಗ್ರಾಮದ ಜನರು ಸೇರಿ ಮಾಡುವ ಸಂಪ್ರದಾಯ ಮಾಡಿಕೊಂಡು ಬರುತ್ತಿದ್ದಾರೆ.
ಮನೆ, ಗದ್ದೆ, ಖಾಸಗಿ ಜಾಗದಲ್ಲಿ ಶಿಸ್ತು ಬದ್ಧ, ಸಾಂಪ್ರದಾಯಿಕವಾಗಿ ದೈವೀಕ ಆರಾಧನೆಯಂತೆ ತಾತ್ಕಾಲಿಕವಾಗಿ ಗುಡಿ ನಿರ್ಮಿಸಿ ಬಂಡಾರ ಇಳಿಸುವ ಮೂಲಕ ನೇಮೋತ್ಸವ ಆಚರಿಸಲಾಗುತ್ತದೆ.
ಕೊಡಗಿನ ಹರದೂರು, ಪನ್ಯ, ಅಂದಗೋವೆ, ಮಡಿಕೇರಿ, ಸಂಪಾಜೆ, ಹಾಲೇರಿ, ಮದೆ, ಮಕ್ಕಂದೂರು, ಸುಂಟಿಕೊಪ್ಪದ ಗ್ರಾಮಗಳಲ್ಲಿ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಕೋಲಗಳಿಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈಗಾಗಲೇ ಕಡಗದಾಳು, ಮಕ್ಕಂದೂರು, ಪನ್ಯ, ಕೆದಕಲ್, ಮಂಜಿಕೆರೆ, ಕಗ್ಗೋಡ್ಲುಗಳಲ್ಲಿ ಗಗ್ಗರ, ನೇಮಗಳು ಮುಗಿದಿವೆ.
ನೇಮೋತ್ಸವದ 20 ದಿನಗಳ ಮೊದಲೇ ಮನೆಗಳನ್ನು, ಗುಡಿಗಳನ್ನು ಸ್ವಚ್ಚಗೊಳಿಸಲಾಗುತ್ತದೆ. ನಂತರ 15 ದಿನಗಳ ಕಾಲ ವೃತದಲ್ಲಿ ಇರಲಾಗುತ್ತದೆ.
ನೇಮೋತ್ಸವಕ್ಕೆ 5 ದಿನಕ್ಕೆ ಮುಂಚೆ ಬಾಳೆದಿಂಡನ್ನು ಕಡಿದು ಶ್ರದ್ಧಾಭಕ್ತಿಯಿಂದ ದೈವಿಕ ಕಾರ್ಯಗಳಲ್ಲಿ ಎಲ್ಲರೂ ತೊಡಗಿಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕರೆಸಲಾಗುವ ದೈವನೃತ್ಯದ ಆರಾಧಕರಿಂದ ಕೋಲ ಕಟ್ಟಿಸಿ ಆ ದೈವಗಳ ಶಕ್ತಿಯ ಕಾರಣಿಕ ಪ್ರದರ್ಶಿಸಿ, ಮನೆಯ, ಗ್ರಾಮದ ಸಮಸ್ಯೆಯನ್ನು ಬಗೆಹರಿಸುವಂತೆ, ತಮ್ಮ ಇಷ್ಟಾರ್ಥಗಳನ್ನು ಬಗೆಹರಿಸುವಂತೆ ಬೇಡಿಕೊಳ್ಳುತ್ತಾರೆ ಭಕ್ತರು.
ಒಂದು ಗ್ರಾಮದಲ್ಲಿ ಕೋಲಗಳು ನಡೆದರೆ ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಆಗಮಿಸಿ ತಮ್ಮ ಬೇಡಿಕೆಗಳನ್ನು ದೈವದ ಮುಂದಿಡುತ್ತಾರೆ ಮತ್ತು ಹರಕೆ ಒಪ್ಪಿಸುವುದು ವಿಶೇಷ.
ಕೊಡಗಿನ ಕೋಟಿ-ಚೆನ್ನಯ್ಯ ಅವರ ಏಕೈಕ ಗರಡಿ ಮಡಿಕೇರಿ ಸಮೀಪದ ಮಕ್ಕಂದೂರುವಿನಲ್ಲಿದ್ದು, ಈ ಕಾರಣಿಕ ದೈವಸ್ಥಾನದಲ್ಲಿ ಎರಡು ದಿನ ಕೋಟಿ ಚೆನ್ನಯ್ಯ, ದೇಯಿ ಬೈದೇತಿ ಸೇರಿದಂತೆ ಇತರ ಶಕ್ತಿ ದೈವಗಳ ಹರಕೆ ಕೋಲಗಳು ಈಗಾಗಲೇ ಮುಗಿದಿದೆ.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಗದ್ದೆಯಲ್ಲಿ 4 ವರ್ಷಕ್ಕೊಮ್ಮೆ ವಿಷ್ಣುಮೂರ್ತಿ ಒತ್ತೆಕೋಲ ನಡೆಯುತ್ತದೆ. ಕೆಂಡದ ಮೇಲೆರುಗುವ ಈ ದೈವದ ಶಕ್ತಿಯನ್ನು ನೋಡಲು ಕೊಡಗು ಸೇರಿದಂತೆ ದಕ್ಷಿಣ ಕನ್ನಡ, ಮೈಸೂರು, ಉಡುಪಿಗಳಿಂದ ಭಕ್ತರು ಆಗಮಿಸಿ ದೈವಭಕ್ತಿಗೆ ಪುನೀತರಾಗುತ್ತಾರೆ.
ಹಿರಿಯರು ನಂಬಿರುವ ದೈವಗಳ ಆರಾಧನೆ, ನೇಮೋತ್ಸವವನ್ನು ಕೊಡಗಿನಲ್ಲಿರುವ ನತುಳು ಭಾಷಿಕರು ಮುಂದೂವರೆಸಿಕೊಂಡು ಹೋಗುತ್ತಿರುವುದು ಪರಶುರಾಮನ ನೆಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಶಕ್ತಿ ಭಕ್ತಿಗೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.