ADVERTISEMENT

ಕೋಲಾರ: ಗರ್ಭಗುಡಿಗೆ ಅನ್ಯಕೋಮಿನ ಯುವಕ ಪ್ರವೇಶ

ಬಂಧನಕ್ಕೆ ಒತ್ತಾಯಿಸಿ ಹಿಂದೂಪರ ಸಂಘಟನೆ, ಸ್ಥಳೀಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 11:05 IST
Last Updated 2 ಫೆಬ್ರುವರಿ 2020, 11:05 IST
ಕೋಲಾರ ಕುಟುಪೇಟೆಯಲ್ಲಿನ ಪಂಚಮುಖ ಆಂಜನೇಯ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಮಲಕೊಂಡು ರಂಪಾಟ ಮಾಡುತ್ತಿರುವ ಅನ್ಯ ಕೋಮಿನ ಯುವಕ.
ಕೋಲಾರ ಕುಟುಪೇಟೆಯಲ್ಲಿನ ಪಂಚಮುಖ ಆಂಜನೇಯ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಮಲಕೊಂಡು ರಂಪಾಟ ಮಾಡುತ್ತಿರುವ ಅನ್ಯ ಕೋಮಿನ ಯುವಕ.   

ಕೋಲಾರ: ನಗರದ ಕುರುಬರಪೇಟೆಯಲ್ಲಿನ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ರಂಪಾಟ ಮಾಡಿದ ಅನ್ಯಕೋಮಿನ ಮಾನಸಿಕ ಅಸ್ವಸ್ಥ ಯುವಕನನ್ನು ಭಕ್ತರು ಹಾಗೂ ಸಾರ್ವಜನಿಕರು ಶನಿವಾರ ರಾತ್ರಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಗರದ ಸಾರಿಗೆ ನಗರ ನಿವಾಸಿಯಾದ ಸಿಖಂದರ್ ಬೇಗ್ (26) ಶನಿವಾರ ರಾತ್ರಿ ೧೦ ಗಂಟೆ ಸುಮಾರಿಗೆ ಬೈಕ್‌ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಂದು ಏಕಾಏಕಿ ಗರ್ಬಗುಡಿಗೆ ನುಗ್ಗಿದ್ದಾನೆ. ಇದನ್ನು ಗಮನಿಸಿದ ಅರ್ಚಕ ಸುತ್ತಮುತ್ತಲಿನವರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆತನನ್ನು ದೇವಸ್ಥಾನದಿಂದ ಹೊರ ಕಳುಹಿಸಲು ಯತ್ನಿಸಿದ್ದಾರೆ.

ಆದರೆ, ಭಕ್ತರು ಹಾಗೂ ಅರ್ಚಕರೊಂದಿಗೆ ವಾಗ್ವಾದ ನಡೆಸಿದ ಸಿಖಂದರ್ ಗರ್ಭಗುಡಿಯಲ್ಲಿ ಅಂಗಾತ ಮಲಗಿ ಬಟ್ಟೆ ಹರಿದುಕೊಂಡು ತನ್ನನ್ನು ಬಲಿ ತೆಗೆದುಕೋ ದೇವರೇ ಎಂದು ಚೀರಾಡಿದ್ದಾನೆ.

ADVERTISEMENT

ಇದರಿಂದ ಕೆರಳಿದ ಭಕ್ತರು ಸಿಖಂದರ್‌ನನ್ನು ದೇವಸ್ಥಾನದಿಂದ ಹೊರಗೆ ಎಳೆದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳ ಸದಸ್ಯರು ಸಿಖಂದರ್‌ನ ಬೈಕ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳ ಸದಸ್ಯರು ಘಟನೆ ಖಂಡಿಸಿ ದೇವಸ್ಥಾನದ ಬಳಿ ತಡರಾತ್ರಿವರೆಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಸಿಖಂದರ್‌ನನ್ನು ಬಂಧಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಸಿಖಂದರ್ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ದೇವಸ್ಥಾನಕ್ಕೆ ಅತಿಕ್ರಮ ಪ್ರವೇಶ, ಅಪರಾಧ ಸಂಚು ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಹಾಗೂ ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ, ತಹಶೀಲ್ದಾರ್ ಭೇಟಿ: ಕೆಜಿಎಫ್‌ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮೊಹಮದ್ ಸುಜಿತಾ, ತಹಶೀಲ್ದಾರ್ ಶೋಭಿತಾ ದೇವಾಲಯದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಭಾನುವಾರ ನಗರದ ಪ್ರಮುಖ ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.