ಮಡಿಕೇರಿ: ‘ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನ ಬಿಸಿಯೂಟ ಯಾವುದೇ ಕಾರಣಕ್ಕೂ ಕಳಪೆಯಾಗದಂತೆ ಎಚ್ಚರ ವಹಿಸಬೇಕು. ಗುಣಮಟ್ಟದ ಕುರಿತು ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2022-23ನೇ ಸಾಲಿನ ಜಿಲ್ಲಾ ವಲಯದ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಅಕ್ಷರ ದಾಸೋಹದಡಿ ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸುವ ಆಹಾರ ಪದಾರ್ಥ ಗುಣಮಟ್ಟದಿಂದ ಕೂಡಿರಬೇಕು. ಈ ಕುರಿತು ಯಾವುದೇ ದೂರುಗಳು ಬರದಂತೆ ಎಚ್ಚರ ವಹಿಸಬೇಕು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಉಪಯೋಗಿಸ
ಬಾರದು ಹಾಗೂ ದಾಸ್ತಾನೂ ಮಾಡಬಾರದು’ ಎಂದು ಸೂಚಿಸಿದರು.
ಉತ್ತಮ ಗುಣಮಟ್ಟದ ಬೇಳೆ, ಅಕ್ಕಿ, ಎಣ್ಣೆ ಹಾಗೂ ಉತ್ತಮ ತರಕಾರಿ ಇತರ ಆಹಾರ ಪದಾರ್ಥಗಳನ್ನು ಬಳಸಬೇಕು ಎಂದು ನಿರ್ದೇಶನ ನೀಡಿದರು.
ಪ್ರಸಕ್ತ ಆರ್ಥಿಕ ವರ್ಷ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳುವುದರಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ಲಿಂಕ್ ಡಾಕ್ಯುಮೆಂಟ್ ಮೂಲಕ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಿ, ಶೇ 100ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಧ್ಯಾಹ್ನದ ಬಿಸಿ ಊಟ ಯೋಜನೆ, ಅತಿಥಿ ಶಿಕ್ಷಕರಿಗೆ ಕಾಲ ಮಿತಿಯಲ್ಲಿ ವೇತನ ಪಾವತಿಸುವುದು, ವಿವೇಕ ಯೋಜನೆಯಡಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಮತ್ತಿತರ ಸಂಬಂಧ ಇನ್ನಷ್ಟು ಪ್ರಗತಿ ಸಾಧಿಸುವಂತೆಯೂ ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ಸಿ.ರಂಗಧಾಮಯ್ಯ, ‘ಜಿಲ್ಲೆಯಲ್ಲಿ ವಿವೇಕ ಯೋಜನೆಯಡಿ 60 ಕೊಠಡಿಗಳು ನಿರ್ಮಾಣವಾಗುತ್ತಿವೆ’ ಎಂದು ಮಾಹಿತಿ ನೀಡಿದರು.
ಪ್ರತಿಕ್ರಿಯಿಸಿದ ಆಕಾಶ್, ‘ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವಿಭಾಗಕ್ಕೆ ವಹಿಸಲಾಗಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ನಿರ್ದೇಶಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಆ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು, ಜೊತೆಗೆ ಜಿಲ್ಲಾ ಆಯುಷ್ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆಯೂ ಸಲಹೆ ನೀಡಿದರು.
‘ಸಮಾಜ ಕಲ್ಯಾಣ ಇಲಾಖೆ ವತಿ
ಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕಲ್ಪಿಸುವುದು, ವಿದ್ಯಾರ್ಥಿ ನಿಲಯಗಳ ನಿರ್ವಹಣೆ, ವಸತಿ ಶಾಲೆಗಳ ನಿರ್ವಹಣೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಈ ಇಲಾಖೆಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಅನುದಾನ ನೀಡಲಾಗಿದ್ದು, ಸಮರ್ಪಕವಾಗಿ ವಿನಿಯೋಗಿಸಬೇಕು’ ಎಂದು ಹೇಳಿದರು.
ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ, ರೇಷ್ಮೆ, ಸಾಮಾಜಿಕ ಅರಣ್ಯ, ಸಹಕಾರ, ಹೀಗೆ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿ ವರದಿ ನೀಡಬೇಕು ಎಂದರು.
ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ ₹35.4 ಕೋಟಿ ಒದಗಿಸಲಾಗಿದ್ದು, ಶೇ 50ರಷ್ಟು ಮಾತ್ರವೇ ಪ್ರಗತಿ ಸಾಧಿಸಲಾಗಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್, ಆದಷ್ಟು ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಕೆರೆಗಳ ಅಭಿವೃದ್ಧಿ, ವಿವಿಧ ಇಲಾಖೆಗಳ ಕಚೇರಿಗಳ ನಿರ್ವಹಣೆ ಮತ್ತು ದುರಸ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈಗಾಗಲೇ ಆಗಿರುವ ಕಾಮಗಾರಿ, ಜೊತೆಗೆ ವಿವಿಧ ಯೋಜನೆಗಳ ಸಂಬಂಧ ತ್ವರಿತವಾಗಿ ವರದಿ ನೀಡುವಂತೆಯೂ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಯೋಜನಾ ನಿರ್ದೇಶಕ ರಾಜಗೋಪಾಲ್, ಮುಖ್ಯ ಲೆಕ್ಕಾಧಿಕಾರಿ ಝೀವಲ್‍ಖಾನ್, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ನಾಗೇಂದ್ರಪ್ಪ ಸೇರಿದಂತೆ ಎಲ್ಲ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.