ADVERTISEMENT

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ವಾತಂತ್ರ್ಯ: ಅಶ್ವಿನಿ ರಾಜನ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 12:56 IST
Last Updated 16 ಅಕ್ಟೋಬರ್ 2018, 12:56 IST

ಕೋಲಾರ: ‘ಸುಪ್ರೀಂ ಕೋರ್ಟ್‌ ಐಪಿಸಿ ಸೆಕ್ಷನ್‌ 377ನ್ನು ಅಸಿಂಧುಗೊಳಿಸಿ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪು ನೀಡುವ ಮೂಲಕ ಲೈಂಗಿಕ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಪ್ರೀತಿಸುವ ಹಕ್ಕು ನೀಡಿದೆ. ಅದೇ ರೀತಿ ಉದ್ಯೋಗಾವಕಾಶ ಕಲ್ಪಿಸಿ ಅಸಮಾನತೆ ಹೋಗಲಾಡಿಸಬೇಕು’ ಎಂದು ಸಮ್ಮಿಲನ ಸಂಸ್ಥೆ ಪ್ರತಿನಿಧಿ ಅಶ್ವಿನಿ ರಾಜನ್ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಲೆ ಮರೆ ಕಾಯಿಯಂತೆ ಬದುಕುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ಐಪಿಸಿ ಸೆಕ್ಷನ್ 377 ರದ್ದಾಗಿರುವುದರಿಂದ ಹೊರ ಜಗತ್ತಿನಲ್ಲಿ ಧೈರ್ಯವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಸಮುದಾಯಕ್ಕೆ ಈಗ ಸ್ವಾತಂತ್ರ್ಯ ಸಿಕ್ಕಿದ ಅನುಭವವಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಲೈಂಗಿಕ ಅಲ್ಪಸಂಖ್ಯಾತರು ಭಿಕ್ಷೆ ಬೇಡುವ ಹಾಗೂ ಲೈಂಗಿಕ ವೃತ್ತಿ ಮಾಡುವವರೆಂಬ ಅಪವಾದವಿದೆ. ಆದರೆ, ಯಾವುದೇ ವೃತ್ತಿಯಲ್ಲಿ ಅವಕಾಶ ಸಿಗದ ಕಾರಣಕ್ಕೆ ಸಮುದಾಯ ಅನಿವಾರ್ಯವಾಗಿ ಈ ವೃತ್ತಿ ಆಶ್ರಯಿಸಬೇಕಿದೆ. ನಾವು ಲೈಂಗಿಕ ಅಲ್ಪಸಂಖ್ಯಾತರೆಂಬ ಏಕೈಕ ಕಾರಣಕ್ಕೆ ಕೋಲಾರ ನಗರಸಭೆಯಲ್ಲಿ ಹಾಲಿನ ಬೂತ್‌ ತೆರೆಯಲು ಜಾಗ ಕೊಡದೆ ಅನುಮತಿ ನಿರಾಕರಿಸಲಾಯಿತು’ ಎಂದು ದೂರಿದರು.

ADVERTISEMENT

ಬದುಕುವ ಹಕ್ಕು: ‘ರಾಜ್ಯ ಹಾಗೂ ಕೇಂದ್ರ ಸರ್ಕಾರವು ಲೈಂಗಿಕ ಅಲ್ಪಸಂಖ್ಯಾತರಿಗೆ ಎಲ್ಲರಂತೆ ಬದುಕುವ ಹಕ್ಕು ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಿ ಧೈರ್ಯವಾಗಿ ಬದುಕುವ ವಾತಾವರಣ ಸೃಷ್ಟಿಸಬೇಕು. ಹಿಂದಿನ ಸರ್ಕಾರ ಮೈತ್ರಿ ಯೋಜನೆ ಘೋಷಿಸಿತು. ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದರೂ ಪ್ಯಾಂಟ್ ಷರ್ಟ್ ಧರಿಸಿದ ಕಾರಣಕ್ಕಾಗಿ ಲೈಂಗಿಕ ಅಲ್ಪಸಂಖ್ಯಾತರಲ್ಲ ಎಂಬ ಸಬೂಬು ಹೇಳಿ ತಹಶೀಲ್ದಾರ್‌ ಸೌಲಭ್ಯ ನಿರಾಕರಿಸಿದರು’ ಎಂದು ಆರೋಪಿಸಿದರು.

‘ಸುಪ್ರೀಂ ಕೋರ್ಟ್ ಯಾವುದೇ ವ್ಯಕ್ತಿಯ ಪ್ರಮಾಣಪತ್ರ ಆಧಾರದ ಮೇಲೆ ಆತನ ಲಿಂಗ ಒಪ್ಪಿಕೊಳ್ಳಬೇಕೆಂದು ನಿರ್ದೇಶಿಸಿದೆ. ಆದರೆ, ಅಧಿಕಾರಿಗಳು ಈ ನಿಯಮ ಪಾಲಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಕ್ಕೆ ತರ್ಜುಮೆ: ‘ಸುಪ್ರೀಂ ಕೋರ್ಟ್ ಐಪಿಸಿ ಸೆಕ್ಷನ್ 377 ರದ್ದುಗೊಳಿಸಿರುವ ತೀರ್ಪು 463 ಪುಟಗಳಿದ್ದು, ಇದನ್ನು ಕನ್ನಡ ಭಾಷೆಗೆ ತರ್ಜುಮೆ ಮಾಡಲಾಗುತ್ತಿದೆ. ತೀರ್ಪು ಕುರಿತು ಅಧಿಕಾರಿಗಳು ಹಾಗೂ ಪೊಲೀಸರ ಹಂತದಲ್ಲಿ ಅರಿವು ಮೂಡಿಸಲು ಕಾರ್ಯಾಗಾರ ನಡೆಸುತ್ತೇವೆ’ ಎಂದು ಸಂಗಮ ಸಂಸ್ಥೆ ಪ್ರತಿನಿಧಿ ಮಹೇಶ್ ವಿವರಿಸಿದರು.

‘ಕೋಲಾರ ಸುತ್ತಮುತ್ತಲ ಲೈಂಗಿಕ ಅಲ್ಪಸಂಖ್ಯಾತರು ಒಂದೆಡೆ ಬದುಕುತ್ತಾ ಜೀವನೋಪಾಯಕ್ಕೆ ಲೈಂಗಿಕ ವೃತ್ತಿ ಆಶ್ರಯಿಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಈಗಲೂ ದೌರ್ಜನ್ಯಗಳಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್ ಲೈಂಗಿಕ ಅಲ್ಪಸಂಖ್ಯಾತರಿಗೆ ಬದುಕುವ ಆಯ್ಕೆ, ವೃತ್ತಿ ಆದ್ಯತೆ, ಸಮಾನ ಲಿಂಗಿಗಳೊಂದಿಗೆ ಆಕರ್ಷಣೆ ಮತ್ತು ಒಲವನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ’ ಎಂದು ಸಮ್ಮಿಲನ ಸಂಸ್ಥೆ ಪ್ರತಿನಿಧಿ ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.