ADVERTISEMENT

ತಾಲ್ಲೂಕು ಕಚೇರಿಯಲ್ಲಿ ಝಣಝಣ ಕಾಂಚಣದ ಸದ್ದು:ನಾವಿಕನಿಲ್ಲದ ಹಡಗು,ಲಯ ತಪ್ಪಿದ ಆಡಳಿತ

ದಲ್ಲಾಳಿಗಳ ಕಾರುಬಾರು

ಜೆ.ಆರ್.ಗಿರೀಶ್
Published 25 ಸೆಪ್ಟೆಂಬರ್ 2018, 19:30 IST
Last Updated 25 ಸೆಪ್ಟೆಂಬರ್ 2018, 19:30 IST
ಕೋಲಾರ ತಾಲ್ಲೂಕು ಕಚೇರಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೋಂದಣಿ ಕೌಂಟರ್‌ನಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತಿರುವುದು.
ಕೋಲಾರ ತಾಲ್ಲೂಕು ಕಚೇರಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೋಂದಣಿ ಕೌಂಟರ್‌ನಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತಿರುವುದು.   

ಕೋಲಾರ: ತಾಲ್ಲೂಕು ಕಚೇರಿಯಲ್ಲಿ ಈಗ ಝಣ ಝಣ ಕಾಂಚಣದ್ದೇ ಸದ್ದು. ಕಚೇರಿಯ ಪ್ರತಿ ವಿಭಾಗದಲ್ಲೂ ದಲ್ಲಾಳಿಗಳದೇ ಕಾರುಬಾರು. ಭ್ರಷ್ಟಾಚಾರ ಮೇರೆ ಮೀರಿದ್ದು, ಲಂಚಬಾಕ ಅಧಿಕಾರಿಗಳು ದಲ್ಲಾಳಿಗಳನ್ನು ದಾಳವಾಗಿಸಿ ಹಣಕ್ಕಾಗಿ ಬಡ ಜನರನ್ನು ಶೋಷಿಸುತ್ತಿದ್ದಾರೆ.

ನಿಕಟ ಪೂರ್ವ ತಹಶೀಲ್ದಾರ್‌ ವಿಜಯಣ್ಣ ಅವರ ವರ್ಗಾವಣೆ ನಂತರ ತಾಲ್ಲೂಕು ಕಚೇರಿಯು ನಾವಿಕನಿಲ್ಲದ ಹಡಗಿನಂತಾಗಿದೆ. ವಿಜಯಣ್ಣ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿಗೆ ವರ್ಗಾವಣೆ ಮಾಡಿದ ಸರ್ಕಾರವು ಇಲ್ಲಿನ ಹುದ್ದೆಗೆ ಹೊಸ ಅಧಿಕಾರಿಯನ್ನು ನಿಯೋಜಿಸಿಲ್ಲ.

ಹೀಗಾಗಿ ಆಡಳಿತ ಲಯ ತಪ್ಪಿದ್ದು, ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆಟಾಟೋಪ ಜೋರಾಗಿದೆ. ಜನಸಾಮಾನ್ಯರು ಜಾತಿ ಪ್ರಮಾಣಪತ್ರ, ಆಧಾರ್‌ ಕಾರ್ಡ್‌, ವಾಸಸ್ಥಳ ದೃಢೀಕರಣ ಪತ್ರ, ಪಹಣಿ, ಜನನ– ಮರಣ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಪತ್ರಗಳಿಗಾಗಿ ತಿಂಗಳುಗಟ್ಟಲೇ ಅಲೆಯುವ ಪರಿಸ್ಥಿತಿ ಇದೆ.

ADVERTISEMENT

ಪ್ರತಿನಿತ್ಯ ತಡವಾಗಿ ಕಚೇರಿಗೆ ಬರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕೈಗೆ ಸಿಗುವುದೇ ಅಪರೂಪ. ಬೆಳಿಗ್ಗೆ 11 ಗಂಟೆಯಾದರೂ ಸಿಬ್ಬಂದಿ ಇಲ್ಲದೆ ಕೊಠಡಿಗಳು ಭಣಗುಡುತ್ತಿರುತ್ತವೆ. ಬಯೋಮೆಟ್ರಿಕ್‌ ಉಪಕರಣದಲ್ಲಿ ಹಾಜರಾತಿ ಹಾಕಿ ಹೊರ ಹೋಗುವ ಅಧಿಕಾರಿಗಳ ಮೊಬೈಲ್‌ಗೆ ಸಾರ್ವಜನಿಕರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಪ್ಪಿತಪ್ಪಿ ಕರೆ ಸ್ವೀಕರಿಸಿದರೂ ಸಭೆ ಅಥವಾ ನ್ಯಾಯಾಲಯದಲ್ಲಿ ಇರುವುದಾಗಿ ಸಬೂಬು ಹೇಳಿ ನುಣುಚಿಕೊಳ್ಳುತ್ತಾರೆ.

ತಬರನ ಕಥೆ: ಜಾತಿ ಪ್ರಮಾಣಪತ್ರ, ಪಿಂಚಣಿ ಸೌಲಭ್ಯದ ನೋಂದಣಿಗೆ ತಲಾ ಒಂದೊಂದೇ ಕೌಂಟರ್‌ ತೆರೆಯಲಾಗಿದ್ದು, ಜನ ಕೌಂಟರ್‌ಗಳಲ್ಲಿ ದಿನಗಟ್ಟಲೇ ಸಾಲುಗಟ್ಟಿ ನಿಲ್ಲುವಂತಾಗಿದೆ. ಕೌಂಟರ್‌ಗಳಲ್ಲಿ ವಿದ್ಯುತ್‌ ಸಮಸ್ಯೆ, ಇಂಟರ್‌ನೆಟ್‌ ಸೇವೆ ಸ್ಥಗಿತ, ಸಿಬ್ಬಂದಿ ಕೊರತೆ ಮಾಮೂಲಾಗಿದ್ದು, ಜನಸಾಮಾನ್ಯರ ಗೋಳು ಹೇಳಿತೀರದು.

ಉಪ ತಹಶೀಲ್ದಾರ್‌, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರು ‘ನಾಳೆ ಬಾ’ ಎಂದು ಸಬೂಬು ಹೇಳುತ್ತಾ ದಿನ ದೂಡುತ್ತಿದ್ದಾರೆ. ದೈನಂದಿನ ಕೆಲಸ ಬಿಟ್ಟು ದಾಖಲೆಪತ್ರಗಳಿಗಾಗಿ ತಹಶೀಲ್ದಾರ್‌ ಕಚೇರಿಯಲ್ಲೇ ಕಾಲ ಕಳೆಯುವ ಜನರ ಪರಿಸ್ಥಿತಿ ‘ತಬರನ ಕಥೆ’ಯಂತಾಗಿದೆ.

ಒಬ್ಬರಿಗೆ ಐದು ಹುದ್ದೆ: ಮಾಲೂರು ಗ್ರೇಡ್‌–2 ತಹಶೀಲ್ದಾರ್‌ ನಾಗವೇಣಿ ಅವರು ಪ್ರಭಾರವಾಗಿ ಕೋಲಾರ ತಹಶೀಲ್ದಾರ್‌ ಹುದ್ದೆಯಲ್ಲಿದ್ದಾರೆ. ಈ ಹಿಂದೆ ತಾಲ್ಲೂಕು ಕಚೇರಿಯಲ್ಲಿ ಸೇವೆಯಲ್ಲಿದ್ದ ಅವರನ್ನು ಸರ್ಕಾರ ಆಗಸ್ಟ್‌ನಲ್ಲಿ ಮಾಲೂರು ತಾಲ್ಲೂಕಿಗೆ ವರ್ಗಾವಣೆ ಮಾಡಿತ್ತು. ಸದ್ಯ ಅವರು ಮಾಲೂರು ತಾಲ್ಲೂಕು ಕಚೇರಿಯಲ್ಲಿನ ಕಾಯಂ ಹುದ್ದೆಯ ಜತೆಗೆ ಕೋಲಾರ ತಹಶೀಲ್ದಾರ್‌ ಮತ್ತು ಗ್ರೇಡ್‌–2 ತಹಶೀಲ್ದಾರ್‌, ಮುಳಬಾಗಿಲು ತಹಶೀಲ್ದಾರ್‌ ಹಾಗೂ ಗ್ರೇಡ್‌–2 ತಹಶೀಲ್ದಾರ್‌ ಹುದ್ದೆ ನಿಭಾಯಿಸುತ್ತಿದ್ದಾರೆ.

ಮೂಲಸೌಕರ್ಯ ಮರೀಚಿಕೆ: ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ಆಸನ ವ್ಯವಸ್ಥೆ, ವಾಹನ ನಿಲುಗಡೆ ಸ್ಥಳ ಹೀಗೆ ಪಟ್ಟಿ ಮಾಡಿದರೆ ಕಚೇರಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಕಚೇರಿಯಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಜನಸಾಮಾನ್ಯರು ಬವಣೆ ಪಡುವಂತಾಗಿದೆ.

ಕಚೇರಿಯ ಶೌಚಾಲಯದಲ್ಲಿ ಮಲಮೂತ್ರ ಕಟ್ಟಿಕೊಂಡಿದ್ದು, ಇಡೀ ಕೊಠಡಿ ಗಬ್ಬೆದ್ದು ನಾರುತ್ತಿದೆ. ಕಚೇರಿಯ ಎರಡನೇ ಮಹಡಿಯ ಆವರಣ ಹಾಗೂ ಕೊಠಡಿಗಳಲ್ಲಿ ಕಸ ರಾಶಿ ಹಾಕಲಾಗಿದೆ. ಸಾರ್ವಜನಿಕರು ತಂಬಾಕು ಉತ್ಪನ್ನಗಳನ್ನು ಜಿಗಿದು ಗೋಡೆಗಳ ಮೇಲೆಲ್ಲಾ ಉಗಿದಿದ್ದು, ಗೋಡೆಗಳು ಕೆಂಪು ಬಣ್ಣಕ್ಕೆ ತಿರುಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.