ADVERTISEMENT

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿರುದ್ಧ ಎಬಿವಿಪಿ ಪ್ರತಿಭಟನೆ

ಭ್ರಷ್ಟಾಚಾರದ ತನಿಖೆ ನಡೆಸಿ, ಆಡಳಿತ ವಿಭಾಗದ ಅಧಿಕಾರಿಗಳ ಬದಲಾಯಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 16:25 IST
Last Updated 25 ಸೆಪ್ಟೆಂಬರ್ 2024, 16:25 IST
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ.ಕೆ.ತಿಪ್ಪೇಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು
ಕೋಲಾರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕುಲಸಚಿವ ಪ್ರೊ.ಕೆ.ತಿಪ್ಪೇಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು   

ಕೋಲಾರ: ‘ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭ್ರಷ್ಟಾಚಾರ ಸಂಬಂಧ ತನಿಖೆ ನಡೆಸಿ, ಆಡಳಿತ ವಿಭಾಗದ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕು’ ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬುಧವಾರ ವಿಶ್ವವಿದ್ಯಾಲಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್ ಮಾತನಾಡಿ, ‘ವಿದ್ಯಾರ್ಥಿಗಳಿಂದ ಹಣ ಪಡೆದು, ಅನುತ್ತೀರ್ಣರಾದವರನ್ನು ಉತ್ತೀರ್ಣ ಮಾಡಿರುವ ಪ್ರಕರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ನಿರ್ವಹಣೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳಲ್ಲಿ ಬದ್ಧತೆಯ ಕೊರತೆಯಿದೆ. ಇದರಿಂದಾಗಿ ಆಡಳಿತಾತ್ಮಕ ಗೊಂದಲಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯು ಕುಂಠಿತಗೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು, ಗುಣಾತ್ಮಕ ಸಂಶೋಧನೆ ನಡೆಸಬೇಕು, ಆಮೂಲಕ ನಾಡಿನ ಏಳಿಗೆಗೆ ಕೊಡುಗೆ ನೀಡಬೇಕೆಂಬ ಕಿಂಚಿತ್ತು ಕಾಳಜಿಯೂ ಇಲ್ಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ವಿಶ್ವವಿದ್ಯಾಲಯವು ಉತ್ತರದಾಯಿತ್ವವಿಲ್ಲದ ಆಡಳಿತದ ಕಾರಣ ಹಾಗೂ ಕುಲಪತಿ, ಕುಲಸಚಿವರ ನಿರ್ಲಕ್ಷ್ಯದ ಪರಿಣಾಮ ವಿಶ್ವವಿದ್ಯಾಲಯದ ಶೈಕ್ಷಣಿಕ ಆಶಯಗಳಿಗೆ ಧಕ್ಕೆ ಉಂಟಾಗಿ ವಿದ್ಯಾರ್ಥಿಗಳ ಸ್ಥಿತಿ ಆತಂತ್ರವಾಗಿದೆ’ ಎಂದು ಆರೋಪಿಸಿದರು.

ಯುಯುಸಿಎಂಎಸ್‌ ತಂತ್ರಾಂಶದ ಲಾಗಿನ್‌ ದುರುಪಯೋಗ ಪಡಿಸಿಕೊಂಡಿರುವ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಕ್ರಮದಲ್ಲಿ ಭಾಗಿಯಾದವರ ತನಿಖೆ ನಡೆಸಬೇಕು.
ವಿದ್ಯಾರ್ಥಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ

‘ವಿಶ್ವವಿದ್ಯಾಲಯದ ಸಮರ್ಪಕ ಆಡಳಿತಕ್ಕೆ ಸರಿಯಾದ ಸಮಯಕ್ಕೆ ಸಿಂಡಿಕೇಟ್ ಸದಸ್ಯರನ್ನು ನೇಮಿಸಬೇಕು. ಹೊಸ ಕಾಲೇಜುಗಳಿಗೆ, ಪದವಿಗಳಿಗೆ ಅವಕಾಶ ನೀಡುವ ಸಂದರ್ಭದಲ್ಲಿ ಮೂಲ ಸೌಕರ್ಯ ಒಳಗೊಂಡಂತೆ ಎಲ್ಲಾ ನಿಯಮಗಳನ್ನು ಯಾವುದೇ ಸಡಿಲಿಕೆ ಇಲ್ಲದೆ ಅನುಮತಿ ನೀಡಬೇಕು, ಮುಂದೆ ನಡೆಯುವ ಪರೀಕ್ಷೆಗಳಿಗೆ ಕಡ್ಡಾಯವಾಗಿ ಸಿ.ಸಿ.ಟಿ.ವಿ ಕ್ಯಾಮೆರಾ, ವೆಬ್‍ಕ್ಯಾಸ್ಟಿಂಗ್ ಅಳವಡಿಸಬೇಕು’ ಎಂದು ಒತ್ತಾಯಿಸಿದರು.

‘ವಿಶ್ವವಿದ್ಯಾಲಯಕ್ಕೆ ಪಿಎಚ್‍ಡಿ ಪ್ರವೇಶ ಪರೀಕ್ಷೆಯಲ್ಲಿ ಆಗಿರುವ ಗೊಂದಲಗಳನ್ನು ಸರಿಪಡಿಸಬೇಕು. ಯುಜಿಸಿ ನಿಯಮ ಪಾಲನೆ ಮಾಡದಿರುವುದಕ್ಕೆ ವಿಶ್ವವಿದ್ಯಾಲಯ ಸಮಂಜಸ ಉತ್ತರ ನೀಡಬೇಕು. ಪ್ರವೇಶ ಪ್ರಕ್ರಿಯೆಯಲ್ಲಿ ಸ್ವಜನ ಪಕ್ಷಪಾತ ನಡೆಸಿರುವ ಉಪನ್ಯಾಸಕರು ಹಾಗೂ ಅಧಿಕಾರಿಗಳ ಅಮಾನತ್ತು ಮಾಡಬೇಡು’ ಎಂದು ಪಟ್ಟು ಹಿಡಿದರು.

‘ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ವಿಭಾಗದ ಗೋಪ್ಯತೆ ಕಾಪಾಡದೇ ಸರಿಯಾದ ಸಮಯಕ್ಕೆ ಪರೀಕ್ಷಾ ಮೌಲ್ಯಮಾಪನ ಮತ್ತು ಫಲಿತಾಂಶವನ್ನು ನೀಡದೆ ಇರುವುದು ದೊಡ್ಡ ಲೋಪ’ ಎಂದರು.

ಪ್ರತಿಭಟನೆಯಲ್ಲಿ ವಿಭಾಗಿಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಕಾಂಬ್ಳೆ, ವಿಭಾಗ ಸಂಚಾಲಕ ಮನೋಜ್ ಎಂ., ಕಾರ್ಯಕಾರಿ ಸಮಿತಿಯ ದರ್ಶನ್, ಅರ್ಚನಾ, ಪವಿತ್ರಾ, ಅನನ್ಯಾ, ಆಕಾಶ್‌, ಮಂಜು, ಸಾಗರ್, ಶ್ರೇಯಸ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.