ಕೋಲಾರ: ಕೇಂದ್ರದ ಮಾಜಿ ಸಚಿವರಾದ ಅಂಬರೀಷ್ ಮತ್ತು ಜಾಫರ್ ಷರೀಫ್ ಅವರಿಗೆ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂಬರೀಷ್ ಮತ್ತು ಜಾಫರ್ ಷರೀಫ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.
‘ಅಂಬರೀಷ್ ಮತ್ತು ಜಾಫರ್ ಷರೀಫ್ ಅವರು ದೈಹಿಕವಾಗಿ ನಮ್ಮ ಜತೆ ಇಲ್ಲದಿದ್ದರೂ ಅವರ ಸೇವೆ ಹಾಗೂ ಅಭಿವೃದ್ಧಿ ಕೆಲಸಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸ್ಮರಿಸಿದರು.
‘ಅಂಬರೀಷ್ ವಸತಿ ಸಚಿವರಾಗಿದ್ದಾಗ ಜಿಲ್ಲೆಗೆ 3,5-40 ಮನೆಗಳನ್ನು ಮಂಜೂರು ಮಾಡಿದ್ದರು. ಅವರು ಚಿತ್ರರಂಗದ ಜತೆಗೆ ರಾಜಕೀಯದಲ್ಲೂ ಅಪಾರ ಸೇವೆ ಮಾಡಿದ್ದಾರೆ. ಅಂತಹ ಮಹಾನ್ ನಾಯಕನ ಸಾವಿನ ದುಃಖ ಅಘಾದ. ಕಾವೇರಿ ನದಿ ನೀರು ಹಂಚಿಕೆ ವಿವಾದದ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಂಬರೀಷ್ ನಿಜಕ್ಕೂ ಜನನಾಯಕ’ ಎಂದು ಬಣ್ಣಿಸಿದರು.
‘ಜನ ಸೇವೆಯಲ್ಲೂ ಮುಂಚೂಣಿಯಲ್ಲಿದ್ದ ಅಂಬರೀಷ್ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಅವರು ವಸತಿ ಸಚಿವರಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದರು’ ಎಂದರು.
ನಿಸ್ವಾರ್ಥ ಸೇವೆ: ‘ಜಾಫರ್ ಷರೀಫ್ ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡಿ ಉನ್ನತ ಸ್ಥಾನಕ್ಕೆ ಬೆಳೆದವರು. ಅವರು ಇಂದಿರಾಗಾಂಧಿ ಕಾಲದಿಂದ ರಾಹುಲ್ ಗಾಂಧಿ ಕಾಲದವರೆಗೂ ಪಕ್ಷದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.
‘ರೈಲ್ವೆ ಸಚಿವರಾಗಿದ್ದಾಗ ರಾಜ್ಯದ ಅನೇಕರಿಗೆ ಉದ್ಯೋಗಾವಕಾಶ ಕಲ್ಪಿಸಿದರು. ಜತೆಗೆ ಇಡೀ ದೇಶದಲ್ಲಿ ನ್ಯಾರೋಗೇಜ್ ಮಾರ್ಗವನ್ನು ಬ್ರಾಡ್ ಗೇಜ್ ಮಾರ್ಗವಾಗಿ ಪರಿವರ್ತಿಸಿ ದೊಡ್ಡ ಕ್ರಾಂತಿ ಮಾಡಿದರು. ಬಂಗಾರಪೇಟೆಯಿಂದ ಕೋಲಾರ, ಕೋಲಾರದಿಂದ ಚಿಕ್ಕಬಳ್ಳಾಪುರ ರೈಲು ಮಾರ್ಗವನ್ನು ನ್ಯಾರೋಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಬದಲಾಯಿಸಿದರು’ ಎಂದು ವಿವರಿಸಿದರು.
‘ಈ ಇಬ್ಬರು ನಾಯಕರ ಸಾವು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಜನರಿಗೆ ನೋವುಂಟು ಮಾಡಿದೆ. ಈ ನಾಯಕರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಬೇಕು’ ಸಲಹೆ ನೀಡಿದರು.
ಕಾಂಗ್ರೆಸ್ ಎಸ್‍ಸಿ ವಿಭಾಗದ ಜಿಲ್ಲಾ ಅಧ್ಯಕ್ಷ ಕೆ.ಜಯದೇವ್, ಪಕ್ಷದ ಸದಸ್ಯರಾದ ಕುಮಾರ್, ವೆಂಕಟಪತೆಪ್ಪ, ಮುರಳಿ, ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.