ADVERTISEMENT

ಮಾಲೂರು: ಪಕ್ಷಿಗಳಿಗೂ ಬೆಳೆ ಮೀಸಲಿಡುವ ರೈತ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 7:16 IST
Last Updated 31 ಅಕ್ಟೋಬರ್ 2024, 7:16 IST
ಮಾಲೂರು ತಾಲ್ಲೂಕಿನ ನೀಲಕಂಠ ಅಗ್ರಹಾರ ಗ್ರಾಮದ ರೈತ ಶಾಮಣ್ಣ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಕೆಎಂಆರ್–316 ರಾಗಿ ತಳಿ
ಮಾಲೂರು ತಾಲ್ಲೂಕಿನ ನೀಲಕಂಠ ಅಗ್ರಹಾರ ಗ್ರಾಮದ ರೈತ ಶಾಮಣ್ಣ ಅರ್ಧ ಎಕರೆ ಜಮೀನಿನಲ್ಲಿ ಬೆಳೆದ ಕೆಎಂಆರ್–316 ರಾಗಿ ತಳಿ   

ಮಾಲೂರು: ಸಾಮಾನ್ಯವಾಗಿ ರೈತರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ, ಮಾರಾಟ ಮಾಡಿ ಜೀವನ ನಡೆಸುವುದು ಸರ್ವೇ ಸಾಮಾನ್ಯ.

ಆದ್ರೆ, ತಾಲ್ಲೂಕಿನ ನೀಲಕಂಠ ಅಗ್ರಹಾರ ಗ್ರಾಮದ ಪ್ರಗತಿಪರ ರೈತ ಶ್ಯಾಮಣ್ಣ ತಮ್ಮ ಕೃಷಿ ಭೂಮಿಯಲ್ಲಿನ ಒಟ್ಟಾರೆ ಬೆಳೆಯ ಪೈಕಿ ತಮಗೆ ಬೇಕಿರುವಷ್ಟು ಬೆಳೆಯನ್ನು ಕಟಾವು ಮಾಡಿಕೊಳ್ಳುತ್ತಾರೆ. ಉಳಿದ ಬೆಳೆಯನ್ನು ಪಕ್ಷಿಗಳಿಗೆ ಬಿಟ್ಟುಬಿಡುತ್ತಾರೆ. ಈ ಮೂಲಕ ಶ್ಯಾಮಣ್ಣ ಇತರ ರೈತರಿಗೆ ಮಾದರಿಯಾಗಿದ್ದಾರೆ.  

ಜೊತೆಗೆ ಹೊಸ–ಹೊಸ ತಳಿಯ ಬೀಜಗಳನ್ನು ಬಿತ್ತುವ ಮೂಲಕ ಗ್ರಾಮದಲ್ಲಿ ಇತರ ರೈತರಿಗೆ ಮಾದರಿಯಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಆಗಸ್ಟ್‌ನಲ್ಲಿ ಜಿಕೆವಿಕೆಯಿಂದ ಬರಗು ಬಿತ್ತನೆ ಬೀಜ ತಂದು ತಮ್ಮ 10 ಗುಂಟೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದು, ಎರಡೂವರೆ ತಿಂಗಳಿನಲ್ಲೇ ಪೈರು ನಳನಳಿಸುತ್ತಿದ್ದು, ಪ್ರಾಯೋಗಿಕವಾಗಿ ಬೆಳೆದ ಈ ಬೆಳೆಯಿಂದ 3 ಕ್ವಿಂಟಲ್ ಫಸಲು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಶ್ಯಾಮಣ್ಣ. 

ADVERTISEMENT

ಜೊತೆಗೆ ಅರ್ಧ ಎಕರೆ ಜಮೀನಿನಲ್ಲಿ ಕೆಎಂಆರ್–316 ತಳಿಯ ರಾಗಿಯನ್ನು ಸಾಲು ಪದ್ಧತಿಯಲ್ಲಿ ಬಿತ್ತನೆ ಮಾಡಿದ್ದಾರೆ. ಒಂದು ಸಾಲಿನಿಂದ ಮತ್ತೊಂದು ಸಾಲು ಒಂದೂವರೆ ಅಡಿ ಅಂತರವಿರುವಂತೆ ಮಾಡಿದ್ದಾರೆ. ಇದರಿಂದ ಮಳೆ ನೀರು ಹಿಂಗುವುದಕ್ಕೆ ಅನುಕೂಲವಾಗಿದೆ. ರಾಗಿ ಬೆಳೆಯ ತೆನೆ ಸುಮಾರು ಐದು ಅಂಗುಲ ಉದ್ದವಿದ್ದು, ಹೆಚ್ಚು ಇಳುವರಿ ಸಿಗಲಿದೆ. ಸಾಮಾನ್ಯ ತಳಿಯ ರಾಗಿ ಅರ್ಧ ಎಕರೆಯ ವಿಸ್ತೀರ್ಣದಲ್ಲಿ 8–10 ಕ್ವಿಂಟಲ್ ಇಳುವರಿ ನೀಡಿದರೆ, ಕೆಎಂಆರ್–316 ತಳಿಯು 12–13 ಕ್ವಿಂಟಲ್ ಇಳುವರಿ ದೊರೆಯಲಿದೆ ಎನ್ನಲಾಗಿದೆ. 

ಶ್ಯಾಮಣ್ಣ ಮನೆಯ ಸುತ್ತ ತೋಟ ಮಾಡಿದ್ದು, ಅದರಲ್ಲಿ ನಿಂಬೆಕಾಯಿ, ಸೇಬು, ವಾಟರ್ ಆ್ಯಪಲ್, ದಾಳಿಂಬೆ, ಸಪೋಟ, ಬೆಟ್ಟದ ನಲ್ಲಿಕಾಯಿ, ಮಾವು, ಚೇಪೆ, ಕಾಕಡ ಹೂವು, ಸೇವಂತಿಗೆ, ಕನಕಾಂಬರ, ತೆಂಗಿನಮರ, ಪನ್ನೀರ್ ಸೊಪ್ಪು ಸೇರಿದಂತೆ ಇತರ ಸಸ್ಯಶ್ಯಾಮಲೆ ಸೃಷ್ಟಿಸಿದ್ದಾರೆ. 

ಶ್ಯಾಮಣ್ಣ ಮತ್ತು ಕುಟುಂಬದವರು ತಾವು ಬೆಳೆದ ಹಣ್ಣು, ಕಾಳು, ತರಕಾರಿಗಳನ್ನು ತಮಗೆ ಬೇಕಾದಷ್ಟು ಬಳಸುತ್ತಾರೆ. ಉಳಿದದ್ದನ್ನು ನೂರಾರು ಜಾತಿಯ ಪಕ್ಷಿಗಳು ತಿನ್ನಲಿ ಎಂಬ ಕಾರಣಕ್ಕೆ ಹಾಗೆಯೇ ಬಿಡುತ್ತಾರೆ. ಪ್ರಾಣಿ ಪಕ್ಷಿಗಳನ್ನು ಹಾರೈಕೆ ಮಾಡುವುದರಿಂದ ಪರಿಸರ ಚೆನ್ನಾಗಿರಲಿದೆ ಎನ್ನುತ್ತಾರೆ ಶ್ಯಾಮಣ್ಣ.

ಜೊತೆಗೆ ಬರಗು ಬೆಳೆ ಬೆಳೆಯಲು ಉತ್ಸುಕವಿರುವ ರೈತರಿಗೆ ಬಿತ್ತನೆಗಾಗಿ ಉಚಿತವಾಗಿ 2 ಕೆ.ಜಿಯಷ್ಟು ಬರಗು ನೀಡುತ್ತೇನೆ ಎಂದೂ ಅವರು ಹೇಳುತ್ತಾರೆ. 

ಇತರ ರೈತರಿಗೆ ಮಾದರಿ

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಎಸ್.ವಿ. ಮಂಜುನಾಥ್ ಶ್ಯಾಮಣ್ಣ ಅವರ ಜಮೀನಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದ್ದರು.  ಈ ಕುರಿತು ಪ್ರತಿಕ್ರಿಯಿಸಿದ ಅವರು ‘ಪ್ರಗತಿಪರ ರೈತನಾದ ಶ್ಯಾಮಣ್ಣ ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ತಳಿಗಳ ಬೆಳೆಗಳನ್ನು ಬೆಳೆದಿದ್ದಾರೆ. ಈ ಮೂಲಕ ಉತ್ತಮ ಇಳುವರಿ ಪಡೆಯುವ ಮೂಲಕ ಇತರೆ ರೈತರಿಗೂ ಮಾದರಿಯಾಗಿದ್ದಾರೆ. ಇವರ ಬೇಸಾಯದ ಬೆಳೆಗಳನ್ನು ನೋಡಲು ರಾಜ್ಯಮಟ್ಟದ ಜಿಕೆವಿಕೆ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.