ಮಡಿಕೇರಿ: ಮುಂಜಾವಿನ ಮಂಜಿನ ನಡುವೆ, ಬೀಳುತ್ತಿದ್ದ ಹನಿಗಳಿಗೆ, ಬೀಸುತ್ತಿದ್ದ ಕುಳಿರ್ಗಾಳಿಗೆ ಮೈಯೊಡ್ಡಿ ಇಲ್ಲಿನ ಕೆಳಗಿನ ಗೌಡ ಸಮಾಜದ ಸಭಾಂಗಣಕ್ಕೆ ಬಂದ ನೂರಾರು ಮಂದಿ ಯೋಗ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ವತಿಯಿಂದ ಇಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ 10ನೇ ಯೋಗ ದಿನಾಚರಣೆಯಲ್ಲಿ 700ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಪ್ರತಿ ಬಾರಿಯಂತೆ ನುರಿತ ಯೋಗಪಟುಗಳ ಬದಲಿಗೆ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷ ಎನಿಸಿತ್ತು.
ಹಿರಿಯ ಯೋಗ ತರಬೇತುದಾರ ಮಹೇಶ್ ಅವರ ಮಾರ್ಗದರ್ಶನದಲ್ಲಿ 20 ಬಗೆಯ ಯೋಗಾಸನಗಳು, 4 ಬಗೆಯ ಪ್ರಾಣಾಯಾಮಗಳನ್ನು ಸಭಿಕರು ಮಾಡುವ ಮೂಲಕ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ 6 ಗಂಟೆಗೆ ಸಭಾಂಗಣದತ್ತ ಯೋಗಾಸಕ್ತರು ಬರತೊಡಗಿದರು. 6.30ರ ಹೊತ್ತಿಗೆ ಸಭಾಂಗಣ ಭರ್ತಿಯಾಯಿತು. ನಂತರ ಬಂದವರಿಗೆ ಪಕ್ಕದಲ್ಲಿದ್ದ ಮತ್ತೊಂದು ಸಭಾಂಗಣದಲ್ಲಿ ಸ್ಥಳಾವಕಾಶ ಮಾಡಿಕೊಡಲಾಯಿತು. ಆರಂಭದಲ್ಲಿ ಒಂದಿಷ್ಟು ಆಂಗಿಕ ಚಲನೆಯ ಅಭ್ಯಾಸಗಳನ್ನು ಮಾಡಿಸಿದ ನಂತರ 7 ಗಂಟೆಗೆ ಯೋಗಾಸನಗಳು ಆರಂಭಗೊಂಡವು.
ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನಗಳನ್ನು ಮಾಡಲಾಯಿತು.
ಕಪಾಲಭಾತಿಯ ನಂತರ, ನಾಡಿಶೋಧನ ಪ್ರಾಣಾಯಾಮ, ಶೀಥಲ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಧ್ಯಾನದ ನಂತರ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರ ಇಲಾಖೆ, ಸಮಾಜ ಕಲ್ಯಾಣ, ಪದವಿಪೂರ್ವ ಶಿಕ್ಷಣ ಇಲಾಖೆ, ಎನ್‌ಎಸ್‌ಎಸ್, ಎನ್‌ಸಿಸಿ ಘಟಕಗಳು, ನೆಹರೂ ಯುವ ಕೇಂದ್ರ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಯೋಗ ಭಾರತಿ, ಪ್ರಣವ ಯೋಗ ಕೇಂದ್ರ, ಪತಂಜಲಿ ಯೋಗ ಕೇಂದ್ರ, ಎನ್‌ಐಎಂಎ, ಆರ್ಟ್ ಆಫ್ ಲಿವಿಂಗ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಗಳು ಸಹಕಾರ ನೀಡಿದ್ದವು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ನೀಮಾ ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ್ ಯೋಗ ಮಾಡಿದ ಪ್ರಮುಖರಲ್ಲಿ ಸೇರಿದ್ದರು.ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಲು ಯೋಗಾಭ್ಯಾಸ ಅಗತ್ಯ. ಆರೋಗ್ಯವೇ ಭಾಗ್ಯವಾಗಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿ ವೆಂಕಟ್ ರಾಜಾ ಜಿಲ್ಲಾಧಿಕಾರಿ.
ಯಾವುದೇ ಗೊಂದಲವಿಲ್ಲದೇ ನಡೆದ ಕಾರ್ಯಕ್ರಮ ಬಂದಿದ್ದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಎಸ್.ಪಿ. ಭಾಗಿ
ದೇಹ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಲು ಯೋಗಾಭ್ಯಾಸ ಅಗತ್ಯ. ಆರೋಗ್ಯವೇ ಭಾಗ್ಯವಾಗಿದ್ದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಸಹಕಾರಿವೆಂಕಟ್ ರಾಜಾ ಜಿಲ್ಲಾಧಿಕಾರಿ.
ಅಂತರರಾಷ್ಟ್ರೀಯ 10ನೇ ಯೋಗ ದಿನಾಚರಣೆಗೆ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು ಹೀಗೆ ಎಲ್ಲರೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ ಯಶಸ್ಸುಗೊಳಿಸಿದ್ದಾರೆಡಾ.ರೇಣುಕಾದೇವಿ ಜಿಲ್ಲಾ ಆಯುಷ್ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.