ADVERTISEMENT

ಕೊಡಗು: ಜಿಲ್ಲೆಗೆ ಯದುವೀರ್, ಕಾರ್ಯಕರ್ತರಿಗೆ ಕೃತಜ್ಞತೆ

ಕುಶಾಲನಗರ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಸಿದ್ದಾಪುರಕ್ಕೆ ನೂತನ ಸಂಸದ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:51 IST
Last Updated 16 ಜೂನ್ 2024, 4:51 IST
ನಾಪೋಕ್ಲುವಿನ ಭಗವತಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಪೂಜೆ ಸಲ್ಲಿಸಿದರು
ನಾಪೋಕ್ಲುವಿನ ಭಗವತಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಪೂಜೆ ಸಲ್ಲಿಸಿದರು   

ಮಡಿಕೇರಿ: ಸಂಸದರಾಗಿ ಆಯ್ಕೆಯಾಗಿ ಕೊಡಗು ಜಿಲ್ಲೆಗೆ ಇದೇ ಮೊದಲ ಬಾರಿಗೆ ಬಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶನಿವಾರ ಜಿಲ್ಲೆಯ ಹಲವೆಡೆ ಸಂಚರಿಸಿದರು.

ತಲಕಾವೇರಿಯ ದೇವಾಲಯ, ಭಾಗಮಂಡಲದ ಭಗಂಡೇಶ್ವರ ದೇಗುಲ, ಪಾಡಿಯ ಇಗ್ಗುತ್ತಪ್ಪ ದೇಗುಲ, ನಾ‍ಪೋಕ್ಲುವಿನ ಭಗವತಿ ದೇವಾಲಯ ಸೇರಿದಂತೆ ಹಲವು ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಶಾಲನಗರ, ನಾಪೋಕ್ಲು ಹಾಗೂ ಸಿದ್ದಾಪುರಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.

ನಾಪೋಕ್ಲುವಿನಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದ ಅವರು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.

ADVERTISEMENT
ನಾ‍ಪೋಕ್ಲುವಿನಲ್ಲಿ ಶನಿವಾರ ನಡೆದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು

‘ಸಮಸ್ಯೆಗಳಿಗೆ ಸಕರಾತ್ಮವಾಗಿ ಸ್ಪಂದಿಸುವೆ’

ನಾಪೋಕ್ಲು: ಜಿಲ್ಲೆಯ ವಿವಿಧ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಇಲ್ಲಿನ ಭಗವತಿ ದೇವಾಲಯದ ಸಮುದಾಯ ಭವನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾರಂಭದಲ್ಲಿ ಅವರು ಭರವಸೆ ನೀಡಿದರು.

‘ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷದ ಹಿರಿಯರು, ಎಲ್ಲಾ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದು ಕಾವೇರಿ ಮಾತೆಯ ಅನುಗ್ರಹದಿಂದ ಸಂಸದನಾಗಿ ಆಯ್ಕೆ ಆಗಿದ್ದೇನೆ. ಕೊಡಗಿನ ಜನರ ಆಕಾಂಕ್ಷೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಅವಕಾಶ ದೊರಕಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಕಾರ್ಯಕರ್ತರು ಶ್ರಮದಿಂದ ಪ್ರಚಾರ ಮಾಡಿ ಗೆಲ್ಲಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಹೇಳಿದರು.

‘ನಮ್ಮ ಪಕ್ಷದ ಸಿದ್ಧಾಂತಗಳು ಪ್ರಜೆಗಳಿಗೆ ಇಷ್ಟವಾಗಿದ್ದು, ಪಕ್ಷದ ಸಿದ್ಧಾಂತಗಳಿಗೆ ಅನುಗುಣವಾಗಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದರು.

ಇದಕ್ಕೂ ಮುನ್ನ ಭಗವತಿ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಯದುವೀರ್ ಪಾಲ್ಗೊಂಡರು. ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ದೇವಾಲಯ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಕರಿ ಮನವಿ ಮಾಡಿ, ಹಿರಿಯರಾದ ಗುರುವಪ್ಪ ವಿಶೇಷ ಮನವಿ ಸಲ್ಲಿಸಿದರು.

ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಪಕ್ಷದ ಹಿರಿಯ ಮುಖಂಡರಾದ ಕೆ.ಜಿ.ಬೋಪಯ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೀನಾ ಪ್ರಕಾಶ್, ರಾಜ್ಯ ರೈತ ಮೋರ್ಚಾ ಕಾರ್ಯಕಾರಿ ಸಮಿತಿಯ ಯಮುನಾ ಚಂಗಪ್ಪ, ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ನಾಗೇಶ್ ಕುಂದಲ್ ಪಾಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ಪಕ್ಷ ಮುಖಂಡರು

ಕುಶಾಲನಗರ; ಯದುವೀರ್‌ಗೆ ಪೂರ್ಣಕುಂಭ ಸ್ವಾಗತ

ಕುಶಾಲನಗರ: ಸಂಸದರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಬಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಶನಿವಾರ ಇಲ್ಲಿನ ಟೋಲ್‌ಗೇಟ್ ಬಳಿ ಬಿಜೆಪಿ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.

ಕಾರ್ಯಕರ್ತರು ಯದುವೀರ್ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು. ಪ್ರಧಾನಿ ಮೋದಿ ಒಡೆಯರ್ ಹಾಗೂ ಪಕ್ಷದ ಪರವಾಗಿ ಜಯಘೋಷ ಕೂಗಿ ಸಂಭ್ರಮಿಸಿದರು. ನಂತರ ಒಡೆಯರ್ ಅವರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ಬಳಿಕ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಪ‍ಕ್ಷದ ಮುಖಂಡರಾದ ಅಪ್ಪಚ್ಚುರಂಜನ್ ನಾಪಂಡ‌‌ ರವಿ‌ಕಾಳಪ್ಪ ಸುನಿಲ್ ಸುಬ್ರಮಣಿ ಬಿ.ಬಿ.ಭಾರತೀಶ್ ವಿ.ಕೆ.ಲೋಕೇಶ್ ಮಹೇಶ್ ಜೈನಿ ಬಿ.ಜೈವರ್ಧನ್ ಡಿ.ಕೆ.ತಿಮ್ಮಪ್ಪ ಎಂ.ವಿ.ನಾರಾಯಣ ಆರ್.ಕೆ.ಚಂದ್ರ ಅನಿತಾ ಪೂವಯ್ಯ ಗೌತಮ್ ಸೋಮೇಶ್ ಎಂ.ಎಂ.ಚರಣ್ ಮಧುಸೂದನ್ ರಾಮನಾಥನ್ ಭಾಗವಹಿಸಿದ್ದರು.

ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಶನಿವಾರ ಕುಶಾಲನಗರದಲ್ಲಿ ಪೂರ್ಣಕುಂಭ ಸ್ವಾಗತ ಕೋರಿದರು

‘ಕೊಡಗಿನಿಂದ ಹೆಚ್ಚು ಮತ; ಜಿಲ್ಲೆಯ ಸಮಸ್ಯೆ ಇತ್ಯರ್ಥಕ್ಕೆ ಕೆಲಸ’

ಸಿದ್ದಾಪುರ: ಇಲ್ಲಿನ ನೆಲ್ಯಹುದಿಕೇರಿ ಪಟ್ಟಣಕ್ಕೆ ಶನಿವಾರ ಬಂದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮುತ್ತಪ್ಪ ದೇವಾಲಯದ ಸಮೀಪ ಚಂಡೆ ವಾದ್ಯದೊಂದಿಗೆ ಸ್ವಾಗತ ಕೋರಲಾಯಿತು.

ಈ ವೇಳೆ ಮಾತನಾಡಿದ ಅವರು ‘ರಾಜಕೀಯದಲ್ಲಿ ಅನುಭವ ಕಡಿಮೆ ಇದ್ದರೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ನೀಡಿ ಗೆಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಬಿಜೆಪಿಗೆ ಹೆಚ್ಚು ಮತ ಬಂದಿದೆ. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುವೆ’ ಎಂದು ಭರವಸೆ ನೀಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಬಿಜೆಪಿ ಹಿರಿಯ ಮುಖಂಡರಾದ ರಾಬಿನ್ ದೇವಯ್ಯ ಅಪ್ಪಚ್ಚು ರಂಜನ್ ವಿ.ಕೆ.ಲೋಕೇಶ್ ಭಾಗವಹಿಸಿದ್ದರು.

ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶನಿವಾರ ಕುಶಾಲನಗರದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.