ADVERTISEMENT

ಮುಳಬಾಗಿಲು | ಗುಡಿಸಲಿಗೆ ಬೆಂಕಿ, ತಪ್ಪಿದ ಅನಾಹುತ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 7:49 IST
Last Updated 11 ಜುಲೈ 2024, 7:49 IST
   

ಮುಳಬಾಗಿಲು (ಕೋಲಾರ): ತಾಲ್ಲೂಕಿನ ಕಸುವುಗಾನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ.

ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುವುಗಾನಹಳ್ಳಿ ಗ್ರಾಮದ ಶಿವಮ್ಮ ಎಂಬುವರಿಗೆ ಸೇರಿದ ಗುಡಿಸಲು ಇದಾಗಿದೆ. ಬೆಂಕಿ ಇಟ್ಟ‌ ಆರೋಪದ ಮೇಲೆ ಗ್ರಾಮದ ಬಾಲರಾಜು ಎಂಬುವರನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುಡಿಸಲಿನಲ್ಲಿ ಮಂಜುನಾಥ್, ತಾಯಿ ಶಿವಮ್ಮ ಹಾಗೂ ಅಜ್ಜಿ ರಾಜಮ್ಮ ಮಲಗಿದ್ದಾಗ ಘಟನೆ ನಡೆದಿದ್ದು, ತಕ್ಷಣ ಹೊರಗೆ ಬಂದಿದ್ದರಿಂದ ಅನಾಹುತ ತಪ್ಪಿದೆ.

ADVERTISEMENT

ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.

ಶಿವಮ್ಮ ಪುತ್ರ ಮಂಜುನಾಥ್ ಹಾಗೂ ಗ್ರಾಮದ ಬಾಲರಾಜ್ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿತ್ತು. ಬಾಲರಾಜು ಎಂಬುವರಿಗೆ ಮಂಜುನಾಥ್ ₹1 ಲಕ್ಷ ಕೊಟ್ಟಿದ್ದು ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತಿತ್ತು.

ಹೀಗಾಗಿ, ಬಾಲರಾಜು ಎಂಬುವರೇ ಗುಡಿಸಲಿಗೆ ಬೆಂಕಿ ಹಾಕಿರಬಹುದು ಎಂದು ಮಂಜುನಾಥ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಬೆಂಕಿಯಿಂದ ಸಂಪೂರ್ಣವಾಗಿ ಗುಡಿಸಲು ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದ ಬಟ್ಟೆಗಳು, ಆಹಾರ ಸಾಮಗ್ರಿಗಳು ಸುಟ್ಟು ನಾಶವಾಗಿವೆ.

ಬೆರಳಚ್ಚು ತಜ್ಞರು, ವೃತ್ತ ನಿರೀಕ್ಷಕ ಸತೀಶ್, ಪಿ.ಎಸ್.ಐ ಅರ್ಜುನ್ ಎಸ್.ಆರ್.ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.