ADVERTISEMENT

ದೇಶದಲ್ಲಿ ಸಾಂಸ್ಕೃತಿಕ ದಿವಾಳಿತನ

ಸಂವಿಧಾನ ಓದು ಅಭಿಯಾನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಕಳವಳ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 13:08 IST
Last Updated 4 ಡಿಸೆಂಬರ್ 2018, 13:08 IST
ಕೋಲಾರದಲ್ಲಿ ಮಂಗಳವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಮಾತನಾಡಿದರು.
ಕೋಲಾರದಲ್ಲಿ ಮಂಗಳವಾರ ನಡೆದ ಸಂವಿಧಾನ ಓದು ಅಭಿಯಾನದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಮಾತನಾಡಿದರು.   

ಕೋಲಾರ: ‘ದೇಶದ ರಾಜಕೀಯದಲ್ಲಿ ನೈತಿಕ ಮೌಲ್ಯಗಳಿಲ್ಲದ ವಾತಾವರಣ ಸೃಷ್ಟಿಯಾಗಿದೆ. ಭಯೋತ್ಪಾದನೆ, ಅತ್ಯಾಚಾರ ಹೆಚ್ಚುತ್ತಿದ್ದು, ಸಾಂಸ್ಕೃತಿಕ ದಿವಾಳಿತನ ಆವರಿಸಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ಕಾನೂನು ಕಾಲೇಜು, ಸಮುದಾಯ ಸಂಘಟನೆ ಹಾಗೂ ಸಹಯಾನ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಓದು ಅಭಿಯಾನ ಮತ್ತು ಸಂವಾದ ಉದ್ಘಾಟಿಸಿ ಮಾತನಾಡಿ, ‘ಪ್ರತಿ ಧರ್ಮಕ್ಕೂ ಧಾರ್ಮಿಕ ಗ್ರಂಥವಿದೆ. ಅದೇ ರೀತಿ ಎಲ್ಲಾ ಭಾರತೀಯರಿಗೆ ಸಂವಿಧಾನ ಮಹಾಗ್ರಂಥ’ ಎಂದರು.

‘ದೇಶದ ಸಮಸ್ಯೆಗಳಿಗೆ ಸಂವಿಧಾನ ಕಾರಣವಲ್ಲ. ಬದಲಿಗೆ ಸಂವಿಧಾನ ಅನುಷ್ಠಾನಗೊಳಿಸುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಎಡಬಿಡಂಗಿತನ ಕಾರಣ. ಇವೆಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಹೊಸ ತಲೆಮಾರು ಅಗತ್ಯವಿದ್ದು, ಅಂತಹ ತಲೆಮಾರನ್ನು ಕಟ್ಟುವ ಕೆಲಸ ಸಂವಿಧಾನ ಓದು ಅಭಿಯಾನದ ಮೂಲಕ ಆಗಬೇಕು’ ಎಂದು ಆಶಿಸಿದರು.

ADVERTISEMENT

‘ಗಣರಾಜ್ಯದ ಬಳಿಕ ನಿಜವಾದ ಭಾರತ ನಿರ್ಮಾಣವಾಗಿ ಎಲ್ಲಾ ಜನ ನೇರವಾಗಿ ಪಾಲ್ಗೊಳ್ಳುವ ವ್ಯವಸ್ಥೆಗೆ ಅವಕಾಶವಾಗಿದೆ. ಮೂಲಸೌಕರ್ಯಗಳಲ್ಲೂ ಮುಂದೆ ಇದ್ದು, ದೇಶದ ಅನೇಕ ಸಾಧನೆಗಳಿಗೆ ಸಂವಿಧಾನ ಮೂಲ ಕಾರಣವಾಗಿದೆ. ಇನ್ನೂ ಕೆಲ ಸಮಸ್ಯೆಗಳು ಹಾಗೆಯೇ ಇವೆ. ಉತ್ತಮ ಸಮಾಜ ಮತ್ತು ದೇಶದ ಸೃಷ್ಟಿಗೆ ಕಾರಣವಾಗಿರುವ ಸಂವಿಧಾನ ಉಳಿಸಿಕೊಳ್ಳಬೇಕಿದ್ದು, ಅದಕ್ಕಾಗಿ ಸಂಘಟಿತರಾಗಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಕಥೆಯಲ್ಲ: ‘ಭಾರತದ ಸಂವಿಧಾನ ಒಂದು ಕಥೆಯಲ್ಲ. ಬದಲಿಗೆ ಒಂದು ದೊಡ್ಡ ಕಾರ್ಯಕ್ರಮ. ಆದರೆ, ಅನೇಕರು ಸಂವಿಧಾನ ಓದುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮಾರ್ಗವನ್ನು ಸಂವಿಧಾನ ಓದು ಪುಸ್ತಕದಲ್ಲಿ ವಿವರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅಸಹಿಷ್ಣುತೆ ಹೆಚ್ಚುತ್ತಿದೆ: ‘ದೇಶದಲ್ಲಿ ದಿನೇ ದಿನೇ ಅಸಹಿಷ್ಣುತೆ ಹೆಚ್ಚುತ್ತಿದ್ದು, ಬೆಂಕಿ ಇಡುವ ಕೆಲಸ ನಿರಂತರವಾಗಿದೆ. ಬೆಂಕಿಯ ಮಧ್ಯೆ ನೀರು ತೆಗೆಯುವ ಕೆಲಸ ಆಗುವ ನಿಟ್ಟಿನಲ್ಲಿ ಸಂವಿಧಾನ ಓದು ಅಗತ್ಯ’ ಎಂದು ಸಂವಿಧಾನ ಓದು ಅಭಿಯಾನ ಸಮಿತಿ ಸಂಚಾಲಕ ಜೆ.ಜಿ.ನಾಗರಾಜ್ ಸಲಹೆ ನೀಡಿದರು.

‘ಸಂವಿಧಾನ ಓದು ಪುಸ್ತಕವನ್ನು ಒಂದು ಬಾರಿ ಓದಿದರೆ ಪ್ರತಿಯೊಬ್ಬರಲ್ಲೂ ಸವಾಲು ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ’ ಎಂದು ಬಸವಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಎಂ.ವಿ.ನಾಗರಾಜ್ ಹೇಳಿದರು.

ನಿರೀಕ್ಷೆಗೂ ಮೀರಿ ಸ್ಪಂದನೆ: ‘ಈ ಅಭಿಯಾನದಡಿ ರಾಜ್ಯದೆಲ್ಲೆಡೆ ಸಂವಿಧಾನದ 10 ಸಾವಿರ ಪ್ರತಿ ಓದಿಸಿ ಸಂವಿಧಾನ ವಿರೋಧಿಗಳಿಗೆ ಉತ್ತರ ನೀಡಬೇಕೆಂಬುದು ನಮ್ಮ ಗುರಿಯಾಗಿತ್ತು. ಈಗಾಗಲೇ 50 ಸಾವಿರ ಪ್ರತಿ ವಿದ್ಯಾರ್ಥಿಗಳ ಕೈಸೇರಿದ್ದು, ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ’ ಎಂದು ಎಸ್‍ಎಫ್‍ಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ ಸಂತಸ ವ್ಯಕ್ತಪಡಿಸಿದರು.

‘ಸಂವಿಧಾನ ಬದಲಾವಣೆಯ ಹುಚ್ಚು ಮಾತುಗಳಿಗೆ ಯಾರೂ ಬಲಿಯಾಗಬಾರದೆಂಬ ಉದ್ದೇಶದಿಂದ ಈಗಾಗಲೇ ರಾಜ್ಯದ 11 ಜಿಲ್ಲೆಗಳಲ್ಲಿ ಸಂವಿಧಾನ ಓದು ಅಭಿಯಾನ ನಡೆಸಲಾಗಿದೆ. ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕಿನ ಕಾಲೇಜುಗಳಲ್ಲಿ ಅಭಿಯಾನ ಹಮ್ಮಿಕೊಳ್ಳುತ್ತೇವೆ’ ಎಂದು ವಿವರಿಸಿದರು.

‘2019ರ ಜ.26ರಂದು ಬೆಂಗಳೂರಿನಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳನ್ನು ಸೇರಿಸಿ ಸಂವಿಧಾನ ಓದಿನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತಿದೆ. ಅದಕ್ಕೂ ಮುನ್ನ ರಾಜ್ಯ ಮಟ್ಟದ ಸಮಾವೇಶ ನಡೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ಪ್ರತಿಜ್ಞಾವಿಧಿ: ಸಂವಿಧಾನ ಓದು ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ನಿವೃತ್ತ ನ್ಯಾಯಾಧೀಶರು ಸಂವಾದದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಸಂವಿಧಾನ ಓದು ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ (ಪ್ರಭಾರ) ಎನ್.ಕಾವ್ಯಶ್ರೀ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ, ಸಮುದಾಯ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.