ADVERTISEMENT

ಕೆಜಿಎಫ್‌: ಲೋಕ ಅದಾಲತ್‌ನಲ್ಲಿ ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:33 IST
Last Updated 14 ಸೆಪ್ಟೆಂಬರ್ 2024, 14:33 IST
ಕೆಜಿಎಫ್‌ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು
ಕೆಜಿಎಫ್‌ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು    

ಕೆಜಿಎಫ್‌: ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶರು ಮತ್ತು ವಕೀಲರ ಸಂಧಾನ ಮೂಲಕ ದಾಂಪತ್ಯ ಜೀವನ ಮುಂದುವರಿಸಲು ಒಪ್ಪಿಗೆ ಸೂಚಿಸಿದರು.

ಮೂರು ವರ್ಷಗಳಿಂದ ಕೌಟುಂಬಿಕ ವೈಮನಸ್ಸು ಕಾರಣದಿಂದ ಬೇರೆಯಾಗಿದ್ದ ನಿರಂಜನ್‌ ಕುಮಾರ್ ಮತ್ತು ಸೌಂದರ್ಯ ಅವರಿಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶ ರಹೀಂ ಆಲಿ ಮೌಲಾನಾ ನದಾಫ್‌, ದಾಂಪತ್ಯ ಜೀವನ ಒಂದಾಗಿ ನಡೆಸಿಕೊಂಡು ಹೋದರೆ ಸಿಗುವ ಲಾಭ ಮತ್ತು ವಿಚ್ಛೇದನ ಪಡೆದರೆ ಸಂಸಾರಕ್ಕೆ ಮತ್ತು ಮಗುವಿಗೆ ಆಗುವ ತೊಂದರೆ ಕುರಿತು ದಂಪತಿಗೆ ಮನವರಿಕೆ ಮಾಡಿಕೊಟ್ಟರು.

ಅಲ್ಲಿ ನೆರೆದಿದ್ದ ವಕೀಲರು ಕೂಡ ಸಾಥ್ ನೀಡಿದರು. ಎಲ್ಲರ ಆಶಯದಂತೆ ಇಬ್ಬರೂ ಮತ್ತೆ ಒಂದಾಗಿ ಜೀವನ ನಡೆಸಲು ಒಪ್ಪಿಗೆ ನೀಡಿದರು. ಕೂಡಲೇ ಹೂವಿನ ಹಾರ ತರಿಸಿದ ನ್ಯಾಯಾಧೀಶರು, ಎಲ್ಲರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳುವಂತೆ ಸೂಚಿಸಿದರು. ಸಿಹಿ ಕೂಡ ವಿತರಣೆ ಮಾಡಲಾಯಿತು.

ADVERTISEMENT

2022ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಆನಂದನ್‌ ಮತ್ತು ಅನಿತಾ ಕೂಡ ಇದೇ ಅದಾಲತ್‌ನಲ್ಲಿ ಒಂದಾದರು. ನ್ಯಾಯಾಧೀಶ ವಿನೋದ್ ಕುಮಾರ್ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆನಂದನ್‌ ತಮ್ಮ ಪತ್ನಿ ಅನಿತಾ ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ದಾಂಪತ್ಯ ಮುಂದುವರಿಸಿಕೊಂಡು ಹೋಗುವುದಾಗಿ ವಾಗ್ದಾನ ಮಾಡಿದರು.

ಅದಾಲತ್‌ನಲ್ಲಿ ಒಟ್ಟು 3071 ಪ್ರಕರಣಗಳ ಪೈಕಿ 2919 ಪ್ರಕರಣ ಇತ್ಯರ್ಥಗೊಂಡವು. ಒಟ್ಟು ₹2,03,18,921 ಇತ್ಯರ್ಥವಾಯಿತು. ನ್ಯಾಯಾಧೀಶರಾದ ಗಣಪತಿ ಗುರುಸಿದ್ಧ ಬಾದಾಮಿ, ಶೆಮಿದಾ ಮತ್ತು ಎಂ.ಮಂಜು ಅದಾಲತ್‌ನಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.