ADVERTISEMENT

ವಾರದಲ್ಲಿ ಮೂರು ದಿನ ಜನರ ಅಹವಾಲು ಸ್ವೀಕಾರ: ಜನಸ್ಪಂದನ ಸಭೆಯಲ್ಲಿ ಶಾಸಕ ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:35 IST
Last Updated 5 ಜುಲೈ 2024, 14:35 IST
ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿಯಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
ಮುಳಬಾಗಿಲು ತಾಲ್ಲೂಕಿನ ಹೆಬ್ಬಣಿಯಲ್ಲಿ ಶುಕ್ರವಾರ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು   

ಮುಳಬಾಗಿಲು: ತಾಲ್ಲೂಕಿನ ಹೆಬ್ಬಣಿಯಲ್ಲಿ ಶುಕ್ರವಾರ ಶಾಸಕ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ಜನಸ್ಪಂದನ ಸಭೆ ನಡೆಯಿತು.

ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಸಾರ್ವಜನಿಕರ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಒದಗಿಸಿದರು. ನ್ಯಾಯಾಲಯಗಳಲ್ಲಿ ವ್ಯಾಜ್ಯಗಳಾಗಿರುವ ಹಾಗೂ ಸ್ಥಳದಲ್ಲಿಯೇ ಪರಿಹರಿಸಲಾಗದ ಕೆಲವು ಸಮಸ್ಯೆಗಳಿಗೆ ಎರಡು ತಿಂಗಳಲ್ಲಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.

ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಎಲ್ಲಾ ಸಮಸ್ಯೆಗಳ ಕುರಿತು ತಮ್ಮ ಮಟ್ಟದಲ್ಲಿಯೇ ಪರಿಹರಿಸಿದರೆ ಸಾರ್ವಜನಿಕರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬಹುದು ಎಂದು ಹೇಳಿದರು.

ADVERTISEMENT

ಮುಳಬಾಗಿಲು ನಗರದ ಕಚೇರಿಯಲ್ಲಿ ಸೋಮವಾರ, ಮಂಗಳವಾರ ಹಾಗೂ ಬುಧವಾರ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕಾಗಿಯೇ ಅಹವಾಲು ಸ್ವೀಕಾರ ಸಭೆಗಳನ್ನು ನಡೆಸುತ್ತೇನೆ. ಆದ್ದರಿಂದ ಯಾರೇ ಏನೇ ಸಮಸ್ಯೆಗಳಿದ್ದಲ್ಲಿ ನನಗೆ ಮನವಿ ಸಲ್ಲಿಸಬಹುದು ಎಂದು ಹೇಳಿದರು.

ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಮಾತನಾಡಿ, ತಾಲ್ಲೂಕು ಪಂಚಾಯತಿ ವ್ಯಾಪ್ತಿಯ 375 ಕಾಮಗಾರಿಗಳಲ್ಲಿ 90 ಕಾಮಗಾರಿಗಳು ಮಾತ್ರ ಬಾಕಿ ಉಳಿದಿದ್ದು ಎಲ್ಲವನ್ನೂ ಪರಿಹರಿಸಲಾಗಿದೆ. ಹಾಗೂ ಒಟ್ಟು 700 ಮಂದಿ ನಿವೇಶನ ರಹಿತರಾಗಿದ್ದರು.ಇದರಲ್ಲಿ 276 ಮಂದಿಗೆ ನಿವೇಶನಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದ 30, ಸರ್ವೆ 6, ಬೆಸ್ಕಾಂ 4, ಸಮಾಜ ಕಲ್ಯಾಣ ಇಲಾಖೆ 4, ಕ್ಷೇತ್ರ ಶಿಕ್ಷಣಾಧಿಕಾರಿ ಕುರಿತು 3, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 5, ನೀರು ಸರಬರಾಜು 2, ತಾಲ್ಲೂಕು ಪಂಚಾಯತಿ ಕುರಿತು 39 ಹಾಗೂ ಇನ್ನಿತರೆ 4 ಅರ್ಜಿ ಸೇರಿದಂತೆ ಒಟ್ಟು 97 ಅರ್ಜಿಗಳು ಸಲ್ಲಿಕೆಯಾದವು. ಕೆಲವರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಸರ್ವೆ ಅಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಕುರಿತು ಶಾಸಕರಿಗೆ ದೂರುಗಳನ್ನು ಸಲ್ಲಿಸಿದರು.

ತಹಶೀಲ್ದಾರ್ ಬಿ.ಸಿ.ವೆಂಕಟಾಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗರಾಮಯ್ಯ, ಇ.ಒ ಸರ್ವೇಶ್, ಉಪ ತಹಶೀಲ್ದಾರ್ ಕೆ.ಟಿ.ವೆಂಕಟೇಶಯ್ಯ, ಕಾಡೇನಹಳ್ಳಿ ನಾಗರಾಜ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಸತ್ಯಣ್ಣ, ಚಂದ್ರಹಾಸ್, ಸಿಮೆಂಟ್ ಗೋಪಾಲ್, ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್, ಉಪಾಧ್ಯಕ್ಷೆ ಸುಚಿತ್ರಾ ಗಂಗಾಧರ್, ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಶಂಕರ್, ಸಹಾಯಕ ಕೃಷಿ ನಿರ್ದೇಶಕ ರವಿಕುಮಾರ್, ಪಶು ಇಲಾಖೆ ಸಹಾಯಕ ನಿರ್ದೇಶಕಿ ಅನುರಾಧಾ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.