ADVERTISEMENT

ಮಾಲೂರು: ದಲಿತ ಬಾಲಕಿ ಕೊಲೆ ಪ್ರಕರಣದ ಆರೋಪಿ 2ನೇ ಬಾರಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 15:43 IST
Last Updated 11 ಫೆಬ್ರುವರಿ 2024, 15:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲಾರ‌‌‌‌‌‌‌/ಮಾಲೂರು: ಪ್ರೀತಿ ವಿಚಾರವಾಗಿ ಬಾಲಕಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿ ನಗರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಆಸ್ಪತ್ರೆಯ ಮಹಡಿಯಿಂದ ಜಿಗಿದು ಮತ್ತೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ನಡೆದಿದೆ.

ಜಿಲ್ಲೆಯ ಮಾಲೂರು ತಾಲ್ಲೂಕಿನ ಬರಗೂರು ಗ್ರಾಮದ ನಿತಿನ್ (22) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಇದೀಗ ತೀವ್ರವಾಗಿ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಬೆಳಿಗ್ಗೆ ಆಸ್ಪತ್ರೆ ಕಾರಿಡಾರ್‌ನಲ್ಲಿ ಓಡಾಡುತ್ತಿದ್ದು, ಈ ವೇಳೆ 2ನೇ ಮಹಡಿಯಿಂದ ಜಿಗಿದಿರುವುದು ಗೊತ್ತಾಗಿದೆ. ಗಲ್‍ಪೇಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ದೊಮ್ಮಲೂರು ಗ್ರಾಮದ ನಂದಿತಾ (15) ಎಂಬ ದಲಿತ ಬಾಲಕಿಯನ್ನು ಫೆ.7ರಂದು ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಬಾಣರಹಳ್ಳಿ ಬಳಿ ಚಾಕುವಿನಿಂದ ಚುಚ್ಚಿ ಕೊಂದ ಆರೋಪವಿದ್ದು, ತಾನೂ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ನಿತಿನ್ ಅವರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಕೊಲೆ ಸಂಬಂಧ ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ ಪೊಲೀಸ್‌ ಠಾಣೆಯಲ್ಲಿ ನಿತಿನ್‌ ಹಾಗೂ ಇತರರ ಮೇಲೆ ಫೆ.8ರಂದು ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

20 ದಿನಗಳ ಹಿಂದೆ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಿತಿನ್‌ ತೊಂದರೆ ನೀಡಿದ ವಿಚಾರವನ್ನು ಮೃತ ಒಂಬತ್ತನೇ ತರಗತಿ ವಿದ್ಯಾರ್ಥಿನಿ, ತನ್ನ ಪೋಷಕರ ಗಮನಕ್ಕೆ ತಂದಿದ್ದಳು. ಈ ಕುರಿತು ಮಾಲೂರು ಠಾಣಾ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಎರಡು ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಪಂಚಾಯಿತಿಯೂ ನಡೆದಿತ್ತು. ಆದಾದ ಮೂರು ದಿನಗಳ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು.

ಹೊಸಕೋಟೆ ತಾಲ್ಲೂಕಿನ ಬಾಣರಹಳ್ಳಿ ಬಳಿ ತೋಪಿನಲ್ಲಿ ಕುರಿಗಾಹಿಗಳು ಕುರಿ ಕಾಯಲು ಹೋಗಿದ್ದಾಗ ಬಾಲಕಿಯ ಶವ ಕಂಡು ಮಾಹಿತಿ ನೀಡಿದ್ದರು. ನಿತಿನ್‌ ಹಾಗೂ ಇತರರ ವಿರುದ್ಧ ಬಾಲಕಿ ತಂದೆ ಮಂಜುನಾಥ್‌ ದೂರು ದಾಖಲಿಸಿದ್ದರು.

ಸ್ಥಳಕ್ಕೆ ಬಂದಿದ್ದ ಅನುಗೊಂಡನಹಳ್ಳಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಗೆ ರವಾನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.